ಗೋರಖ್ಪುರ್(ಉತ್ತರ ಪ್ರದೇಶ): ಐದು ಸಲ ಲೋಕಸಭೆ ಸಂಸದರಾಗಿ ಗೋರಖ್ಪುರ ಕ್ಷೇತ್ರ ಪ್ರತಿನಿಧಿಸಿರುವ ಯೋಗಿ ಆದಿತ್ಯನಾಥ್ ಇದೇ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ ಬಯಸಿ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ಮೊದಲ ಸ್ಪರ್ಧೆಯಲ್ಲೇ ಉತ್ತರ ಪ್ರದೇಶ ಸಿಎಂ ಭಾರಿ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಗೋರಖ್ಪುರ್ ನಗರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದ ಯೋಗಿ ಆದಿತ್ಯನಾಥ್ ತಮ್ಮ ಎದುರಾಳಿಗಳ ವಿರುದ್ಧ 1,02,399 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ಇದನ್ನೂ ಓದಿ:ಕೇಂದ್ರ ಸಚಿವರ ಪುತ್ರನ ಕಾರು ಹರಿದು ಹಿಂಸಾಚಾರಕ್ಕೆ ಕಾರಣವಾದ ಲಖೀಂಪುರದಲ್ಲಿ ಎಲ್ಲ ಕ್ಷೇತ್ರ ಗೆದ್ದ ಬಿಜೆಪಿ!
ಗೋರಖ್ಪುರ ನಗರ ಕ್ಷೇತ್ರ ಬಿಜೆಪಿಯ ಭದ್ರಕೋಟೆ. 1967ರ ಬಳಿಕ ನಡೆದ ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ (ಆಗ ಭಾರತೀಯ ಜನಸಂಘ) ಸೋಲು ಕಂಡಿದ್ದೇ ಇಲ್ಲ. ಈ ಹಿಂದಿನ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿಯ (2002, 2007, 2012 ಮತ್ತು 2017) ರಾಧಾ ಮೋಹನ್ ದಾಸ್ ಅಗರ್ವಾಲ್ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಈ ಬಾರಿ ಗೋರಖ್ಪುರದಲ್ಲಿ ಯೋಗಿ ಅವರನ್ನು ಕಣಕ್ಕಿಳಿಸುವ ಮೂಲಕ ಗೋರಖ್ಪುರ-ಬಸ್ತಿ ವ್ಯಾಪ್ತಿಯ 41 ಕ್ಷೇತ್ರಗಳಲ್ಲೂ ವಿಜಯಪತಾಕೆ ಹಾರಿಸುವುದು ಬಿಜೆಪಿಯ ಉದ್ದೇಶವಾಗಿತ್ತು.
2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 41 ಸೀಟುಗಳ ಪೈಕಿ ಬಿಜೆಪಿ 38ರಲ್ಲಿ ಬಿಜೆಪಿ ಗೆಲುವು ಪಡೆದಿದೆ. ಗೋರಖ್ಪುರ ಜಿಲ್ಲೆಯ 9 ಕ್ಷೇತ್ರಗಳ ಪೈಕಿ 8ರಲ್ಲಿ ಬಿಜೆಪಿ ವಿಜಯ ಸಿಕ್ಕಿತ್ತು.