ಕರ್ನಾಟಕ

karnataka

'Proud of you Bhagwant' : ಪಂಜಾಬ್ ಆರೋಗ್ಯ​ ಸಚಿವರ ಬಂಧನದ ಬೆನ್ನಲ್ಲೇ ಕೇಜ್ರಿವಾಲ್​ ಮೆಚ್ಚುಗೆ!

By

Published : May 24, 2022, 3:28 PM IST

ಭ್ರಷ್ಟಾಚಾರ ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದ ಪಂಜಾಬ್ ಸಿಎಂ ಭಗವಂತ್ ಮಾನ್​​, ತಾವು ನುಡಿದಂತೆ ನಡೆದಿದ್ದಾರೆ. ಭ್ರಷ್ಟಾಚಾರವನ್ನ ತಾವು ಸಹಿಸೋದಿಲ್ಲ ಎಂಬುದನ್ನ ಸಾಬೀತುಪಡಿಸಿದ್ದಾರೆ..

Kejriwal on Punjab minister arrest
Kejriwal on Punjab minister arrest

ನವದೆಹಲಿ :ಪಂಜಾಬ್​ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದಾಗಿನಿಂದಲೂ ಜನಮೆಚ್ಚುಗೆ ಸರ್ಕಾರ ನೀಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಭಗವಂತ್ ಮಾನ್​​, ನುಡಿದಂತೆ ನಡೆದುಕೊಳ್ಳುತ್ತಿದ್ದಾರೆ. ಇವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​​, 'ಭಗವಂತ್​ ನಿಮ್ಮ ಬಗ್ಗೆ ಹೆಮ್ಮೆ ಇದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಪಂಜಾಬ್​​ ಭಗವಂತ್ ಮಾನ್ ಸರ್ಕಾರದಲ್ಲಿ ಕಮಿಷನ್​ ವಿಚಾರ ಸದ್ದು ಮಾಡ್ತಿದ್ದಂತೆ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರ ತಲೆದಂಡವಾಗಿದೆ. ತಮ್ಮ ಇಲಾಖೆಯಲ್ಲಿ ಗುತ್ತಿಗೆ ಪಡೆದ ಅಧಿಕಾರಿಗಳಿಂದ ವಿಜಯ್​ ಸಿಂಗ್ಲಾ ಶೇ.1ರಷ್ಟು ಕಮಿಷನ್​ ಕೇಳಿದ್ದರು.

ಈ ಕುರಿತಾಗಿ ಸಿಎಂ ಭಗವಂತ್​ ಮಾನ್​ ಅವರಿಗೆ ದೂರು ಬಂದಿತ್ತು. ಅಲ್ಲದೇ, ಬಲವಾದ ಸಾಕ್ಷ್ಯ ಕೂಡ ಲಭ್ಯವಾಗಿತ್ತು. ಆದ್ದರಿಂದ ಸಿಎಂ ಈ ದಿಟ್ಟ ನಿರ್ಧಾರ ಕೈಗೊಂಡಿದ್ದು, ಅವರನ್ನ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಅವರ ಬಂಧನವಾಗಿದೆ.

ಇದನ್ನೂ ಓದಿ:ಶೇ.1ರಷ್ಟು ಕಮಿಷನ್​ ಆರೋಪ: ಪಂಜಾಬ್‌ ಆರೋಗ್ಯ ಸಚಿವ ವಜಾ, ಪೊಲೀಸರಿಂದ ಬಂಧನ

ಭಗವಂತ್ ಮಾನ್​ ತೆಗೆದುಕೊಂಡಿರುವ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಜ್ರಿವಾಲ್, 'ನಿಮ್ಮ ಬಗ್ಗೆ ಹೆಮ್ಮೆ ಇದೆ. ನೀವು ತೆಗೆದುಕೊಂಡಿರುವ ನಿರ್ಧಾರ ನನ್ನ ಕಣ್ಣಲ್ಲಿ ನೀರು ತರಿಸಿದೆ. ಆಮ್ ಆದ್ಮಿ ಪಕ್ಷದ ಬಗ್ಗೆ ಇಡೀ ದೇಶವೇ ಹಮ್ಮೆ ಪಡುತ್ತಿದೆ' ಎಂದು ಟ್ವೀಟ್ ಮಾಡಿದ್ದಾರೆ.

ವಿಶೇಷವೆಂದರೆ 2015ರಲ್ಲಿ ದೆಹಲಿಯಲ್ಲಿ ಕೇಜ್ರಿವಾಲ್​ ಸಹ ಇಂತಹ ಮಹತ್ವದ ನಿರ್ಧಾರ ಕೈಗೊಂಡಿದ್ದರು. ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಬೆನ್ನಲ್ಲೇ ಅವರನ್ನ ನೇರವಾಗಿ ವಜಾಗೊಳಿಸಿದ್ದರು. ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗಿನಿಂದಲೂ ಭಗವಂತ್ ಮಾನ್ ಜನಸ್ನೇಹಿ ಹೊಸ ಹೊಸ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.

ಮಾರ್ಚ್​​ 23ರಂದು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್​​ ಸಿಂಗ್​ 'ಶಹೀದ್ ದಿವಸ್'​​ ಅಂಗವಾಗಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಪ್ರಾರಂಭ ಮಾಡಿದ್ದರು. ರಾಜ್ಯದಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಅಥವಾ ಯಾರಾದರೂ ಲಂಚ ಕೇಳಿದರೆ ರಾಜ್ಯದ ಜನರು ಇನ್ಮುಂದೆ ಯಾವುದೇ ಮುಲಾಜಿಲ್ಲದೆ ತನ್ನದೇ ವಾಟ್ಸ್‌ಆ್ಯಪ್​ ನಂಬರ್‌ಗೆ ವಿಡಿಯೋ ಅಥವಾ ಆಡಿಯೋ ರೆಕಾರ್ಡ್‌ ಮಾಡಿ ನೇರವಾಗಿ ಕಳುಹಿಸಬಹುದು ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಸಚಿವರ ತಲೆದಂಡವಾಗಿದೆ.

ABOUT THE AUTHOR

...view details