ಕರ್ನಾಟಕ

karnataka

ಸ್ವಾತಂತ್ರ್ಯ ದಿನ ಶಾಲೆಯಲ್ಲೇ ಮದ್ಯಕೂಟ, ಅಶ್ಲೀಲ ವಿಡಿಯೋ ಪ್ರದರ್ಶನ: ಪ್ರಾಂಶುಪಾಲ, ಶಿಕ್ಷಕ ಸಸ್ಪೆಂಡ್‌

By

Published : Aug 16, 2023, 3:19 PM IST

ಸ್ವಾತಂತ್ರ್ಯೋತ್ಸವ ದಿನಾಚರಣೆಯ ಬಳಿಕ ಶಾಲೆಯಲ್ಲಿ ಮದ್ಯಕೂಟ ನಡೆಸಿ, ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿದ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಗುಜರಾತ್​​ನ ವಡೋದರಾದಲ್ಲಿ ಘಟನೆ ನಡೆದಿದೆ.

ಇಬ್ಬರು ಶಿಕ್ಷಕರು ಅಮಾನತು
ಇಬ್ಬರು ಶಿಕ್ಷಕರು ಅಮಾನತು

ವಡೋದರಾ (ಗುಜರಾತ್) :ಶಿಕ್ಷಕ ವೃತ್ತಿ ಪವಿತ್ರವಾದುದು. ದೇಶ ಕಟ್ಟುವ ಮೊದಲ ಬುನಾದಿಯೇ ಶಿಕ್ಷಕರು. ಇಂತಹ ಹೊಣೆಗಾರಿಕೆಯ ವೃತ್ತಿಯಲ್ಲಿದ್ದುಕೊಂಡು ಮಾಡಬಾರದ್ದನ್ನು ಮಾಡಿರುವ ಇಬ್ಬರು ಶಿಕ್ಷಕರು ಜನರಿಂದ ಥಳಿತಕ್ಕೊಳಗಾಗಿ ವೃತ್ತಿಯಿಂದಲೇ ಅಮಾನತಾಗಿದ್ದಾರೆ.

ನಿನ್ನೆ (ಮಂಗಳವಾರ) 77ನೇ ಸ್ವಾತಂತ್ರ್ಯೋತ್ಸವ. ಇಡೀ ದೇಶ ಹಬ್ಬದ ಸಂಭ್ರಮದಲ್ಲಿತ್ತು. ವಡೋದರಾದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಪ್ರಾಂಶುಪಾಲ ಮತ್ತು ಶಿಕ್ಷಕರೊಬ್ಬರು ಮದ್ಯಕೂಟ ನಡೆಸಿದ್ದಾರೆ. ಇದನ್ನು ಕಂಡ ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದು, ಜನರು ಇಬ್ಬರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಶ್ಲೀಲ ವಿಡಿಯೋ ತೋರಿಸಿದ ಆರೋಪ:ಧ್ವಜಾರೋಹಣ ಮಾಡಿದ ಬಳಿಕ ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮನೆಗೆ ತೆರಳಿದ್ದಾರೆ. ಆಗ ಓರ್ವ ಶಿಕ್ಷಕ ಮತ್ತು ಪ್ರಾಂಶುಪಾಲರು ಶಾಲೆಯಲ್ಲೇ ಉಳಿದುಕೊಂಡು ಮದ್ಯಪಾನ ಮಾಡಿದ್ದಾರೆ. ಶಾಲೆಯಲ್ಲಿ ಉಳಿದುಕೊಂಡಿದ್ದ ಮೂವರು ವಿದ್ಯಾರ್ಥಿನಿಯರನ್ನು ಕುಡಿದ ಮತ್ತಿನಲ್ಲಿ ಶೌಚಾಲಯಕ್ಕೆ ಕರೆದೊಯ್ದು ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿದ್ದಾರೆ.

ಘಟನೆಯಿಂದ ಬೆಚ್ಚಿದ ಹುಡುಗಿಯರು ಮನೆಗೆ ತಲುಪಿದ ಕೂಡಲೇ ತಮ್ಮ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ಕುಪಿತಗೊಂಡ ಪೋಷಕರು ಶಾಲೆಗೆ ಧಾವಿಸಿ, ಅಲ್ಲಿದ್ದ ಪ್ರಾಂಶುಪಾಲ ಮತ್ತು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಾಗ್ವಾದ ತಾರಕಕ್ಕೇರಿ ಗ್ರಾಮದ ಜನರೂ ಜಮಾಯಿಸಿದ್ದಾರೆ. ಇಬ್ಬರು ಶಿಕ್ಷಕರನ್ನು ಜನರ ಗುಂಪು ಶಾಲೆಯಿಂದ ಹೊರಗೆಳೆದು ಥಳಿಸಿದೆ.

ಪೊಲೀಸ್ ಠಾಣೆಗೆ ದೂರು ನೀಡಿ ಇಬ್ಬರನ್ನು ಆರಕ್ಷಕರ ವಶಕ್ಕೆ ನೀಡಲಾಗಿದೆ. ಶಿಕ್ಷಕರ ವಿರುದ್ಧ ದೂರು ದಾಖಲಾಗಿದೆ. ದೂರಿನ ಮೇರೆಗೆ ಇಬ್ಬರನ್ನೂ ಶಿಕ್ಷಣ ಇಲಾಖೆ ಅಮಾನತು ಮಾಡಿದೆ.

ಕುಡಿದು ಬಂದ ಶಿಕ್ಷಕ ಅಮಾನತು:ಶಾಲೆಗೆ ಮದ್ಯ ಸೇವಿಸಿ ತೂರಾಡಿಕೊಂಡು ಬಂದ ಶಿಕ್ಷಕನನ್ನು ಅಮಾನತು ಮಾಡಿದ ಘಟನೆ ತುಮಕೂರಿನ ಕುಣಿಗಲ್ ತಾಲೂಕಿನಲ್ಲಿ ನಡೆದಿತ್ತು. ಮಕ್ಕಳಿಗೆ ನೀತಿ ಪಾಠ ಹೇಳಿಕೊಡಬೇಕಾದ ಸರ್ಕಾರಿ ಶಾಲೆ ಶಿಕ್ಷಕನೇ ತಪ್ಪು ಮಾಡಿ ಸಿಕ್ಕಿಬಿದ್ದು, ದಂಡನೆಗೆ ಒಳಗಾಗಿದ್ದರು.

ಕಾಂತರಾಜ್ ಅಮಾನತುಗೊಂಡ ಶಿಕ್ಷಕ. ಇವರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಮದ್ಯಸೇವಿಸಿ ಶಾಲೆಗೆ ಬಂದಿರುವ ವಿಚಾರ ಗ್ರಾಮಸ್ಥರ ಗಮನಕ್ಕೆ ಬರುತ್ತಿದ್ದಂತೆ ಶಾಲೆಯ ಬಳಿ ಜಮಾಯಿಸಿದ ಪೋಷಕರು, ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಕುಣಿಗಲ್ ಬಿಇಒ ತಿಮ್ಮರಾಜು ಅವರ ಗಮನಕ್ಕೆ ತಂದಿದ್ದರು.

ಸ್ಥಳಕ್ಕೆ ಬಂದ ಬಿಇಒ, ಶಿಕ್ಷಕ ಕಾಂತರಾಜು ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮದ್ಯ ಸೇವಿಸಿರುವುದನ್ನು ಖಚಿತಪಡಿಸಿಕೊಂಡಿದ್ದರು. ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ABOUT THE AUTHOR

...view details