ಕರ್ನಾಟಕ

karnataka

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣ.. ಕೇಂದ್ರ, ಗುಜರಾತ್​ ಸರ್ಕಾರಗಳಿಗೆ ಸುಪ್ರೀಂ ನೋಟಿಸ್

By

Published : Aug 25, 2022, 12:50 PM IST

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ 11 ಅಪರಾಧಿಗಳು ಗುಜರಾತ್ ಸರ್ಕಾರ ಕ್ಷಮಾಪಣೆ ಮೇಲೆ ಆಗಸ್ಟ್ 15ರಂದು ಬಿಡುಗಡೆ ಮಾಡಿತ್ತು. ಕ್ಷಮಾಪಣೆ ಪ್ರಶ್ನಿಸಿ ಸಲ್ಲಿಸಲಾದ ಮನವಿ ಕುರಿತು ಸುಪ್ರೀಂ ಕೋರ್ಟ್ ಇಂದು ಕೇಂದ್ರ ಮತ್ತು ಗುಜರಾತ್ ಸರಕಾರದಿಂದ ಪ್ರತಿಕ್ರಿಯೆ ಕೇಳಿದೆ.

Bilkis Bano case  SC issues notice to Gujarat govt  sc notice to centre in bilkis bano case  ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣ  ಗುಜರಾತ್​ ಮತ್ತು ಕೇಂದ್ರ ಸರ್ಕಾರಗಳಿಗೆ ಸುಪ್ರೀಂ ನೋಟಿಸ್  ಗುಜರಾತ್​ ಸರ್ಕಾರಗಳಿಗೆ ಸುಪ್ರೀಂ ನೋಟಿಸ್  ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ  ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ
ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣ

ನವದೆಹಲಿ: 2002ರ ಗೋಧ್ರಾ ಗಲಭೆಯ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಹಾಗೂ ಸಂತ್ರಸ್ತೆಯ14 ಜನ ಕುಟುಂಬ ಸದಸ್ಯರ ಹತ್ಯೆ ಪ್ರಕರಣ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಇಂದು ಸುಪ್ರೀಂಕೋರ್ಟ್​ ಕೈಗೆತ್ತಿಕೊಂಡಿದೆ.

ಈ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ 11 ಜೀವಾವಧಿ ಅಪರಾಧಿಗಳಿಗೆ ನೀಡಲಾದ ಕ್ಷಮಾಪಣೆ ಪ್ರಶ್ನಿಸಿ ಸಲ್ಲಿಸಲಾದ ಮನವಿಯ ಕುರಿತು ಸುಪ್ರೀಂ ಕೋರ್ಟ್ ಇಂದು ಕೇಂದ್ರ ಮತ್ತು ಗುಜರಾತ್ ಸರಕಾರದಿಂದ ಪ್ರತಿಕ್ರಿಯೆ ಕೇಳಿದೆ.

ಗುಜರಾತ್​ ಮತ್ತು ಕೇಂದ್ರ ಸರ್ಕಾರಗಳಿಗೆ ಸುಪ್ರೀಂ ನೋಟಿಸ್​:ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಈ ಮನವಿಯ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಈ ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ​ ಮುಂದೂಡಿದೆ. ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು.

ಗುಜರಾತ್ ಸರ್ಕಾರವು ಕ್ಷಮಾಪಣೆ ಅನ್ವಯ ಎಲ್ಲ ಅಪರಾಧಿಗಳನ್ನು ಆಗಸ್ಟ್ 15ರಂದು ಬಿಡುಗಡೆಗೊಳಿಸಿತ್ತು. ಸರ್ಕಾರದ ಈ ನಡೆ ಬಗ್ಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿ ವಿರೋಧಕ್ಕೂ ಕಾರಣವಾಗಿತ್ತು. ಅಲ್ಲದೇ, ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ನ್ಯಾಯವಾದಿ ಅಪರ್ಣಾ ಭಟ್ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್, ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಸೇರಿದಂತೆ ಸಿಪಿಐ(ಎಂ) ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್ ಮತ್ತು ಕಾರ್ಯಕರ್ತೆ ರೂಪ ರೇಖಾ ರಾಣಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕೆಂದು ನ್ಯಾಯವಾದಿ ಅಪರ್ಣಾ ಭಟ್ ನ್ಯಾಯಪೀಠವನ್ನ ಕೇಳಿಕೊಂಡರು. ಇದಕ್ಕೆ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​ವಿ ರಮಣ ಅವರ ನೇತೃತ್ವದ ಪೀಠವು ಸಮ್ಮತಿಸಿ ಅರ್ಜಿ ವಿಚಾರಣೆಗೆ ಒಪ್ಪಿಕೊಂಡಿತ್ತು. ಇದಕ್ಕೂ ಮುನ್ನ ಈ ಪ್ರಕರಣದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸುಪ್ರೀಂಕೋರ್ಟ್​ ಸರ್ಕಾರದ ವಿವೇಚನೆಗೆ ಬಿಟ್ಟಿತ್ತು. ಸರ್ಕಾರವು ಅಪರಾಧಿಗಳಿಗೆ ಕ್ಷಮಾಪಣೆ ನೀಡಿರುವುದನ್ನು ನಾವು ಪ್ರಶ್ನಿಸುತ್ತಿದ್ದೇವೆಯೇ ಹೊರತು ಸುಪ್ರೀಂಕೋರ್ಟ್ ಆದೇಶವನ್ನಲ್ಲ. ಯಾವ ತತ್ವಗಳ ಆಧಾರದ ಮೇಲೆ ಕ್ಷಮಾಪಣೆ ನೀಡಲಾಗಿದೆ ಎಂದು ಪ್ರಶ್ನಿಸುತ್ತಿದ್ದೇವೆ ಎಂದು ಕಪಿಲ್ ಸಿಬಲ್ ಪೀಠದ ಎದುರು ವಾದ ಮಂಡಿಸಿದರು.

ಗುಜರಾತ್ ಸರ್ಕಾರದ ಸಕ್ಷಮ ಪ್ರಾಧಿಕಾರದ ಸದಸ್ಯರ ಸಮಿತಿಯು ರಾಜಕೀಯ ಪಕ್ಷವೊಂದಕ್ಕೆ ನಿಷ್ಠೆಯನ್ನು ಹೊಂದಿದೆ. ಇದರಲ್ಲಿ ಹಾಲಿ ಶಾಸಕರು ಕೂಡ ಇರುವಂತೆ ತೋರುತ್ತದೆ. ಹೀಗಾಗಿ ಸಕ್ಷಮ ಪ್ರಾಧಿಕಾರವು ಸಂಪೂರ್ಣವಾಗಿ ಸ್ವತಂತ್ರವಾಗಿರುವ ಕಾರ್ಯ ನಿರ್ವಹಿಸುವ ಅಧಿಕಾರ ಹೊಂದಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಗೋಧ್ರಾ ರೈಲು ದಹನದ ನಂತರ ಭುಗಿಲೆದ್ದ ಹಿಂಸಾಚಾರದಿಂದ ತಪ್ಪಿಸಿಕೊಳ್ಳುವಾಗ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಾಗ ಬಿಲ್ಕಿಸ್ ಬಾನೊ ಐದು ತಿಂಗಳ ಗರ್ಭಿಣಿಯಾಗಿದ್ದರು. ಹತ್ಯೆಯಾದವರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಳು. ಸುಪ್ರೀಂಕೋರ್ಟ್​ ನೀಡಿರುವ ನೋಟಿಸ್​ಗೆ ಉತ್ತರ ನೀಡಲು ಕೇಂದ್ರ ಮತ್ತು ಗುಜರಾತ್​ ಸರ್ಕಾರಗಳಿಗೆ ಎರಡು ವಾರಗಳ ಕಾಲಾವಕಾಶವಿದೆ. ಮುಂದಿನ ವಿಚಾರಣೆಯ ಬಳಿಕ ಮತ್ತಷ್ಟು ವಿವರ ತಿಳಿದು ಬರಲಿದೆ.

ಓದಿ:ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ: 11 ಅಪರಾಧಿಗಳ ಬಿಡುಗಡೆ ಪ್ರಶ್ನಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

ABOUT THE AUTHOR

...view details