ಕರ್ನಾಟಕ

karnataka

ಮನರೇಗಾ ಯೋಜನೆಯ ಬಾಕಿ ಅನುದಾನ ಬಿಡುಗಡೆಗೆ ಒತ್ತಾಯಿಸಿ ದೆಹಲಿಯಲ್ಲಿ ಟಿಎಂಸಿ ಹೋರಾಟ

By ETV Bharat Karnataka Team

Published : Sep 30, 2023, 8:17 PM IST

Updated : Sep 30, 2023, 8:49 PM IST

ಮನರೇಗಾ ಯೋಜನೆಯ ಬಾಕಿ ಅನುದಾನ ಬಿಡುಗಡೆಗೆ ಒತ್ತಾಯಿಸಿ ದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ ಪ್ರತಿಭಟನಾ ಪ್ರದರ್ಶನ ಹಮ್ಮಿಕೊಂಡಿದೆ.

Etv Bharat
Etv Bharat

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಅನುದಾನ ಬಾಕಿ ಉಳಿಸಿಕೊಂಡಿರುವ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ದೊಡ್ಡ ಹೋರಾಟಕ್ಕೆ ಮುಂದಾಗಿದೆ. ಅಕ್ಟೋಬರ್ 3ರಂದು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನಾ ಪ್ರದರ್ಶನಕ್ಕೆ ಸಜ್ಜಾಗಿದೆ.

ಮನರೇಗಾ ಯೋಜನೆಯ ಬಾಕಿ ಅನುದಾನ ಬಿಡುಗಡೆ ಮಾಡದಿರುವುದರ ವಿರುದ್ಧದ ತನ್ನ ಪ್ರತಿಭಟನೆಯನ್ನು 'ಹಕ್ಕಿಗಾಗಿ ಹೋರಾಟ' ಎಂದು ತೃಣಮೂಲ ಕಾಂಗ್ರೆಸ್ ಹೇಳಿಕೊಂಡಿದೆ. ಈ ಕುರಿತು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸಭೆ ನಡೆಸಲಿದ್ದು, ಭಾನುವಾರ ಸಂಜೆಯೊಳಗೆ ಎಲ್ಲ ಸಂಸದರು ಮತ್ತು ಹಿರಿಯ ನಾಯಕರು ದೆಹಲಿಯಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ.

ಪ್ರತಿಭಟನಾ ಪ್ರದರ್ಶನದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಜರಾಗಬೇಕಿತ್ತು. ಆದರೆ, ಇತ್ತೀಚೆಗೆ ಕೈಗೊಂಡಿದ್ದ ಎರಡು ದೇಶಗಳ ಪ್ರವಾಸದ ಸಂದರ್ಭದಲ್ಲಿ ಅವರ ಎಡ ಮೊಣಕಾಲಿಗೆ ಗಾಯವಾಗಿದೆ. ಇದರಿಂದ ವೈದ್ಯರು 10 ದಿನಗಳ ವಿಶ್ರಾಂತಿಗೆ ಸಿಎಂ ಮಮತಾಗೆ ಸಲಹೆ ನೀಡಿದ್ದಾರೆ. ಇದರ ನಡುವೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ಅಭಿಷೇಕ್ ಬ್ಯಾನರ್ಜಿ, ದೆಹಲಿಯಲ್ಲಿ ಪ್ರತಿಭಟನೆಯು ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ. ಅಲ್ಲದೇ, ಇತರ ಪಕ್ಷಗಳಿಗೆ ಕೈಜೋಡಿಸುವಂತೆಯೂ ಒತ್ತಾಯಿಸಿದ್ದಾರೆ. ಇದು ಟಿಎಂಸಿ ಚಳವಳಿಯಲ್ಲ. ಇದು ಜನರ ಚಳವಳಿ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬಡ ಜನರ ಹಣದಿಂದ ಹೊಸ ಸಂಸತ್ತನ್ನು ನಿರ್ಮಿಸಿದೆ ಎಂದೂ ದೂರಿದ್ದಾರೆ.

ಉದ್ದೇಶಪೂರ್ವಕವಾಗಿ ಇಡಿ ಸಮನ್ಸ್​ ಜಾರಿ: ಮತ್ತೊಂದೆಡೆ, ದೆಹಲಿಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಟಿಎಂಸಿ ನಾಯಕರು ಆರೋಪಿಸಿದ್ದಾರೆ. ಹೋರಾಟದ ದಿನವೇ ಶಾಲಾ ಶಿಕ್ಷಕರ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್‌ ಜಾರಿ ಮಾಡಿದೆ. ಆದರೂ, ಅಕ್ಟೋಬರ್ 3ರಂದು ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಬ್ಯಾನರ್ಜಿ ಘೋಷಿಸಿದ್ದರು.

ರೈಲುಗಳ ಒದಗಿಸಲು ನಿರಾಕರಣೆ: ಇದಲ್ಲದೇ, ಪ್ರತಿಭಟನೆಗಾಗಿ ಪಶ್ಚಿಮ ಬಂಗಾಳದಿಂದ ನವದೆಹಲಿಗೆ ವಿಶೇಷ ರೈಲುಗಳಿಗೆ ಮನವಿ ಮಾಡಲಾಗಿತ್ತು. ಆದರೆ, ರೈಲುಗಳ ಒದಗಿಸಲು ರೈಲ್ವೆ ಇಲಾಖೆ ನಿರಾಕರಿಸಿದೆ. ಹೀಗಾಗಿ ಪಕ್ಷದ ಬೆಂಬಲಿಗರನ್ನು ದೆಹಲಿಗೆ ಕರೆದೊಯ್ಯಲು ಪರ್ಯಾಯ ಸುಮಾರು 50 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಐದು ಸಾವಿರಕ್ಕೂ ಅಧಿಕ ಜನರು ದೆಹಲಿಗೆ ತಲುಪಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

Last Updated : Sep 30, 2023, 8:49 PM IST

ABOUT THE AUTHOR

...view details