ನವದೆಹಲಿ: ಕಳೆದ 44 ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಹಾಗೂ ತೈಲ ದರ ಏರಿಕೆ ವಿಚಾರವಾಗಿ ಕೇಂದ್ರದ ವಿರುದ್ಧ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಗರಂ ಆಗಿದ್ದಾರೆ.
ಸ್ವಾತಂತ್ರ್ಯದ ಬಳಿಕ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಅನ್ನದಾತರು ತಮ್ಮ ಬೇಡಿಕೆಗೋಸ್ಕರ ಇಷ್ಟೊಂದು ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರ ಬಡ ರೈತರು ಮತ್ತು ಮಧ್ಯಮ ವರ್ಗದವರ ಬೆನ್ನು ಮುರಿಯುವಲ್ಲಿ ನಿರತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ: ಜೀವಿಸುವ ಹಕ್ಕಿಗಿಂತ ಧಾರ್ಮಿಕ ಹಕ್ಕು ದೊಡ್ಡದಲ್ಲ: ಮದ್ರಾಸ್ ಹೈಕೋರ್ಟ್
ಕೊರೊನಾ ಸಂದರ್ಭದಲ್ಲಿ ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿತಗೊಂಡಿದೆ. ಆದರೆ ಮೋದಿ ಸರ್ಕಾರ ಇದರ ಸದುಪಯೋಗ ಪಡೆದುಕೊಂಡು ತನ್ನ ಖಜಾನೆ ತುಂಬಿಸಿಕೊಳ್ಳುವ ಯತ್ನ ನಡೆಸಿದೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಬ್ಯಾರಲ್ಗೆ $ 50.96 ಆಗಿದೆ. ಹೀಗಾಗಿ ದೇಶದಲ್ಲಿ ತೈಲ ಬೆಲೆ ಪ್ರತಿ ಲೀಟರ್ಗೆ 23.43 ಪೈಸೆ ಮಾತ್ರ ಇರಬೇಕು. ಆದರೆ ಪ್ರತಿ ಲೀಟರ್ ಡಿಸೇಲ್ 74.38 ಹಾಗೂ ಪೆಟ್ರೋಲ್ 84.20 ಪೈಸೆಗೆ ಮಾರಾಟವಾಗುತ್ತಿದ್ದು, ಕಳೆದ 73 ವರ್ಷಗಳಲ್ಲೇ ಇದು ಅಧಿಕ ಎಂದಿದ್ದಾರೆ.
ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾಗ್ತಿದ್ದರೂ ಮೋದಿ ಸರ್ಕಾರ ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆ ಮಾಡ್ತಿದೆ. ಕಳೆದ ಆರೂವರೆ ವರ್ಷದಲ್ಲಿ ಅಬಕಾರಿ ಸುಂಕ ಏರಿಕೆ ಮಾಡಿದ್ದು, ಬರೋಬ್ಬರಿ 19,00,000 ಕೋಟಿ ರೂ ಬಡವರ ಜೇಬಿನಿಂದ ಸುಲಿಗೆ ಮಾಡಲಾಗಿದೆ ಎಂದು ಸೋನಿಯಾ ಆರೋಪಿಸಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಎಷ್ಟಿತ್ತು, ಅದೇ ಬೆಲೆ ಈಗಲೂ ಜಾರಿಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.