ಕರ್ನಾಟಕ

karnataka

ಒಡಿಶಾ ರೈಲು ದುರಂತ: ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣದ ಭರವಸೆ ನೀಡಿದ ವೀರೇಂದ್ರ ಸೆಹ್ವಾಗ್

By

Published : Jun 5, 2023, 11:39 AM IST

ಒಡಿಶಾ ರೈಲು ದುರಂತದಲ್ಲಿ ಪ್ರಾಣ ಕಳೆದುಕೊಂಡ ಮೃತರ ಮಕ್ಕಳಿಗೆ ಉಚಿತ ಶಿಕ್ಷಣದ ಭರವಸೆಯನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನೀಡಿದ್ದಾರೆ.

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್

ನವದೆಹಲಿ:ಒಡಿಶಾದ ಬಾಲಸೋರ್​ ಜಿಲ್ಲೆಯಲ್ಲಿ ನಡೆದ ತ್ರಿವಳಿ ರೈಲು ಅಪಘಾತವು ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಒಂದಾಗಿದೆ. ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು - ಹೌರಾ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಈ ದುರಂತಕ್ಕೆ ಕಾರಣವಾಗಿವೆ. ಭಾರತೀಯ ರೈಲ್ವೆ ಇತಿಹಾಸದಲ್ಲೇ ನಾಲ್ಕನೇ ಭೀಕರ ದುರಂತದಲ್ಲಿ ಇದುವರೆಗೆ 275 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರೆ, 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದೀಗ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಮೃತರ ಮಕ್ಕಳಿಗೆ ಉಚಿತ ಶಿಕ್ಷಣದ ಭರವಸೆ ನೀಡಿದ್ದಾರೆ. ಒಡಿಶಾ ರೈಲು ದುರಂತದ ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಘೋಷಿಸಿದ್ದು, ಇಂಟರ್‌ನ್ಯಾಷನಲ್ ಸ್ಕೂಲ್‌ನ ಬೋರ್ಡಿಂಗ್ ಸೌಲಭ್ಯದಲ್ಲಿ ಉಚಿತ ಶಿಕ್ಷಣ ನೀಡಲಿದ್ದಾರೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪೋಸ್ಟ್​ನಲ್ಲಿ ಅವರು 'ಈ ಅಪಘಾತದ ನೋವಿನ ಚಿತ್ರವು ದೀರ್ಘಕಾಲ ನಮ್ಮನ್ನು ಕಾಡುತ್ತದೆ. ಈ ದುಃಖದ ಸಮಯದಲ್ಲಿ, ಈ ನೋವಿನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಮಕ್ಕಳ ಶಿಕ್ಷಣದ ಕಾಳಜಿಯನ್ನು ನಾನು ಮಾಡಬಲ್ಲೆ. ಅಂತಹ ಮಕ್ಕಳಿಗೆ ಸೆಹ್ವಾಗ್​ ಇಂಟರ್‌ನ್ಯಾಷನಲ್ ಸ್ಕೂಲ್‌ನ ಬೋರ್ಡಿಂಗ್ ಸೌಲಭ್ಯದಲ್ಲಿ ಉಚಿತ ಶಿಕ್ಷಣ ನೀಡುತ್ತೇನೆ. ಈ ಮೂಲಕ ಮೃತರ ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸುವ ಬಗ್ಗೆ ಸೆಹ್ವಾಗ್ ಮಾತನಾಡಿದ್ದಾರೆ.

ಇದರೊಂದಿಗೆ, ಮತ್ತೊಂದು ಟ್ವೀಟ್ ಮೂಲಕ, ಈ ಅಪಘಾತದ ನಂತರ ರಕ್ಷಣಾ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಕೊಡುಗೆ ನೀಡಿದ ಎಲ್ಲ ಮಹಿಳೆಯರು ಮತ್ತು ಪುರುಷರಿಗೆ ಅವರು ಕೃತಜ್ಞತೆ ತಿಳಿಸಿದ್ದಾರೆ. ಇದೇ ವೇಳೆ, ಕೆಲವರು ಸ್ವಯಂ ಪ್ರೇರಿತರಾಗಿ ವೈದ್ಯಕೀಯ ತಂಡವನ್ನು ಸಂಪರ್ಕಿಸಿ ರಕ್ತದಾನ ಮಾಡಿ ರಕ್ತದಾನ ಮಾಡುವ ಮೂಲಕ ಕರ್ತವ್ಯ ನಿರ್ವಹಿಸಿದವರಿಗೂ ಅಭಿನಂದಿಸಿದ್ದಾರೆ. ನಾವು ನಿಮ್ಮೊಂದಿಗಿದ್ದೇವೆ ಎಂದು ಹೇಳಿದ್ದಾರೆ.

ಅದಾನಿ ಸಂಸ್ಥೆಯಿಂದಲೂ ಮಕ್ಕಳ ಶಾಲ ಶಿಕ್ಷಣದ ಜವಾಬ್ದಾರಿ:ಒಡಿಶಾ ರೈಲು ಅಪಘಾತದ ಸುದ್ದಿಯಿಂದ ತಾನು ತೀವ್ರ ದುಃಖಿತನಾಗಿದ್ದೇನೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಶಕ್ತಿಯನ್ನು ನೀಡುವುದು ಮತ್ತು ಮಕ್ಕಳಿಗೆ ಉತ್ತಮ ನಾಳೆಗಳನ್ನು ಒದಗಿಸುವುದು ನಮ್ಮೆಲ್ಲರ ಜಂಟಿ ಜವಾಬ್ದಾರಿಯಾಗಿದೆ ಎಂದು ಗೌತಮ್ ಅದಾನಿ ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಅಲ್ಲದೇ, ಈ ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಸಮೂಹವು ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಇನ್ನು ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳ ಪರಿಹಾರವನ್ನು ಘೋಷಿಸಲಾಗಿದೆ. ಮತ್ತೊಂದೆಡೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಮೃತರ ಸಂಬಂಧಿಕರಿಗೆ ತಲಾ ಹತ್ತು ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ ತಲಾ ಎರಡು ಲಕ್ಷ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.

ಇದನ್ನೂ ಓದಿ:ಬಾಲಸೋರ್ ರೈಲು ದುರಂತ ಸ್ಥಳದ ಇಂದಿನ ವೈಮಾನಿಕ ದೃಶ್ಯ

ABOUT THE AUTHOR

...view details