ಕರ್ನಾಟಕ

karnataka

ಸೋಲಾರ್ ಫಲಕಗಳ ಬೆಲೆ ಇಳಿಕೆ ಹೊಸ ಯೋಜನೆಗಳಿಗೆ ಲಾಭಕರ: ಕ್ರಿಸಿಲ್ ವರದಿ

By ETV Bharat Karnataka Team

Published : Nov 21, 2023, 5:48 PM IST

ಸೋಲಾರ್ ಫಲಕಗಳ ಬೆಲೆ ಕಡಿಮೆಯಾಗುತ್ತಿರುವುದರಿಂದ ಸೋಲಾರ್​ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗಲಿದೆ ಎಂದು ಕ್ರಿಸಿಲ್ ವರದಿ ತಿಳಿಸಿದೆ.

New solar projects poised for big gain as module prices fall: CRISIL report
New solar projects poised for big gain as module prices fall: CRISIL report

ನವದೆಹಲಿ:ಅಕ್ಟೋಬರ್ 2022 ರಿಂದ ಸೋಲಾರ್ ಫಲಕಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿರುವುದರಿಂದ 2021ರ ಆರ್ಥಿಕ ವರ್ಷದಿಂದ ಜಾರಿಗೊಳಿಸಲಾದ 45 ಗಿಗಾವ್ಯಾಟ್ ಯುಟಿಲಿಟಿ - ಸ್ಕೇಲ್ ಸೋಲಾರ್ ಯೋಜನೆಗಳ ಆಂತರಿಕ ರಿಟರ್ನ್ ದರ (ಐಆರ್​ಆರ್​) ಹೆಚ್ಚಾಗಲಿದೆ ಮತ್ತು ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಸೋಲಾರ್ ವ್ಯವಸ್ಥೆಯ ಅಳವಡಿಕೆ ವೇಗವನ್ನು ವಾರ್ಷಿಕ ಗರಿಷ್ಠ 16 ಗಿಗಾವ್ಯಾಟ್​ಗೆ ಹೆಚ್ಚಿಸಲಿದೆ ಎಂದು ಮಂಗಳವಾರ ಬಿಡುಗಡೆಯಾದ ಕ್ರಿಸಿಲ್ ವರದಿ ಹೇಳಿದೆ.

ಕೋವಿಡ್ -19 ಸಾಂಕ್ರಾಮಿಕದ ಕಾರಣದಿಂದ ಮತ್ತು ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯನ್ನು ರಕ್ಷಿಸುವ ಯೋಜನೆಯ ಅಡೆತಡೆಗಳಿಂದ 2021-2022 ಮತ್ತು 2022-2023 ರಲ್ಲಿ ಸೋಲಾರ್ ಅನುಷ್ಠಾನ ನಿಧಾನಗೊಂಡಿತ್ತು. ಅಲ್ಲದೇ ಸೋಲಾರ್ ಫಲಕಗಳ ಬೆಲೆ ಏರಿಕೆಯೂ ಈ ನಿಧಾನಗತಿಗೆ ಕಾರಣವಾಗಿತ್ತು ಎಂದು ಕ್ರಿಸಿಲ್ ವರದಿ ಗಮನ ಸೆಳೆದಿದೆ.

ಈಗ ಸೋಲಾರ್ ಫಲಕಗಳ ಬೆಲೆಗಳು ಮತ್ತೆ ಕಡಿಮೆಯಾಗುತ್ತಿರುವುದರಿಂದ, ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟತೆ ಸಿಕ್ಕಿರುವುದರಿಂದ ಮತ್ತು ಕೊರೊನಾ ಸಮಸ್ಯೆಗಳು ಅಂತ್ಯವಾಗಿರುವುದರಿಂದ ಸೋಲಾರ್ ಯೋಜನೆಗಳ ಅನುಷ್ಠಾನವು 2025 - 2026 ರ ವೇಳೆಗೆ ತ್ವರಿತಗೊಳ್ಳುವ ನಿರೀಕ್ಷೆಯಿದೆ ಎಂದು ಕ್ರಿಸಿಲ್ ವರದಿ ತಿಳಿಸಿದೆ.

"ವೇಳಾಪಟ್ಟಿ ಪ್ರಕಾರ ಅನುಷ್ಠಾನಗೊಂಡರೆ 2021 ಮತ್ತು 2022 ರ ಹಣಕಾಸು ವರ್ಷಗಳಲ್ಲಿ ಹರಾಜು ಮಾಡಲಾದ 20 ಗಿಗಾವ್ಯಾಟ್ ಯೋಜನೆಗಳ ಸರಾಸರಿ ಐಆರ್​ಆರ್ ಶೇಕಡಾ 5ಕ್ಕೆ ಇಳಿಯಬಹುದು. ಅಲ್ಲದೇ ಕೊರೊನಾ ಕಾರಣದಿಂದ ಈ ಯೋಜನೆಗಳ ಅನುಷ್ಠಾನ ಅವಧಿಯನ್ನು ವಿಸ್ತರಿಸಿದ್ದರಿಂದ ಫಲಕಗಳ ಖರೀದಿ ಮುಂದೂಡಲು ಡೆವಲಪರ್​ಗಳಿಗೆ ಸಾಧ್ಯವಾಯಿತು" ಎಂದು ಕ್ರಿಸಿಲ್ ರೇಟಿಂಗ್ಸ್ ನಿರ್ದೇಶಕ ಅಂಕಿತ್ ಹಖು ಹೇಳಿದರು.

ಕಳೆದ ಹಣಕಾಸು ವರ್ಷದ ಸರಾಸರಿಗೆ ಹೋಲಿಸಿದರೆ ಸೆಪ್ಟೆಂಬರ್ 2023 ರ ವೇಳೆಗೆ ಫಲಕಗಳ ಬೆಲೆಗಳು ಶೇಕಡಾ 30 ರಷ್ಟು ಕಡಿಮೆಯಾಗಿವೆ. ಇದರಿಂದ ಯೋಜನೆಗಳ ಐಆರ್​ಆರ್​ಗಳು ಸರಾಸರಿ 300-500 ಬೇಸಿಸ್ ಪಾಯಿಂಟ್​ ಅಥವಾ (ಬಿಪಿಎಸ್) ಶೇಕಡಾ 9 ರಷ್ಟು ಸುಧಾರಿಸಬಹುದು ಎಂದು ಕ್ರಿಸಿಲ್ ವರದಿ ಮಾಹಿತಿ ನೀಡಿದೆ.

ದ್ಯುತಿವಿದ್ಯುಜ್ಜನಕ (ಪಿವಿ) ಕೋಶಗಳು ಅಥವಾ ಸೌರ ಕೋಶಗಳನ್ನು ಒಟ್ಟಿಗೆ ಸಂಪರ್ಕಿಸುವ ಮೂಲಕ ಸೌರ ಪಿವಿ ಫಲಕಗಳನ್ನು ತಯಾರಿಸಲಾಗುತ್ತದೆ. ಅವುಗಳನ್ನು ಸ್ಫಟಿಕ ಸಿಲಿಕಾನ್​ನಂಥ ಸೆಮಿಕಂಡಕ್ಟರ್ ವಸ್ತುಗಳಿಂದ ತಯಾರಿಸಲಾಗುತ್ತದೆ. ಸೋಲಾರ್ ಫಲಕಗಳು ಸೂರ್ಯನ ಬಿಸಿಲನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತವೆ. ಹೀಗೆ ಉತ್ಪತ್ತಿಯಾಗುವ ವಿದ್ಯುತ್ ಶಕ್ತಿಯನ್ನು ವಸತಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಬೆಳಗಿಸಲು ಬಳಸಲಾಗುತ್ತದೆ.

ಇದನ್ನೂ ಓದಿ :ಕ್ರಿಪ್ಟೋ ಸ್ಟಾರ್ಟಪ್​ಗಳಿಗೆ ಹೂಡಿಕೆ ಕೊರತೆ: ಶೇ 80ರಷ್ಟು ಫಂಡಿಂಗ್ ಕುಸಿತ

ABOUT THE AUTHOR

...view details