ಕರ್ನಾಟಕ

karnataka

ಇದು ಅಹಂಕಾರ, ಕೋಪ ತೋರಿಸುವ ಸಮಯವಲ್ಲ.. ಮಮತಾಗೆ ತಿವಿದ ಮಾರ್ಗರೇಟ್​ ಆಳ್ವಾ

By

Published : Jul 23, 2022, 9:24 AM IST

ಉಪರಾಷ್ಟ್ರಪತಿ ಚುನಾವಣೆಯಿಂದ ದೂರ ಇರುವುದಾಗಿ ಘೋಷಿಸಿದ ಟಿಎಂಸಿ- ಸಿಎಂ ಮಮತಾ ನಿರ್ಧಾರಕ್ಕೆ ವಿಪಕ್ಷಗಳ ಅಭ್ಯರ್ಥಿ ಆಳ್ವಾ ಆಕ್ಷೇಪ- ದೀದಿಗೆ ಮಾರ್ಗರೇಟ್​ ಬುದ್ಧಿವಾದ

ಟಿಎಂಸಿಗೆ ತಿವಿದ ಮಾರ್ಗರೇಟ್​ ಆಳ್ವಾ
ಟಿಎಂಸಿಗೆ ತಿವಿದ ಮಾರ್ಗರೇಟ್​ ಆಳ್ವಾ

ನವದೆಹಲಿ:ಉಪರಾಷ್ಟ್ರಪತಿ ಚುನಾವಣೆಯ ಮತದಾನದಿಂದ ದೂರ ಉಳಿಯುವುದಾಗಿ ಹೇಳಿದ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ವಿರುದ್ಧ ಪ್ರತಿಪಕ್ಷಗಳ ಅಭ್ಯರ್ಥಿಯಾದ ಮಾರ್ಗರೇಟ್​ ಆಳ್ವಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಅಹಂಕಾರ, ಕೋಪದ ಸಮಯವಲ್ಲ. ಧೈರ್ಯ, ಒಗ್ಗಟ್ಟು ತೋರಿಸಬೇಕಾಗಿದೆ ಎಂದು ಹೇಳಿದ್ದಾರೆ.

ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಮತದಾನದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ತಮ್ಮ ಪಕ್ಷದ ಸಂಸದರು ಮತದಾನದಿಂದ ದೂರವಿರುತ್ತಾರೆ ಎಂದು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾರ್ಗರೇಟ್​ ಆಳ್ವಾ ಅವರು, ಮತದಾನದಿಂದ ದೂರವಿರುವುದಾಗಿ ಘೋಷಿಸಿದ ತೃಣಮೂಲ ಕಾಂಗ್ರೆಸ್ ನಿರ್ಧಾರವು ನಿರಾಶದಾಯಕ. ಇದು ಅಹಂಕಾರ, ಕೋಪ ತೋರಿಸುವ ಸಮಯವಲ್ಲ. ಬದಲಾಗಿ ಒಗ್ಗಟ್ಟು, ನಾಯಕತ್ವವನ್ನು ಸಾರಬೇಕಿದೆ. ಧೈರ್ಯದ ಪ್ರತೀಕದಂತಿರುವ ಮಮತಾ ಅವರು ತಮ್ಮ ನಿರ್ಧಾರವನ್ನು ಬದಲಿತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ. ವಿರೋಧ ಪಕ್ಷಗಳ ಜೊತೆ ನಿಲ್ಲಬೇಕು ಎಂದು ಮಮತಾ ಅವರನ್ನು ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ್ದಾರೆ.

ಎನ್‌ಡಿಎ ಅಭ್ಯರ್ಥಿಯಾದ ಜಗದೀಪ್ ಧನ್​ಕರ್​ ಅವರು ಪಶ್ಚಿಮ ಬಂಗಾಳ ರಾಜ್ಯಪಾಲರಾಗಿದ್ದಾರೆ. ಅವರಿಗೂ ಟಿಎಂಸಿ ಬೆಂಬಲ ನೀಡುವುದಿಲ್ಲ ಎಂದಿದೆ. ಮಾರ್ಗರೇಟ್​ ಆಳ್ವಾರನ್ನು ವಿರೋಧ ಪಕ್ಷಗಳ ಅಭ್ಯರ್ಥಿ ಎಂದು ಘೋಷಿಸುವ ಮೊದಲು ಮಮತಾ ಬ್ಯಾನರ್ಜಿ ಅವರನ್ನು ಸಂಪರ್ಕಿಸದೇ ಇರುವುದು ಈ ನಿರ್ಧಾರಕ್ಕೆ ಕಾರಣವಾಗಿದೆ ಎನ್ನಲಾಗ್ತಿದೆ.

ಆಗಸ್ಟ್ 6 ರಂದು ಉಪರಾಷ್ಟ್ರಪತಿ ಹುದ್ದೆಗೆ ಮತದಾನ ನಡೆಯಲಿದೆ. ಎನ್​ಡಿಎ ಅಭ್ಯರ್ಥಿ ಜಗದೀಪ್​ ಧನ್​ಕರ್​ ಅವರಿಗೆ ಹೆಚ್ಚಿನ ಪಕ್ಷಗಳು ಬೆಂಬಲ ನೀಡಿದ್ದು, ಅವರೇ ಬಹುತೇಕ ಆಯ್ಕೆಯಾಗಲಿದ್ದಾರೆ ಎನ್ನಲಾಗ್ತಿದೆ.

ಓದಿ:ಹೈಕಮಾಂಡ್ ನಿರ್ಲಕ್ಷಕ್ಕೆ ಕೆಂಡಾಮಂಡಲ.. ನಿವೃತ್ತಿ ಘೋಷಿಸಿ ಸೇಡು ತೀರಿಸಿಕೊಂಡ ಬಿಎಸ್​​ ವೈ

ABOUT THE AUTHOR

...view details