ಕರ್ನಾಟಕ

karnataka

ಯುಪಿ ಚುನಾವಣೆ: 9 ಜಿಲ್ಲೆಗಳ 59 ಕ್ಷೇತ್ರಗಳಲ್ಲಿ 4ನೇ ಹಂತದ ಮತದಾನ

By

Published : Feb 23, 2022, 8:59 AM IST

ಇಂದು ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಒಟ್ಟು 59 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಮತದಾನ ಆರಂಭ
ಮತದಾನ ಆರಂಭ

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೂರು ಹಂತಗಳ ಮತದಾನ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ನಾಲ್ಕನೇ ಹಂತದ ಮತದಾನ ಇಂದು ಬೆಳಗ್ಗೆಯಿಂದ ಪ್ರಾರಂಭವಾಗಿದೆ.

ಇಂದು ನಡೆಯುತ್ತಿರುವ ಮತದಾನದಲ್ಲಿ ಪಿಲಿಭಿತ್, ಉನ್ನಾವೋ, ಲಖಿಂಪುರ ಖೇರಿ, ರಾಯ್ ಬರೇಲಿ, ಸೀತಾಪುರ್, ಬಂದಾ, ಫತೇಪುರ್, ಹರ್ದೋಯ್ ಮತ್ತು ಲಖನೌ ಜಿಲ್ಲೆಗಳ ಅಭ್ಯರ್ಥಿಗಳ ಭವಿಷ್ಯ ತಿಳಿಯಲಿದೆ. ಒಟ್ಟು 59 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಉತ್ತರ ಪ್ರದೇಶದ ಕಾನೂನು ಸಚಿವ ಬ್ರಜೇಶ್ ಪಾಠಕ್, ರಾಯ್ ಬರೇಲಿಯ ಹಾಲಿ ಶಾಸಕಿ ಅದಿತಿ ಸಿಂಗ್, ಜಾರಿ ನಿರ್ದೇಶನಾಲಯದ ಮಾಜಿ ಜಂಟಿ ನಿರ್ದೇಶಕ ರಾಜೇಶ್ವರ್ ಸಿಂಗ್ ಮತ್ತು ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಸೇರಿದಂತೆ 624 ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿಂದು ಭದ್ರವಾಗಲಿದೆ.

ನಾಲ್ಕನೇ ಹಂತದಲ್ಲಿ 9 ಜಿಲ್ಲೆಗಳಲ್ಲಿ 13,817 ಮತ ಕೇಂದ್ರಗಳನ್ನ ತೆರೆಯಲಾಗಿದ್ದು, 24,643 ಮತ ಯಂತ್ರಗಳನ್ನು ಇಡಲಾಗಿದೆ. ಸುಗಮ ಮತದಾನಕ್ಕಾಗಿ ಹಾಗೂ ಚುನಾವಣಾ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ 9 ಪೊಲೀಸ್ ವೀಕ್ಷಕರು, 57 ಸಾಮಾನ್ಯ ವೀಕ್ಷಕರು ಮತ್ತು 18 ವೆಚ್ಚ ವೀಕ್ಷಕರನ್ನು ಚುನಾವಣಾ ಆಯೋಗವು ನಿಯೋಜಿಸಿದೆ.

ಇವಿಎಂಗಳ ಸ್ಟ್ರಾಂಗ್ ರೂಂಗಳ ಭದ್ರತೆಯ ಜವಾಬ್ದಾರಿಯನ್ನು ಅರೆಸೇನಾ ಪಡೆಗಳಿಗೆ ನೀಡಲಾಗಿದೆ. ಜೊತೆಗೆ1 ಲಕ್ಷ 15 ಸಾವಿರದ 725 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈಗಾಗಲೇ ಎಲ್ಲಾ ಮತಗಟ್ಟೆಗಳ ಬಳಿ ಪೊಲೀಸ್​ ಸಿಬ್ಬಂದಿ ಆಯೋಜಿಸಲಾಗಿದ್ದು, ಹೆಚ್ಚುವರಿಯಾಗಿ 7,022 ಇನ್ಸ್‌ಪೆಕ್ಟರ್‌ಗಳು ಮತ್ತು ಸಬ್ ಇನ್‌ಸ್ಪೆಕ್ಟರ್‌ಗಳು ಹಾಗೂ 58,132 ಹೆಡ್ ಕಾನ್ಸ್​ಟೇಬಲ್‌ಗಳು ಮತ್ತು ಕಾನ್ಸ್​ಟೇಬಲ್‌ಗಳನ್ನು ನಿಯೋಜಿಸಲಾಗುವುದು.

ಲಖಿಂಪುರ ಖೇರಿಯಲ್ಲಿ ಜೀಪು ಹರಿಸಿ ರೈತರ ಹತ್ಯೆಯ ಆರೋಪ ಹೊತ್ತಿರುವ ಆಶಿಶ್‌ ಮಿಶ್ರಾ ಅವರ ತಂದೆ, ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪ್ರಭಾವ ಎಷ್ಟಿದೆ ಎಂಬುದು ಸ್ಪಷ್ಟವಾಗಲಿದೆ. ಹತ್ಯೆ ಪ್ರಕರಣವು ರೈತರಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನೊಂದೆಡೆ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುವ ರಾಯ್​ ಬರೇಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಮತದಾನ ನಡೆಯುತ್ತಿದೆ. ಮಾ.10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ABOUT THE AUTHOR

...view details