ಕರ್ನಾಟಕ

karnataka

UPSC CAPF: ಕಾಶ್ಮೀರ ಕಣಿವೆಯಿಂದ ಸಿಎಪಿಎಫ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೊದಲ ಮಹಿಳೆ ಸಿಮ್ರಾನ್ ಬಾಲಾ

By

Published : Jun 11, 2023, 2:03 PM IST

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಸಿಮ್ರಾನ್ ಬಾಲಾ ಅವರು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಪರೀಕ್ಷೆಯಲ್ಲಿ 82ನೇ ರ‍್ಯಾಂಕ್​ ಗಳಿಸಿದ್ದಾರೆ. ಈ ವರ್ಷ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಾಜ್ಯದ ಮೊದಲ ಮಹಿಳೆ ಇವರು.

Simran Bala
ಸಿಮ್ರಾನ್ ಬಾಲಾ

ರಜೌರಿ:ಜಮ್ಮು ಮತ್ತು ಕಾಶ್ಮೀರದ ಗಡಿ ಪಟ್ಟಣವಾದ ನೌಶೇರಾದ ನಿವಾಸಿ ಸಿಮ್ರಾನ್ ಬಾಲಾ ಅವರು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಪರೀಕ್ಷೆಯಲ್ಲಿ ತೇರ್ಗಡೆಯಾದ ರಾಜ್ಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವರ್ಷ ಯುಪಿಎಸ್‌ಸಿ ಸಿಎಪಿಎಫ್​ಗೆ ಅರ್ಹತೆ ಪಡೆದ 151 ಅಭ್ಯರ್ಥಿಗಳಲ್ಲಿ ಅವರು 82ನೇ ರ‍್ಯಾಂಕ್ ಪಡೆದು ಇತಿಹಾಸ ನಿರ್ಮಿಸಿದ್ದಾರೆ.

"ಈ ವರ್ಷ ಪರೀಕ್ಷೆಯಲ್ಲಿ ತೇರ್ಗಡೆಯಾದ ಜಮ್ಮು ಮತ್ತು ಕಾಶ್ಮೀರದ ಏಕೈಕ ಮಹಿಳೆ ನಾನು. ನಾನು ತುಂಬಾ ಹೆಮ್ಮೆ ಮತ್ತು ಕೃತಜ್ಞಳಾಗಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದವಳಾದ ನಾನು ನನ್ನ ಪ್ರದೇಶದಲ್ಲಿ ಗಡಿಯಾಚೆಗಿನ ಗುಂಡಿನ ದಾಳಿಯನ್ನು ನೋಡಿದ್ದೇನೆ. ಇದು ನನ್ನನ್ನು ಪ್ರೇರೇಪಿಸಿದೆ. ನಾನು ಗಡಿ ಪ್ರದೇಶದಲ್ಲೂ ಸೇವೆ ಸಲ್ಲಿಸಲು ಸಿಎಪಿಎಫ್‌ಗೆ ಸೇರುತ್ತೇನೆ" ಎಂದು ಎಂದರು.

"ನನ್ನ ಕನಸು ನನಸಾಗಿದೆ. ನಾನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸಹಾಯಕ ಕಮಾಂಡೆಂಟ್ ಆಗಿ ನೇಮಕಗೊಂಡಿದ್ದೇನೆ. ನಾನು ನನ್ನ ಕರ್ತವ್ಯವನ್ನು ಸಂಪೂರ್ಣ ಉತ್ಸಾಹದಿಂದ ನಿರ್ವಹಿಸುತ್ತೇನೆ. ನನ್ನ ಯಶಸ್ಸಿನ ಬಗ್ಗೆ ನನ್ನ ಕುಟುಂಬ ಮತ್ತು ನನ್ನ ನೆರೆಹೊರೆಯವರು ಹೆಮ್ಮೆಪಡುತ್ತಾರೆ" ಎಂದು ಅವರು ಹೇಳಿದರು.

ತಮ್ಮ ಪ್ರಯಾಣದ ಬಗ್ಗೆ ಮಾತನಾಡಿದ ಅವರು "ನಾನು ಇಲ್ಲಿ 10ನೇ ತರಗತಿಯವರೆಗೆ ಓದಿದ್ದೇನೆ. ನಂತರ ನನ್ನ ಉನ್ನತ ಮಾಧ್ಯಮಿಕ ಶಿಕ್ಷಣಕ್ಕಾಗಿ ಜಮ್ಮುವಿಗೆ ಹೋದೆ. ಪದವಿಯನ್ನು ಗಾಂಧಿನಗರದಲ್ಲಿ ಪೂರ್ಣಗೊಳಿಸಿದೆ. ಈ ಪರೀಕ್ಷೆಗೆ ತಯಾರಿ ಆರಂಭಿಸಿದಾಗ ನಾನು ಕೊನೆಯ ಸೆಮಿಸ್ಟರ್‌ನಲ್ಲಿದ್ದೆ. ದೇವರ ದಯೆಯಿಂದ ಮೊದಲ ಪ್ರಯತ್ನದಲ್ಲಿ ಪಾಸಾಗಿದ್ದೇನೆ. ನನ್ನ ಪೋಷಕರು, ಶಿಕ್ಷಕರು ಮತ್ತು ಅನೇಕ ಜನರು ನನಗೆ ಪ್ರೋತ್ಸಾಹ ನೀಡಿದರು. ಕಠಿಣ ಪರಿಶ್ರಮ ಮತ್ತು ಸ್ಥಿರತೆ ಪರೀಕ್ಷೆಯಲ್ಲಿ ನಾನು ಉತ್ತೀರ್ಣಳಾಗಲು ನನಗೆ ಸಹಾಯ ಮಾಡಿದೆ" ಎಂದು ಅವರು ಹೇಳಿದರು.

ತನ್ನ ಸಾಧನೆಯ ಬಗ್ಗೆ ಮಾತನಾಡಿದ ಅವರು "ಇದು ಅಖಿಲ ಭಾರತ ಮಟ್ಟದ ಪರೀಕ್ಷೆಯಾಗಿದೆ. ನೀವು ಗಡಿ ಪ್ರದೇಶದವರಾಗಿದ್ದರೂ ಅಥವಾ ಯಾವುದೇ ಮಹಾನಗರದವರಾಗಿದ್ದರೂ ಪರವಾಗಿಲ್ಲ. ಇಂಟರ್ನೆಟ್ ಯುಗದಲ್ಲಿ ನೀವು ಪರೀಕ್ಷೆಯಲ್ಲಿ ಸುಲಭವಾಗಿ ಉತ್ತೀರ್ಣರಾಗಲು ಸಾಧ್ಯವಾಗುತ್ತದೆ. ಆಕಾಂಕ್ಷಿಗಳಿಗೆ ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಮತ್ತು ಉತ್ತಮ ಆರೋಗ್ಯ ಬೇಕು" ಎಂದರು. ಕೇಂದ್ರ ಲೋಕಸೇವಾ ಆಯೋಗವು ಸಿಎಪಿಎಫ್ ಅಂತಿಮ ಫಲಿತಾಂಶ 2021 ಅನ್ನು ಜೂನ್ 2 ರಂದು ಪ್ರಕಟಿಸಿದೆ. ಒಟ್ಟು 151 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

13 ಪ್ರಾದೇಶಿಕ ಭಾಷೆಗಳಲ್ಲಿ ಸಿಎಪಿಎಫ್ ಪರೀಕ್ಷೆ:ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್​​)ಯ ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗೆ ಆದೇಶಿಸಿತ್ತು. ಈ ಬಗ್ಗೆ ಕೇಂದ್ರ ಗೃಹ ಇಲಾಖೆ ಟ್ವೀಟ್​ ಮಾಡಿ, ಸಿಎಪಿಎಫ್ ಕಾನ್ಸ್‌ಟೇಬಲ್ (ಜಿಡಿ) ಪರೀಕ್ಷೆಗಳನ್ನು 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಇದು ನಿರ್ಧಾರವು ಪ್ರಾದೇಶಿಕ ಭಾಷೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರೋತ್ಸಾಹಿಸಲು ಪ್ರಧಾನಿ ಮೋದಿ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿತ್ತು.

ಇದನ್ನೂ ಓದಿ:CAPF Constable posts: ಹಿಂದಿ, ಇಂಗ್ಲಿಷ್ ಜೊತೆಗೆ ಕನ್ನಡ ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ

ABOUT THE AUTHOR

...view details