ಕರ್ನಾಟಕ

karnataka

ನಿರ್ಮಾಣ ಹಂತದ ಕಟ್ಟಡ ಕುಸಿತ.. ಇಬ್ಬರು ಕಾರ್ಮಿಕರು ಮೃತ

By

Published : Mar 21, 2023, 5:40 PM IST

ಕೇರಳದ ಎರ್ನಾಕುಲಂ ಜಿಲ್ಲೆಯ ಅಂಗಮಾಲಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ನಡೆದಿದೆ.

ನಿರ್ಮಾಣ ಹಂತದ ಕಟ್ಟಡ ಕುಸಿತ
ನಿರ್ಮಾಣ ಹಂತದ ಕಟ್ಟಡ ಕುಸಿತ

ಎರ್ನಾಕುಲಂ (ಕೇರಳ) :ನಿರ್ಮಾಣ ಹಂತದ ಕಟ್ಟಡದ ಸ್ಲ್ಯಾಬ್ ಕುಸಿದು ಬಿದ್ದ ಪರಿಣಾಮ ಪಶ್ಚಿಮ ಬಂಗಾಳ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಎರ್ನಾಕುಲಂ ಜಿಲ್ಲೆಯ ಅಂಗಮಾಲಿ ಎಂಬಲ್ಲಿ ನಡೆದಿದೆ.

ಕಾರ್ಮಿಕರ ಮೇಲೆ ಸ್ಲ್ಯಾಬ್​ ಕುಸಿತ: ಪಶ್ಚಿಮ ಬಂಗಾಳ ಮೂಲದ ಅಲಿಹಾಸನ್ (30), ಕೇರಳ ಮೂಲದ ಜಾನಿ ಆಂಟನಿ (52) ಮೃತರು ಎಂದು ತಿಳಿದುಬಂದಿದೆ. ನಿರ್ಮಾಣ ಹಂತದಲ್ಲಿರುವ ಎರಡು ಅಂತಸ್ತಿನ ಮನೆಯ ಸನ್‌ಶೇಡ್ ಸ್ಲ್ಯಾಬ್ ಕಾರ್ಮಿಕರ ಮೇಲೆ ಕುಸಿದಿರುವುದರಿಂದ ಈ ಅವಘಡ ಸಂಭವಿಸಿದೆ. ಅಲಿಹಾಸನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕರುಕುಟ್ಟಿ ಮೂಲದ ಜಾನಿ ಅಂತೋನಿ ಆಸ್ಪತ್ರೆಗೆ ಕರೆದೊಯ್ದರು ಸಹ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಅದೇ ವೇಳೆ ಗಂಭೀರವಾಗಿ ಗಾಯಗೊಂಡಿರುವ ಪಶ್ಚಿಮ ಬಂಗಾಳ ಮೂಲದ ಕಲ್ಲು (30) ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ. 24 ಗಂಟೆಗಳ ಕಾಲ ಏನೂ ಹೇಳಲಾಗುವುದಿಲ್ಲ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಹಾಕಿದ್ದ ಸ್ಲ್ಯಾಬ್ ಮೇಲೆ ವ್ಯಕ್ತಿಯೊಬ್ಬರು ಹತ್ತಿದಾಗ ಸ್ಲ್ಯಾಬ್ ಒಡೆದಿತ್ತು ಎಂದು ವರದಿಯಾಗಿದೆ. ಇದರಿಂದಾಗಿ ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಸ್ಲ್ಯಾಬ್ ಬಿದ್ದಿದೆ ಎಂದು ತಿಳಿದುಬಂದಿದೆ.

ಇತರೆ ರಾಜ್ಯದ ಕಾರ್ಮಿಕರು ಕೆಲಸದಲ್ಲಿ ಭಾಗಿ :ಮಂಗಳವಾರ ಬೆಳಗ್ಗೆ 8.30ರ ಸುಮಾರಿಗೆ ಎರಡು ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗ ಈ ಅವಘಡ ಸಂಭವಿಸಿದೆ. ಅಪಘಾತದ ವೇಳೆ ಕೇರಳ ಹಾಗೂ ಇತರೆ ರಾಜ್ಯದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಸ್ಪೋಟ: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು(ಮಾರ್ಚ್​ 13) ಭಾನುವಾರ ತಿಳಿಸಿದ್ದರು. ಭಾನುವಾರ ಸಂಜೆ ಕಣ್ಣೂರು ಜಿಲ್ಲೆಯ ಕಕ್ಕಯಂಗಡದಲ್ಲಿರುವ ಮುಝಕುನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದರು.

ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ: ಸ್ಫೋಟ ಸಂಭವಿಸಿದ ಮನೆ ಬಿಜೆಪಿ ಕಾರ್ಯಕರ್ತ ಸಂತೋಷ್​ ಎಂಬುವರಿಗೆ ಸೇರಿದ್ದು ಎನ್ನಲಾಗಿತ್ತು. ಸ್ಫೋಟದಿಂದ ಸಂತೋಷ್ ಮತ್ತು ಆವರ ಪತ್ನಿ ಲಸಿತಾ ಗಾಯಗೊಂಡಿದ್ದರು. ಮನೆಯ ಅಡುಗೆ ಕೋಣೆ ಹಿಂಭಾಗದಲ್ಲಿ ಸ್ಫೋಟ ಸಂಭವಿಸಿತ್ತು. ಮನೆಯಲ್ಲಿ ಬಾಂಬ್ ತಯಾರಿಸುವಾಗ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿತ್ತು. ಸ್ಫೋಟದ ವೇಳೆ ಸಂತೋಷ್ ಅವರ ತಾಯಿ ಮತ್ತು ಮಕ್ಕಳು ಮನೆಯ ಇನ್ನೊಂದು ಕೋಣೆಯಲ್ಲಿದ್ದ ಕಾರಣ ಭಾರೀ ಅನಾಹುತ ತಪ್ಪಿತ್ತು.

ಸ್ಫೋಟದ ಸುದ್ದಿ ತಿಳಿದು ಮನೆಯ ಸುತ್ತಮುತ್ತ ಬಿಜೆಪಿ ಹಾಗೂ ಸಿಪಿಎಂ ಕಾರ್ಯಕರ್ತರು ಜಮಾಯಿಸಿದ್ದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದ ಹಿನ್ನೆಲೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಶಾಸಕ ಸನ್ನಿ ಜೋಸೆಫ್ ಮತ್ತು ಡಿಸಿಸಿ ಅಧ್ಯಕ್ಷ ಮಾರ್ಟಿನ್ ಜಾರ್ಜ್ ಸ್ಫೋಟ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದ್ದರು.

ಇದನ್ನೂ ಓದಿ :ಕೇರಳ: ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಸ್ಫೋಟ, ಇಬ್ಬರಿಗೆ ಗಾಯ

ABOUT THE AUTHOR

...view details