ಕರ್ನಾಟಕ

karnataka

ನಿಷೇಧಿತ ಸಂಘಟನೆಗಳಿಗೆ ಮರುಜೀವ, ಭಯೋತ್ಪಾದನೆಗೆ ಸಂಚು ಆರೋಪ: 10 ಮಂದಿ ಅರೆಸ್ಟ್​, ವಿವಿಧೆಡೆ ಎನ್​ಐಎ ದಾಳಿ

By

Published : Jul 11, 2023, 3:31 PM IST

ಜಮ್ಮು ಕಾಶ್ಮೀರದಲ್ಲಿ ಮತ್ತೆ ಅಶಾಂತಿ ಎಬ್ಬಿಸಲು ನಡೆಯುತ್ತಿರುವ ಚಟುವಟಿಕೆಗಳ ಮೇಲೆ ಪೊಲೀಸರು, ಎನ್​ಐಎ ತೀವ್ರ ನಿಗಾ ಇಟ್ಟಿದೆ. ಇಂದು ನಡೆದ ದಾಳಿಯಲ್ಲಿ 10 ಮಂದಿಯನ್ನು ಬಂಧಿಸಲಾಗಿದೆ.

ವಿವಿಧೆಡೆ ಎನ್​ಐಎ ದಾಳಿ
ವಿವಿಧೆಡೆ ಎನ್​ಐಎ ದಾಳಿ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಭಯೋತ್ಪಾದನೆ ಚಟುವಟಿಕೆ, ಶಾಂತಿ ಭಂಗ ಆರೋಪದ ಮೇಲೆ ನಿಷೇಧಕ್ಕೊಳಗಾಗಿರುವ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮತ್ತು ಹುರಿಯತ್ ಕಾನ್ಫರೆನ್ಸ್ ಅನ್ನು ಮರು ಆರಂಭಿಸುವ ಕುರಿತು ನಡೆಯುತ್ತಿರುವ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೇ, ಭಯೋತ್ಪಾದನೆ ಸಂಚು ಹಿನ್ನೆಲೆಯಲ್ಲಿ 13 ಸ್ಥಳಗಳಲ್ಲಿ ಎನ್‌ಐಎ ದಾಳಿ ಮಾಡಿ ಶೋಧ ನಡೆಸಿದೆ.

ನಿಷೇಧಿತ ಸಂಘಟನೆಗಳ ಮರು ಅಸ್ತಿತ್ವಕ್ಕೆ ಚಟುವಟಿಕೆಗಳು ಸಾಗಿವೆ. ಈ ಕುರಿತು ಸಭೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದು ದೂರು ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಪೊಲೀಸರು, 30 ಅಧಿಕ ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅದರಲ್ಲಿ 10 ಮಂದಿಯನ್ನು ಬಂಧಿಸಲಾಗಿದೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಸೆಕ್ಷನ್ 10, 13 ಮತ್ತು ಐಪಿಸಿ ಸೆಕ್ಷನ್ 121(ಎ) ಅಡಿ ಕೋಠಿಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಧಿತ ವ್ಯಕ್ತಿಗಳು ಮತ್ತು ಉಳಿದವರು ಪಾಕಿಸ್ತಾನ ಮೂಲದ ವ್ಯಕ್ತಿಯ ನಿರ್ದೇಶನದ ಮೇರೆಗೆ ನಿಷೇಧಿತ ಸಂಸ್ಥೆಗಳ ಮರುಜೀವಕ್ಕೆ ಯೋಜಿಸುತ್ತಿದ್ದರು. ಬಹಿರಂಗವಾಗಿ ಅವರು ಚಟುವಟಿಕೆಗಳನ್ನು ಆರಂಭಿಸಿದ್ದರು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿದೇಶದಲ್ಲಿ ನೆಲೆಗೊಂಡಿರುವ ವ್ಯಕ್ತಿ ಸಂಪರ್ಕದಲ್ಲಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಸಭೆ ಸೇರುವ ನೆಪದಲ್ಲಿ ಭಯೋತ್ಪಾದಕ ಸಂಘಟನೆಗಳ ಮರು ಆರಂಭಕ್ಕೆ ಕಾರ್ಯತಂತ್ರ ರೂಪಿಸಲಾಗುತ್ತಿತ್ತು. ಪ್ರಕರಣದ ತನಿಖೆ ಚುರುಕಾಗಿ ನಡೆಯುತ್ತಿದ್ದು, ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

13 ಕಡೆ ಎನ್​ಐಎ ದಾಳಿ:ಉಗ್ರ ಸಂಚು, ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ದಕ್ಷಿಣ ಕಾಶ್ಮೀರದ 5 ಸೇರಿದಂತೆ 13 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಮೇ ತಿಂಗಳಲ್ಲಿ ಭಯೋತ್ಪಾದಕ ಸಂಘಟನೆಗಳು ಭೌತಿಕ ಮತ್ತು ಸೈಬರ್‌ ಮೂಲಕ ಸಂಚು ರೂಪಿಸಿದ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್, ಶೋಪಿಯಾನ್, ಪುಲ್ವಾಮಾ, ಶ್ರೀನಗರ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಎನ್‌ಐಎ ದಾಳಿ ನಡೆಸಿದೆ.

ನಿಷೇಧಿತ ಉಗ್ರಗಾಮಿ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಬಾಂಬ್‌ಗಳು, ಸುಧಾರಿತ ಸ್ಫೋಟಕ ಸಾಧನ (ಐಇಡಿ) ಮತ್ತು ಸಣ್ಣ ಶಸ್ತ್ರಾಸ್ತ್ರಗಳೊಂದಿಗೆ ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಯೋಜನೆಗಳನ್ನು ರೂಪಿಸಿದ್ದವು. ಶಾಂತಿ ಮತ್ತು ಕೋಮು ಸೌಹಾರ್ದತೆ ಕದಡಲು ಸ್ಥಳೀಯ ಯುವಕರು ಮತ್ತು ಭೂಗತ ವ್ಯಕ್ತಿಗಳ ಸಹಯೋಗದೊಂದಿಗೆ ದೊಡ್ಡ ಪಿತೂರಿ ನಡೆಸಲಾಗುತ್ತಿದೆ ಎಂದು ತಿಳಿದುಬಂದಿತ್ತು. ಇದಕ್ಕೂ ಮುನ್ನ ಜೂನ್ 26 ರಂದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅನೇಕ ಸ್ಥಳಗಳಲ್ಲಿ ಶೋಧ ನಡೆಸಿತ್ತು.

ಇದನ್ನೂ ಓದಿ:Chandrayaan-3: 'ವೈಫಲ್ಯ ಆಧಾರಿತ ವಿಧಾನ'ದ ಮೂಲಕ ಚಂದ್ರಯಾನ-3 ನೌಕೆ ಉಡ್ಡಯನ: ಇಸ್ರೋ

ABOUT THE AUTHOR

...view details