ಕರ್ನಾಟಕ

karnataka

G20 Summit: ಭಾರತಕ್ಕೆ ಆಗಮಿಸಿದ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್

By ETV Bharat Karnataka Team

Published : Sep 9, 2023, 2:32 PM IST

Saudi Crown Prince To Attend G20: ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಆಗಮಿಸಿದರು.

Saudi Crown Prince arrives in India
ಭಾರತಕ್ಕೆ ಆಗಮಿಸಿದ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್

ನವದೆಹಲಿ:ಮಹತ್ವದ ರಾಜತಾಂತ್ರಿಕ ಬೆಳವಣಿಗೆಯೊಂದರಲ್ಲಿ, ಸೌದಿ ಅರೇಬಿಯಾ ಸಾಮ್ರಾಜ್ಯದ ಯುವರಾಜ ಮತ್ತು ಪ್ರಧಾನ ಮಂತ್ರಿ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಬಂದಿದ್ದಾರೆ.

ಸೆ.9 ರಿಂದ ಸೆ. 11ರವರೆಗೆ ನಿಗದಿಪಡಿಸಲಾದ ಈ ಭೇಟಿ ಭಾರತವು ಆಯೋಜಿಸಿರುವ ಜಿ20 ಶೃಂಗಸಭೆಯಲ್ಲಿ ಅವರ ಭಾಗವಹಿಸುವಿಕೆಯನ್ನೂ ಒಳಗೊಂಡಿರುತ್ತದೆ. ಬಳಿಕ ಸಮಗ್ರ ರಾಷ್ಟ್ರ ಭೇಟಿಯನ್ನು ಒಳಗೊಂಡಿದೆ. ಈ ಭೇಟಿಯು ಉಭಯ ರಾಷ್ಟ್ರಗಳ ನಡುವಿನ ಐತಿಹಾಸಿಕ ನಿಕಟ ಮತ್ತು ಪರಸ್ಪರ ಪ್ರಯೋಜನಕಾರಿ ಸಂಬಂಧದ ಮುಂದುವರಿಕೆಯ ಭಾಗವಾಗಿದೆ.

ರಾಷ್ಟ್ರರಾಜಧಾನಿಯಲ್ಲಿ ಜಿ20 ಶೃಂಗಸಭೆ:ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಭಾರತದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದಾರೆ. ಇದು ಭಾರತದ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ವಿಶ್ವ ನಾಯಕರ ಪ್ರತಿಷ್ಠಿತ ಕೂಟ. ಎರಡು ದಿನಗಳ ಶೃಂಗಸಭೆಯು ರಾಷ್ಟ್ರ ರಾಜಧಾನಿಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಭಾರತ್ ಮಂಟಪದಲ್ಲಿ ನಡೆಯುತ್ತಿದೆ. ಅಲ್ಲಿ ಜಾಗತಿಕ ನಾಯಕರು ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಅಂತರರಾಷ್ಟ್ರೀಯ ಸಹಕಾರಕ್ಕಾಗಿ ಯೋಜನೆ ಅನ್ನು ರೂಪಿಸಲು ಒಟ್ಟುಗೂಡಿದ್ದಾರೆ. ಈ ವರ್ಷದ ಶೃಂಗಸಭೆಯ ಥೀಮ್, "ವಸುಧೈವ ಕುಟುಂಬಕಂ" ಅಂದರೆ "ಒಂದು ಭೂಮಿ - ಒಂದು ಕುಟುಂಬ - ಒಂದು ಭವಿಷ್ಯ" ಎಂಬುವುದಾಗಿದೆ. ಏಕತೆ ಮತ್ತು ಜಾಗತಿಕ ಸಹಯೋಗದ ಮಹತ್ವವನ್ನು ಇದು ಒತ್ತಿ ಹೇಳುತ್ತದೆ.

ಮಹತ್ವದ ದ್ವಿಪಕ್ಷೀಯ ಸಭೆ:ರಾಜತಾಂತ್ರಿಕ ಭೇಟಿಯ ಭಾಗವಾಗಿ ಸೌದಿ ಯುವರಾಜ ಸಲ್ಮಾನ್ ಅವರು ಭಾರತೀಯ ನಾಯಕತ್ವದೊಂದಿಗೆ ಉನ್ನತ ಮಟ್ಟದ ಚರ್ಚೆಯಲ್ಲಿ ಭಾಗಿಯಾಗುವರು. ರಾಜತಾಂತ್ರಿಕ ಮಹತ್ವವನ್ನು ಪ್ರತಿಬಿಂಬಿಸುವ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನೊಳಗೊಂಡ ಪ್ರತಿಷ್ಠಿತ ನಿಯೋಗ ಅವರ ಜತೆಗಿದೆ. ಸೆ.11 ರಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ಇದು ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಾಂಧವ್ಯವನ್ನು ಬಲಪಡಿಸುತ್ತದೆ.

ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ದ್ವಿಪಕ್ಷೀಯ ಸಭೆ ಈ ಭೇಟಿಯ ಪ್ರಮುಖ ಭಾಗ. ಈ ವೇಳೆ ಅವರು ಕಾರ್ಯತಂತ್ರದ ಪಾಲುದಾರಿಕೆ ಮಂಡಳಿಯ ಮೊದಲ ನಾಯಕರ ಸಭೆಯ ಸಹ-ಅಧ್ಯಕ್ಷರಾಗಿರುತ್ತಾರೆ. ಈ ಸಭೆ ರಾಜಕೀಯ, ಭದ್ರತೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಹಕಾರ ಸಮಿತಿ ಮತ್ತು ಆರ್ಥಿಕತೆ ಮತ್ತು ಹೂಡಿಕೆ ಸಹಕಾರ ಸಮಿತಿಯ ಎರಡು ಮಂತ್ರಿಗಳ ಸಮಿತಿಗಳ ಅಡಿಯಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಲು ವೇದಿಕೆಯನ್ನು ಒದಗಿಸುತ್ತದೆ.

ದ್ವಿಪಕ್ಷೀಯ ಸಂಬಂಧ ಬಲಪಡಿಸುವಿಕೆ: ಪ್ರಧಾನಿ ಮೋದಿ ಮತ್ತು ಯುವರಾಜ ಸಲ್ಮಾನ್ ನಡುವಿನ ಚರ್ಚೆಗಳು ರಾಜಕೀಯ, ಭದ್ರತೆ, ರಕ್ಷಣೆ, ವ್ಯಾಪಾರ, ಆರ್ಥಿಕತೆ, ಸಾಂಸ್ಕೃತಿಕ ವಿನಿಮಯ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳನ್ನು ಒಳಗೊಳ್ಳುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ, ನಾಯಕರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ. ಜಾಗತಿಕ ಶಾಂತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಲಿದ್ದಾರೆ ಎನ್ನಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ 'ಈ ಭೇಟಿ ಎರಡೂ ರಾಷ್ಟ್ರಗಳ ರಾಜತಾಂತ್ರಿಕ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು. ಜತೆಗೆ ಭಾರತಕ್ಕೆ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಎರಡನೇ ಭೇಟಿಯಾಗಿದೆ. ಇದು ದ್ವಿಪಕ್ಷೀಯ ಸಂಬಂಧದ ಬಲವನ್ನು ಬಲಪಡಿಸುತ್ತದೆ'.

ಆರ್ಥಿಕ ಸಂಬಂಧ: ಆರ್ಥಿಕವಾಗಿ, ಭಾರತ ಮತ್ತು ಸೌದಿ ಅರೇಬಿಯಾ ವರ್ಷಗಳಲ್ಲಿ ನಿಕಟವಾಗಿ ಬೆಳೆದಿದೆ. ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು 2022-23 ರ ಆರ್ಥಿಕ ವರ್ಷದಲ್ಲಿ ಯುಎಸ್​ಡಿ 52.75 ಶತಕೋಟಿಯ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ಅಲ್ಲದೇ ಭಾರತ ಸೌದಿ ಅರೇಬಿಯಾದ 2ನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದೆ. ಆದರೆ ಸೌದಿ ಅರೇಬಿಯಾ ಭಾರತದ ನಾಲ್ಕನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಸ್ಥಾನ ಪಡೆದಿದೆ. ಇದಲ್ಲದೆ, ಉಭಯ ದೇಶಗಳು ಇಂಧನ ಕ್ಷೇತ್ರದಲ್ಲಿ ದೃಢವಾದ ಪಾಲುದಾರಿಕೆಯನ್ನು ಹೊಂದಿವೆ. ಇದು ಇಂಧನ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.

ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಮಹತ್ವ: ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸೌದಿ ಅರೇಬಿಯಾದಲ್ಲಿ ವಾಸಿಸುವ ಸುಮಾರು 2.4 ಮಿಲಿಯನ್ ಭಾರತೀಯ ಸಮುದಾಯವನ್ನು ಉಲ್ಲೇಖಿಸಿದೆ. ಆತಿಥೇಯ ದೇಶದ ಅಭಿವೃದ್ಧಿಗೆ ಅವರ ಕೊಡುಗೆಗಳು ಮತ್ತು ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಬಹುಮುಖಿ ಸಂಬಂಧಗಳನ್ನು ಗಾಢವಾಗಿಸುವ ಸೇತುವೆಯಾಗಿ ಅವರ ಪಾತ್ರವನ್ನು ಶ್ಲಾಘಿಸಲಾಗಿದೆ. ಹೆಚ್ಚುವರಿಯಾಗಿ, ಸೌದಿ ಅರೇಬಿಯಾವು ಪ್ರತಿ ವರ್ಷ 1,75,000 ಭಾರತೀಯರಿಗೆ ಹಜ್ ಯಾತ್ರೆಯನ್ನು ಸುಗಮಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಮಹತ್ವವನ್ನು ಒತ್ತಿಹೇಳುತ್ತದೆ.

ಒಟ್ಟಿನಲ್ಲಿ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಭಾರತಕ್ಕೆ ಭೇಟಿ ನೀಡಿರುವುದು ಉಭಯ ರಾಷ್ಟ್ರಗಳ ನಡುವಿನ ನಿರಂತರ ಸ್ನೇಹ ಮತ್ತು ಕಾರ್ಯತಂತ್ರದ ಪಾಲುದಾರಿಕೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ:G20 Summit: ಭಾರತವನ್ನು ಯುರೋಪ್‌ಗೆ ಸಂಪರ್ಕಿಸುವ ಸಾರಿಗೆ ಯೋಜನೆ ಘೋಷಿಸಲಿರುವ ಮೋದಿ-ಬೈಡನ್

ABOUT THE AUTHOR

...view details