ಕರ್ನಾಟಕ

karnataka

ಉಪ ಪೊಲೀಸ್ ವರಿಷ್ಠಾಧಿಕಾರಿಯ ಪತ್ನಿ ಕೊಲೆ: ಮಗನಿಂದಲೇ ಹತ್ಯೆ ಶಂಕೆ

By ETV Bharat Karnataka Team

Published : Nov 18, 2023, 9:09 PM IST

Deputy SP Wife Murdered in Dehradun: ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯ ಪತ್ನಿಯನ್ನು ಹರಿತವಾದ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

UP Moradabad Deputy SP Malkhan Singh wife murder in Dehradun son accused of murder
ಉಪ ಪೊಲೀಸ್ ವರಿಷ್ಠಾಧಿಕಾರಿಯ ಪತ್ನಿ ಕೊಲೆ: ಮಗನಿಂದಲೇ ಹತ್ಯೆ ಶಂಕೆ

ಡೆಹ್ರಾಡೂನ್ (ಉತ್ತರಾಖಂಡ): ಉಪ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರ ಪತ್ನಿಯ ಕೊಲೆ ಪ್ರಕರಣವು ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನಲ್ಲಿ ಸಂಚಲನ ಮೂಡಿಸಿದೆ. ಮನೆಯಲ್ಲಿ ಮಹಿಳೆಯ ಶವ ರಕ್ತದಲ್ಲಿ ಮಡುವಿನಲ್ಲಿ ಪತ್ತೆಯಾಗಿದ್ದು, ಸ್ವತಃ ಮಗನೇ ಹೆತ್ತ ತಾಯಿಯನ್ನು ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಉಪ ಪೊಲೀಸ್ ವರಿಷ್ಠಾಧಿಕಾರಿ ಮಲ್ಖಾನ್ ಸಿಂಗ್ ಅವರ ಪತ್ನಿ ಬಬಿತಾ ರಾಣಿ (55) ಕೊಲೆಗೀಡಾದವರು. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಮಲ್ಖಾನ್ ಸಿಂಗ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ದಂಪತಿಗೆ ಇಬ್ಬರು ಪುತ್ರರು ಇದ್ದಾರೆ. ಬಬಿತಾ ರಾಣಿ ಮತ್ತು ಮಗ ಆದಿತ್ಯ ಡೆಹ್ರಾಡೂನ್‌ನಲ್ಲಿ ವಾಸಿಸುತ್ತಿದ್ದರೆ, ಇನ್ನೊಬ್ಬ ಮಗ ದೆಹಲಿಯಲ್ಲಿ ಕೆಲಸ ಮಾಡುತ್ತಾರೆ. ಮಗ ಆದಿತ್ಯನೇ ತಾಯಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ರಕ್ತದಲ್ಲಿ ಮಡುವಿನಲ್ಲಿ ಶವ ಪತ್ತೆ: ಬಬಿತಾ ರಾಣಿ ಅವರನ್ನು ಹರಿತವಾದ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಮನೆಯಲ್ಲಿ ಅವರು ಮೃತದೇಹವು ರಕ್ತದಲ್ಲಿ ತೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಡೆಹ್ರಾಡೂನ್ ಎಸ್‌ಎಸ್‌ಪಿ ಅಜಯ್ ಸಿಂಗ್ ಹಾಗೂ ಪೊಲೀಸ್​ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಯಿಯ ಹತ್ಯೆಯ ನಂತರ ಆರೋಪಿ ಆದಿತ್ಯ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೊಂದೆಡೆ, ಆರೋಪಿಯ ಮಾನಸಿಕ ಸ್ಥಿತಿ ಸರಿಯಿಲ್ಲ. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ. ಆದರೆ, ಅರ್ಧಕ್ಕೆ ವಿದ್ಯಾಭ್ಯಾಸ ಬಿಟ್ಟು ಮನೆಗೆ ಬಂದಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ.

ತಾಯಿಯೇ ನನಗೆ ಊಟ ಹಾಕುತ್ತಿದ್ದರು - ಆರೋಪಿ ಮಗ:ಮೊರಾದಾಬಾದ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಲ್ಖಾನ್ ಸಿಂಗ್ ಬೆಳಗ್ಗೆ ತಮ್ಮ ಮನೆಗೆ ಕರೆ ಮಾಡಿದ್ದರು. ಆದರೆ, ಯಾರೂ ಫೋನ್ ಎತ್ತದಿದ್ದಾಗ, ಅವರೇ ಮೊರಾದಾಬಾದ್‌ನಿಂದ ಡೆಹ್ರಾಡೂನ್​ಗೆ ಪ್ರಯಾಣ ಬೆಳೆಸಿದರು. ಅಲ್ಲದೇ, ಏನಾದರೂ ಅಹಿತಕರ ಘಟನೆ ಸಂಭವಿಸಿರುವ ಭಯದಿಂದಲೇ ಮಲ್ಖಾನ್ ಸಿಂಗ್ ಅವರೇ ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದರು. ಮಲ್ಖಾನ್ ಸಿಂಗ್​ ತಮ್ಮ ಮನೆಗೆ ತಲುಪಿದಾಗ ಪತ್ನಿ ಬಬಿತಾ ರಾಣಿ ಮೃತದೇಹವು ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿದಾಗ ಆರೋಪಿ ಆದಿತ್ಯ, ನನ್ನ ಆರೋಗ್ಯ ಚೆನ್ನಾಗಿಲ್ಲ, ತಾಯಿಯೇ ನನಗೆ ಊಟ ಹಾಕುತ್ತಿದ್ದರು ಎಂಬುವುದಾಗಿ ಹೇಳಿಕೊಂಡಿದ್ದಾನೆ. ಶುಕ್ರವಾರ ಸಂಜೆ ಪತ್ನಿ ಬಬಿತಾ ರಾಣಿ ಜತೆ ಫೋನ್‌ನಲ್ಲಿ ಮಾತನಾಡಿದ್ದೆ. ಮಗ ಆದಿತ್ಯ ತನಗೆ ಥಳಿಸಿದ್ದಾನೆ ಎಂದು ಬಬಿತಾ ಹೇಳಿದ್ದಾಗಿ ಮಲ್ಖಾನ್ ಸಿಂಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 2001-02ರಲ್ಲಿ ಡೆಹ್ರಾಡೂನ್‌ನಲ್ಲಿ ಕಾರ್ಯ ನಿರ್ವಹಿಸಿದ್ದ ಇವರು 2007ರಲ್ಲಿ ಉತ್ತರ ಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.

ಇದನ್ನೂ ಓದಿ:ಟಿಪ್ಪರ್ ಅಡ್ಡಗಟ್ಟಿದ ರೈತರ ಮೇಲೆ ಮಾರಣಾಂತಿಕ ಹಲ್ಲೆ: ಓರ್ವ ಪೊಲೀಸ್​ ವಶಕ್ಕೆ

ABOUT THE AUTHOR

...view details