ವಾರಾಣಸಿ(ಉತ್ತರಪ್ರದೇಶ): ವಾರಾಣಸಿ ಜಿಲ್ಲೆಯ ಭೇಲುಪುರ್ ಪ್ರದೇಶದಲ್ಲಿ ಗುಜರಾತ್ ಮೂಲದ ಉದ್ಯಮಿಯೊಬ್ಬರ 1.4 ಕೋಟಿ ರೂಪಾಯಿ ದರೋಡೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಏಳು ಪೊಲೀಸರನ್ನು ವಜಾಗೊಳಿಸಿ ಆದೇಶಿಸಿದೆ.
ಔರೈಯಾ ಜಿಲ್ಲೆಯಲ್ಲಿ ಬಂದಾ ಮೂಲದ ಉದ್ಯಮಿಯನ್ನು ಅಪಹರಿಸಿ ದರೋಡೆ ಮಾಡಿದ ಆರೋಪದಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಆರು ಜನರನ್ನು ಬಂಧಿಸಿದ ಎರಡು ದಿನಗಳ ನಂತರ ಉತ್ತರ ಪ್ರದೇಶ ಪೊಲೀಸ್ ಇಲಾಖೆ ತನಿಖೆ ನಡೆಸಿ ಈ ಕಠಿಣ ಕ್ರಮ ಕೈಗೊಂಡಿದೆ.
ಸೇವೆಯಿಂದ ವಜಾಗೊಂಡ ಏಳು ಪೊಲೀಸರಲ್ಲಿ ಒಬ್ಬ ಸ್ಟೇಷನ್ ಹೌಸ್ ಆಫೀಸರ್ ಮತ್ತು ಮೂವರು ಸಬ್ ಇನ್ಸ್‌ಪೆಕ್ಟರ್‌ಗಳು, ಎಸ್‌ಎಚ್‌ಒ ರಮಾ ಕಾಂತ್ ದುಬೆ, ಸಬ್ - ಇನ್‌ಸ್ಪೆಕ್ಟರ್‌ಗಳಾದ ಸುಶೀಲ್ ಕುಮಾರ್, ಮಹೇಶ್ ಕುಮಾರ್ ಮತ್ತು ಉತ್ಕರ್ಷ್ ಚತುರ್ವೇದಿ, ಮತ್ತು ಕಾನ್‌ಸ್ಟೆಬಲ್‌ಗಳಾದ ಮಹೇಂದ್ರ ಕುಮಾರ್ ಪಟೇಲ್, ಕಪಿಲ್ ದೇವ್ ಪಾಂಡೆ ಮತ್ತು ಶಿವಚಂದ್ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ. ಎಲ್ಲರನ್ನೂ ವಾರಾಣಸಿ ಜಿಲ್ಲೆಯ ಭೇಲುಪುರ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು.
1.4 ಕೋಟಿ ದರೋಡೆ ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ. ಮತ್ತು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ವಜಾಗೊಂಡ ಏಳು ಪೊಲೀಸರನ್ನು ತನಿಖಾಧಿಕಾರಿಗಳು ಇನ್ನೂ ಬಂಧಿಸಿಲ್ಲ.
ಹೆಚ್ಚುವರಿ ಪೊಲೀಸ್ ಕಮಿಷನರ್ (ವಾರಾಣಸಿ), ಸಂತೋಷ್ ಕುಮಾರ್ ಸಿಂಗ್ ಈ ಪ್ರಕರಣದ ಬಗ್ಗೆ ಮಾತನಾಡಿದ್ದು, "ಏಳು ಪೊಲೀಸರನ್ನು ಪ್ರಕರಣ ಸಂಬಂಧ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಅಮಾನತು ಮಾಡಲಾಗಿತ್ತು. ಬಳಿಕ ನಡೆದ ತನಿಖೆಯ ಸಮಯದಲ್ಲಿ ಅವರು ಅಪರಾಧ ಚಟುವಟಿಕೆಯಲ್ಲಿ ತೊಡಗಿರುವುದು ಕಂಡುಬಂದಿತ್ತು. ಹೀಗಾಗಿ ಅವರನ್ನೆಲ್ಲ ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿದೆ. ಇನ್ನು ದರೋಡೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಸಂಗ್ರಹಿಸಿದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು‘‘ ಎಂದು ತಿಳಿಸಿದ್ದಾರೆ.
ಮೇ 31 ರಂದು ವಾರಾಣಸಿ ಪೊಲೀಸರು ಭೇಲುಪುರ್ ಪ್ರದೇಶದಲ್ಲಿ ಕಾರಿನಿಂದ 92.94 ಲಕ್ಷ ರೂ. ಗಳನ್ನ ವಶಕ್ಕೆ ಪಡೆದುಕೊಂಡಿದ್ದರು. ಅವ್ಯವಹಾರದ ಶಂಕೆ ವ್ಯಕ್ತಪಡಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆಯ ಬಗ್ಗೆ ಪ್ರಾಥಮಿಕ ತನಿಖೆಗೆ ಆದೇಶ ನೀಡಿದ್ದರು. ತನಿಖೆಯ ವೇಳೆ, ಮೇ 27 ರಂದು, ಭೇಲುಪುರದ ಬಾಡಿಗೆ ಫ್ಲಾಟ್‌ನಲ್ಲಿ ವಾಸವಾಗಿದ್ದ ಗುಜರಾತ್ ಮೂಲದ ಉದ್ಯಮಿಯ ಉದ್ಯೋಗಿಯೊಬ್ಬರನ್ನು ದರೋಡೆ ಮಾಡಿರುವುದು ಪೊಲೀಸರಿಗೆ ತನಿಖೆ ವೇಳೆ ಬಯಲಾಗಿತ್ತು.
ತನಿಖೆಯಲ್ಲಿ ತಿಳಿದು ಬಂದ ಅಂಶಗಳ ಆಧಾರದ ಮೇಲೆ, ಪೊಲೀಸರು ಗುಜರಾತ್ ಮೂಲದ ಉದ್ಯಮಿ ಮತ್ತು ಅವರ ಸಿಬ್ಬಂದಿಯನ್ನು ಸಂಪರ್ಕಿಸಿದ್ದು, ವಶಪಡಿಸಿಕೊಂಡ ನಗದು ಮೇ 27 ರಂದು ಬಾಡಿಗೆ ಫ್ಲಾಟ್‌ನಿಂದ ಲೂಟಿ ಮಾಡಿದ ಹಣದ ಭಾಗ ಎಂದು ಖಚಿತಪಡಿಸಿಕೊಳ್ಳಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.
ಇದನ್ನೂ ಓದಿ:NCP ನಾಯಕ ಶರದ್ ಪವಾರ್ಗೆ ಜೀವ ಬೆದರಿಕೆ: ಐಟಿ ಉದ್ಯೋಗಿಯ ಬಂಧನ