ಕರ್ನಾಟಕ

karnataka

ಸಿಹಿ ತಿಂಡಿ ಕದ್ದ ಆರೋಪ: ಪರಿಶಿಷ್ಟ ಜಾತಿಯ ಇಬ್ಬರ ವಿದ್ಯಾರ್ಥಿಗಳನ್ನು ಕಂಬಕ್ಕೆ ಥಳಿತ

By

Published : Apr 5, 2023, 1:57 PM IST

ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಕಂಬಕ್ಕೆ ಕಟ್ಟಿ ಪರಿಶಿಷ್ಟ ಜಾತಿಯ ಇಬ್ಬರ ವಿದ್ಯಾರ್ಥಿಗಳನ್ನು ಅಂಗಡಿಯ ಮಾಲೀಕ ಮತ್ತು ಆತನ ಸಂಬಂಧಿಕರು ಥಳಿಸಿರುವ ಘಟನೆ ನಡೆದಿದೆ.

shopkeeper-ties-and-beats-sc-students-at-tamil-nadus-madurai-action-sought
ಸಿಹಿ ತಿಂಡಿ ಕದ್ದ ಆರೋಪ: ಪರಿಶಿಷ್ಟ ಜಾತಿಯ ಇಬ್ಬರ ವಿದ್ಯಾರ್ಥಿಗಳನ್ನು ಕಂಬಕ್ಕೆ ಥಳಿತ

ಮಧುರೈ (ತಮಿಳುನಾಡು): ಅಂಗಡಿಯಲ್ಲಿ ಸಿಹಿ ತಿಂಡಿ ಕದ್ದ ಆರೋಪದ ಮೇಲೆ ಪರಿಶಿಷ್ಟ ಜಾತಿಯ ಇಬ್ಬರ ವಿದ್ಯಾರ್ಥಿಗಳನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಆರೋಪ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಕೇಳಿ ಬಂದಿದೆ. ಈ ಪ್ರಕರಣದ ಹಲ್ಲೆ ಆರೋಪಿಗಳು ಮತ್ತು ಈ ಘಟನೆ ನಂತರ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಹಾಸ್ಟೆಲ್​ ಸಿಬ್ಬಂದಿ ಕ್ರಮ ಕೈಗೊಳ್ಳಬೇಕೆಂದು ಅಸ್ಪೃಶ್ಯತೆ ನಿರ್ಮೂಲನಾ ಮೋರ್ಚಾ ಒತ್ತಾಯಿಸಿದೆ.

ಜಿಲ್ಲೆಯ ಕರೈಕೇಣಿಯ ಗ್ರಾಮದ ಇಬ್ಬರು ದಲಿತ ವಿದ್ಯಾರ್ಥಿಗಳು ತಿರುಮಂಗಲಂ ವೃತ್ತದ ಅಚಂಪಟ್ಟಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾರೆ. ಶಾಲೆಯ ಸಮೀಪದ ಆದಿ ದ್ರಾವಿಡರ ಕಲ್ಯಾಣ ವಸತಿ ನಿಲಯದಲ್ಲಿ ಈ ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಮಾರ್ಚ್ 21ರಂದು ಆಲಂಪಟ್ಟಿಗೆ ತೆರಳಿ ಅಲ್ಲಿನ ಸಂತೋಷ್ ಎಂಬುವರ ಅಂಗಡಿಯಲ್ಲಿ ವಿದ್ಯಾರ್ಥಿಗಳು ಸಿಹಿ ತಿಂಡಿ ಖರೀದಿಸಿದ್ದರು. ಆಗ ಅಂಗಡಿಯಲ್ಲಿ ಹೆಚ್ಚು ಗ್ರಾಹಕರಿದ್ದರು.

ಇದೇ ಸಮಯದಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ಮಿಠಾಯಿ ಕದ್ದಿದ್ದಾರೆಂದು ಆರೋಪಿಸಿ ಅಂಗಡಿಯ ಮಾಲೀಕ ಸಂತೋಷ್​ ಕೂಗಿದ್ದಾರೆ. ನಂತರ ಸಂತೋಷ್ ಮತ್ತು ಆತನ ಸಂಬಂಧಿಕರು ಸೇರಿಕೊಂಡು ಇಬ್ಬರು ವಿದ್ಯಾರ್ಥಿಗಳನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಈ ಮಾಹಿತಿ ಹಾಸ್ಟೆಲ್ ಕೀಪರ್ ವಿಜಯನ್ ಮತ್ತು ಹಲ್ಲೆಗೊಳಗಾದ ವಿದ್ಯಾರ್ಥಿಯೊಬ್ಬರ ಸಂಬಂಧಿ ಆಲಂಪಟ್ಟಿಗೆ ಧಾವಿಸಿದ್ದಾರೆ. ಅಂತೆಯೇ, ಹಲ್ಲೆಕೋರರನ್ನು ಸಮಾಧಾನಪಡಿಸಿ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ.

ಕೇಸ್​ ದಾಖಲು:ಈ ಘಟನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಸಾದ್ ಸೂಚನೆಯಂತೆ ಆರೋಪಿಗಳ ಕೇಸ್​ ದಾಖಲಾಗಿದೆ. ತಿರುಮಂಗಲಂ ಪೊಲೀಸರು ಗ್ರಾಮ ಆಡಳಿತ ಅಧಿಕಾರಿಯಿಂದ ದೂರು ಸ್ವೀಕರಿಸಿ ಅಂಗಡಿಯ ಮಾಲೀಕ ಸಂತೋಷ್ ಮತ್ತು ಆತನ ಕುಟುಂಬದವರ ವಿರುದ್ಧ ಕಲಂ 294(ಬಿ), 323, 342, 506(1) ಹಾಗೂ ಜೆಜೆ ಕಾಯ್ದೆಯ (ಮಕ್ಕಳ ಮೇಲಿನ ದೌರ್ಜನ್ಯ) ಸೆಕ್ಷನ್ 75 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೋರ್ಚಾದ ಬೇಡಿಕೆ: ಇದೇ ವೇಳೆ ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ಮೋರ್ಚಾ ಕೂಡ ಈ ಘಟನೆ ಬಗ್ಗೆ ಖುದ್ದು ಮಾಹಿತಿ ಕಲೆ ಹಾಕಿದೆ. ಸ್ಥಳಕ್ಕೆ ಮೋರ್ಚಾದ ರಾಜ್ಯಾಧ್ಯಕ್ಷ ಟಿ.ಚೆಲ್ಲಕಣ್ಣು, ಮಧುರೈ ಉಪನಗರ ಜಿಲ್ಲಾ ಕಾರ್ಯದರ್ಶಿ ಸಿ.ಮುತ್ತುರಾಣಿ, ಜಿಲ್ಲಾ ಉಪಾಧ್ಯಕ್ಷ ವಿ.ಪಿ. ಮುರುಗನ್, ಆದಿ ತಮಿಳ್ ಪಕ್ಷದ ಒಡನಾಡಿಗಳಾದ ಕರುಪ್ಪಸಾಮಿ, ಆನಂದ್ ಮತ್ತು ಮಹಾಲೆಟ್ಸುಮಿ ಭೇಟಿ ನೀಡಿ ವರದಿಯನ್ನು ಸಿದ್ಧಪಡಿಸಿದ್ದಾರೆ.

ಆಲಂಪಟ್ಟಿ ಗ್ರಾಮ, ಅಚಂಪಟ್ಟಿ ಶಾಲೆ, ತಿರುಮಂಗಲಂ ಆದಿ ದ್ರಾವಿಡರ ಕಲ್ಯಾಣ ವಸತಿ ನಿಲಯಕ್ಕೆ ಭೇಟಿ ಕೊಟ್ಟು ಮೋರ್ಚಾದವರು ಪರಿಶೀಲನೆ ನಡೆಸಿದ್ದಾರೆ. ತಮ್ಮ ಅಧ್ಯಯನದ ಆಧಾರದ ಮೇಲೆ ಮೋರ್ಚಾದ ಪ್ರಮುಖರು ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಆರೋಪಿಗಳ ವಿರುದ್ಧ ಈಗಾಗಲೇ ದಾಖಲಾದ ಸೆಕ್ಷನ್‌ಗಳ ಜೊತೆಗೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಸೆಕ್ಷನ್‌ಗಳ ಅಡಿಯಲ್ಲಿಯೂ ಪ್ರಕರಣಗಳನ್ನು ದಾಖಲಿಸಬೇಕು. ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

ಇಷ್ಟೇ ಅಲ್ಲ, ಈ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಹಾಸ್ಟೆಲ್​ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಬ್ಬರಿಗೂ ವೈದ್ಯಕೀಯ ಕೌನ್ಸೆಲಿಂಗ್‌ ನಡೆಸಿ ಅವರ ವ್ಯಾಸಂಗ ಮುಂದುವರಿಸಲು ವ್ಯವಸ್ಥೆ ಮಾಡಬೇಕು. ಸಂತ್ರಸ್ತ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಸೂಕ್ತ ರಕ್ಷಣೆ ಮತ್ತು ಪರಿಹಾರ ಒದಗಿಸಬೇಕೆಂದು ಮೋರ್ಚಾದ ಮುಖಂಡರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಶಾರ್ಟ್​ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ: ಒಂದೇ ಕುಟುಂಬದ ಮೂವರ ಸಾವು, 5 ಜನರಿಗೆ ಗಾಯ

ABOUT THE AUTHOR

...view details