ಕರ್ನಾಟಕ

karnataka

ಜಮ್ಮು ಕಾಶ್ಮೀರದಲ್ಲಿ ನಿರುದ್ಯೋಗ ದರ ಶೇ.5.2 ರಿಂದ 4ಕ್ಕೆ ಇಳಿಕೆ: ಸಮೀಕ್ಷೆಯಲ್ಲಿ ಮಾಹಿತಿ ಬಹಿರಂಗ

By ETV Bharat Karnataka Team

Published : Nov 22, 2023, 9:16 PM IST

ಭಯೋತ್ಪಾದನೆಯ ತವರಾದ ಜಮ್ಮು ಕಾಶ್ಮೀರದಲ್ಲಿ ನಿರುದ್ಯೋಗ ದರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಯುವಕರು ಬಂದೂಕು ಬಿಟ್ಟು ಕೆಲಸಕ್ಕೆ ಸೇರುತ್ತಿದ್ದಾರೆ.

ಕಾಶ್ಮೀರದಲ್ಲಿ ನಿರುದ್ಯೋಗ ದರ
ಕಾಶ್ಮೀರದಲ್ಲಿ ನಿರುದ್ಯೋಗ ದರ

ಶ್ರೀನಗರ, ಜಮ್ಮು ಮತ್ತು ಕಾಶ್ಮೀರ:ಸದಾ ಭಯೋತ್ಪಾದನೆ, ಉಗ್ರ ದಾಳಿಯಿಂದಲೇ ಕುಖ್ಯಾತಿಯಾಗಿರುವ ಸುಂದರ ಕಣಿವೆ ಜಮ್ಮು- ಕಾಶ್ಮೀರದಲ್ಲಿ ನಿರುದ್ಯೋಗ ದರ ಇಳಿಕೆ ಕಂಡಿದೆ ಎಂಬ ಸಂತಸದ ಸುದ್ದಿ ಹೊರಬಿದ್ದಿದೆ. 2021-22 ರಲ್ಲಿ ಇದ್ದ ಶೇಕಡಾ 5.2 ನಿರುದ್ಯೋಗ ದರ 4ಕ್ಕೆ ಇಳಿಕೆಯಾಗಿದೆ ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಕೇಂದ್ರಾಡಳಿತ ಪ್ರದೇಶದಲ್ಲಿ ನಿರುದ್ಯೋಗ ದರವು ಕಡಿಮೆಯಾಗಿದೆ. ಹಿಂದಿನ ಶೇಕಡಾ 5.2 (2021-22) ರಿಂದ ಶೇಕಡಾ 4ಕ್ಕೆ ಇಳಿದಿದೆ. ಹೆಚ್ಚಿನ ಉದ್ಯೋಗಾವಕಾಶಗಳನ್ನು ಇಲ್ಲಿ ಸೃಷ್ಟಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ದೇಶದ ಸರಾಸರಿ ನಿರುದ್ಯೋಗ ದರವಾದ ಶೇಕಡಾ 3ಕ್ಕೆ ಇಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಉದ್ಯೋಗ ಅವಲೋಕನ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ನಿರ್ದೇಶಕ (ಉದ್ಯೋಗ) ನಿಸಾರ್​ ಅಹ್ಮದ್​, ಕಣಿವೆಯಲ್ಲಿ ಪ್ರಸ್ತುತ ನಿರುದ್ಯೋಗ ದರವು 2021-22 ರ ಹಣಕಾಸು ವರ್ಷದಲ್ಲಿ ಶೇಕಡಾ 5.2 ರಿಂದ ಶೇಕಡಾ 4 ಕ್ಕೆ ಇಳಿದಿದೆ. ಉದ್ಯೋಗ ಇಲಾಖೆಯು ಇಲ್ಲಿ ಉದ್ಯೋಗ ಸೃಷ್ಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಎಲ್ಲರಿಗೂ ಅನುಕೂಲ ಮಾಡಿಕೊಡುತ್ತಿದೆ ಎಂದು ಹೇಳಿದರು.

ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಕಾರ್ಯದರ್ಶಿ ರೆಹಾನಾ ಬತುಲ್ ಮಾತನಾಡಿ, ಕೇಂದ್ರಾಡಳಿತ ಪ್ರದೇಶದಲ್ಲಿ ನಿರುದ್ಯೋಗ ದರವನ್ನು ಮತ್ತಷ್ಟು ತಗ್ಗಿಸಲು ಇಲ್ಲಿನ ಜನರಿಗೆ ಹೆಚ್ಚಿನ ಉದ್ಯೋಗ ನೀಡಬೇಕು ಎಂದು ಖಾಸಗಿ ಮತ್ತು ಸರ್ಕಾರ ಸಂಸ್ಥೆಗಳಿಗೆ ಕರೆ ನೀಡಿದರು. ಹತ್ತಕ್ಕೂ ಹೆಚ್ಚು ಇಲಾಖೆಗಳು ಉದ್ಯೋಗ ಸೃಷ್ಟಿಗಾಗಿ ಕೆಲಸ ಮಾಡುತ್ತಿವೆ. ಇದು ಮುಂದೆ ದೊಡ್ಡ ಪ್ರಮಾಣದಲ್ಲಿ ಜಾರಿಗೆ ಬರಲಿದೆ ಎಂದು ತಿಳಿಸಿದರು.

ಆಕಾಂಕ್ಷಿ ಯುವಕರಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಗುರಿಗಳನ್ನು ಸಲೀಸಾಗಿ ಪೂರೈಸುವ ಹಾದಿಯಲ್ಲಿ ಕೊರತೆಗಳು ಉಂಟಾದಲ್ಲಿ ಹಣಕಾಸು ಸಂಸ್ಥೆಯೊಂದಿಗೆ ಚರ್ಚಿಸಬಹುದು ಎಂದು ಅವರು ಹೇಳಿದರು.

ಉಗ್ರ ದಾಳಿ ಇಳಿಕೆ, ಒಳನುಸುಳುವಿಕೆ ಹೆಚ್ಚಳ:ಜಮ್ಮು ಕಾಶ್ಮೀರದಲ್ಲಿ ಉಗ್ರ ದಾಳಿ ಕಡಿಮೆಯಾದರೂ, ಪಾಕಿಸ್ತಾನ ಗಡಿಯಿಂದ ಭಯೋತ್ಪಾದಕರ ಒಳನುಸುಳುವಿಕೆ ಹೆಚ್ಚಾಗಿದೆ. ಜಮ್ಮು-ಕಾಶ್ಮೀರದಾದ್ಯಂತ 2022ರಲ್ಲಿ ಭದ್ರತಾ ಸಿಬ್ಬಂದಿಯು 93 ಯಶಸ್ವಿ ಕಾರ್ಯಾಚರಣೆಗಳನ್ನು ಕೈಗೊಂಡು 172 ಉಗ್ರರನ್ನು ಎನ್‌ಕೌಂಟರ್‌ ಮಾಡಿದೆ. ಇವರಲ್ಲಿ 42 ಉಗ್ರರು (ಹೈಬ್ರೀಡ್​) ವಿದೇಶದವರಾಗಿದ್ದಾರೆ. ಲಷ್ಕರೆ ತೊಯ್ಬಾ, ಇದರ ಅಂಗಸಂಸ್ಥೆ ದಿ ರೆಸಿಸ್ಟಂಟ್‌ ಫ್ರಂಟ್‌ನ 108, ಜೈಶ್​ ಎ ಮಹಮದ್​ನ 35, ಹಿಜ್ಬುಲ್‌ ಮುಜಾಹಿದ್ದೀನ್​ನ 22, ಅಲ್‌ ಬದ್ರ್‌ ಸಂಘಟನೆಯ ನಾಲ್ವರು ಉಗ್ರರು ಸೇರಿದಂತೆ 172 ರಕ್ತಪಿಪಾಸುಗಳನ್ನು ಹತ್ಯೆ ಮಾಡಲಾಗಿದೆ.

ಹೊಸದಾಗಿ ಉಗ್ರ ಸಂಘಟನೆಗಳಿಗೆ ಸೇರುವವರ ಜೀವಿತಾವಧಿಯನ್ನೇ ಭದ್ರತಾ ಸಿಬ್ಬಂದಿ ಇಳಿಕೆ ಮಾಡಿದ್ದಾರೆ. ಉಗ್ರ ಸಂಘಟನೆಗೆ ಸೇರಿದ ಒಂದೇ ತಿಂಗಳಲ್ಲಿ ಹತ್ಯೆಗೀಡಾದ ಉಗ್ರರ ಪ್ರಮಾಣ ಶೇ.89ರಷ್ಟಿದೆ. ಒಂದು ವರ್ಷದಲ್ಲಿ 100 ಯುವಕರು ಉಗ್ರ ಸಂಘಟನೆ ಸೇರಿದ್ದು, 2021ಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ.37ರಷ್ಟು ಕುಸಿತವಾಗಿದೆ ಎಂಬ ಮಾಹಿತಿಯನ್ನು ಸೇನಾಧಿಕಾರಿಗಳು ನೀಡಿದ್ದಾರೆ. ಉಗ್ರರನ್ನು ಹುಡುಕಿ, ಹುಡುಕಿ ನಿರ್ಮೂಲನೆ ಮಾಡಲಾಗುತ್ತಿದೆ. ದುರಾದೃಷ್ಟವಶಾತ್​ ರಾಜೌರಿಯಲ್ಲಿ ಇಂದು (ಬುಧವಾರ) ಇಬ್ಬರು ಉಗ್ರರನ್ನು ಸದೆಬಡಿಯುವ ಕಾರ್ಯಾಚರಣೆಯಲ್ಲಿ ಇಬ್ಬರು ಸೇನಾ ಕ್ಯಾಪ್ಟನ್​ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

ಇದನ್ನೂ ಓದಿ:ರಜೌರಿಯಲ್ಲಿ ಉಗ್ರರು-ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ: ಸೇನಾ ಕ್ಯಾಪ್ಟನ್​ ಸೇರಿ ನಾಲ್ವರು ಯೋಧರು ಹುತಾತ್ಮ

ABOUT THE AUTHOR

...view details