ಕರ್ನಾಟಕ

karnataka

ಹಿರಣ್ಯಕೇಶಿ ನದಿ ಪ್ರವಾಹ ‌ಅವಾಂತರ: ಸಂತ್ರಸ್ತರಿಗೆ ಮನೆ ನಿರ್ಮಿಸುವುದಾಗಿ ಸಿಎಂ ಅಭಯ

By

Published : Jul 25, 2021, 12:35 PM IST

Updated : Jul 25, 2021, 1:39 PM IST

ಪ್ರವಾಹದಿಂದ ಹಾನಿಗೊಳಗಾದ ಸಂಕೇಶ್ವರ ಪಟ್ಟಣದ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

CM BS Yediyurappa
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬೆಳಗಾವಿ: ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಿರಣ್ಯಕೇಶಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನದಿಪಾತ್ರದ ಮನೆಗಳು ಮುಳುಗಡೆಯಾಗಿದ್ದು, ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ‌ಮಾಡಲಾಗಿದೆ. ಈ ಹಿನ್ನೆಲೆ ಸಿಎಂ ಯಡಿಯೂರಪ್ಪ ಇಂದು ಪರಿಶೀಲನೆ ನಡೆಸಿ ಜನರಿಗೆ ಭದ್ರತೆಯ ಭರವಸೆ ನೀಡಿದ್ದಾರೆ.

ಶಾಶ್ವತ ಪರಿಹಾರದ ಅಭಯ

ಸಂಕೇಶ್ವರ ಪಟ್ಟಣದಲ್ಲಿ ಪ್ರತಿವರ್ಷ ಪ್ರವಾಹದಿಂದ ಬಾಧಿತಗೊಳ್ಳುವ ಮನೆಗಳ ಶಾಶ್ವತ ಸ್ಥಳಾಂತರಕ್ಕೆ ಐವತ್ತು ಎಕರೆ ಭೂಮಿ‌ ಲಭ್ಯವಿದೆ. ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ. ಮೂರ್ನಾಲ್ಕು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದು ಜನರಿಗೆ ಸಂಕಷ್ಟವಾಗಿದೆ. ಸಂಕಷ್ಟಕ್ಕೆ ಒಳಗಾದ ಜನರಿಗೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ಸಂಕೇಶ್ವರ ಪಟ್ಟಣಕ್ಕೆ ಭೇಟಿ ನೀಡಿದ ಸಿಎಂ ಬಿಎಸ್‌ವೈ

ಮಳೆ ನಿಂತ ಬಳಿಕ ಮನೆ ಮನೆ ಸಮೀಕ್ಷೆ ಕೈಗೊಂಡು ನಂತರ ಸೂಕ್ತ ಪರಿಹಾರವನ್ನು ನೀಡಲಾಗುವುದು. ತಾತ್ಕಾಲಿಕವಾಗಿ ಆರಂಭಿಸಲಾಗಿರುವ ಕಾಳಜಿ ಕೇಂದ್ರಗಳಲ್ಲಿ ಊಟೋಪಹಾರ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಜನರು ಭಯ ಪಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಜತೆಗಿದೆ ಎಂದು ಅಭಯ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್​, ಸಂತ್ರಸ್ತರಿಗೆ ಎನ್.ಡಿ.ಆರ್.ಎಫ್.‌ಅಡಿ‌ ಪರಿಹಾರ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಎಲ್ಲರಿಗೂ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಜಲಾವೃತ ಪ್ರದೇಶಕ್ಕೆ ಭೇಟಿ:

ನೆರೆಯ ಮಹಾರಾಷ್ಟ್ರ ರಾಜ್ಯ ಹಾಗೂ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವ್ಯಾಪಕ ಮಳೆಯಾದ ಪರಿಣಾಮ ಹಿರಣ್ಯಕೇಶಿ, ಕೃಷ್ಣಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ ಸೇರಿದಂತೆ ಜಿಲ್ಲೆಯ ಸಪ್ತ ನದಿಗಳಲ್ಲಿ ಹಾಗೂ ಬೆಳಗಾವಿ ಸಮೀಪದ ಬಳ್ಳಾರಿ ನಾಲಾಗಳಲ್ಲಿ ನೀರಿನ ಹರಿವು ಹೆಚ್ಚಳಗೊಂಡು ಅಕ್ಕಪಕ್ಕದ ಕೆಲ ಗ್ರಾಮಗಳು ಜಲಾವೃತಗೊಂಡಿವೆ. ಹಿರಣ್ಯಕೇಶಿ ನದಿತೀರದಲ್ಲಿರುವ ಸಂಕೇಶ್ವರ ಪಟ್ಟಣದ ಮಠಗಲ್ಲಿ, ಕುಂಬಾರ ಓಣಿ ಹಾಗೂ ನದಿಗಲ್ಲಿಯ ಬಳಿಯ ಮುಳುಗಡೆ ಪ್ರದೇಶಗಳನ್ನು ಮುಖ್ಯಮಂತ್ರಿಗಳು ವೀಕ್ಷಿಸಿದರು. ಇದಾದ ಬಳಿಕ ಶಂಕರಲಿಂಗ ಕಾರ್ಯಾಲಯದಲ್ಲಿ ಆರಂಭಿಸಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದರು. ನಂತರ ಬಳಿಕ ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿ ಗ್ರಾಮದ ಬಳಿ ಅತಿವೃಷ್ಟಿಯಿಂದ ಮುಳುಗಡೆಯಾಗಿರುವ ರಾಷ್ಟ್ರೀಯ ಹೆದ್ದಾರಿ-4 ಅನ್ನು ಸಿಎಂ ಪರಿಶೀಲಿಸಿದರು.

Last Updated : Jul 25, 2021, 1:39 PM IST

ABOUT THE AUTHOR

...view details