ಕರ್ನಾಟಕ

karnataka

ಇಂದೋರ್​ ದೇಶದ ಅತ್ಯಂತ ಸ್ವಚ್ಛ ನಗರಿ: ಸ್ಮಾರ್ಟ್​ ಸಿಟಿ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

By ETV Bharat Karnataka Team

Published : Sep 27, 2023, 5:55 PM IST

ಮಧ್ಯಪ್ರದೇಶದ ಇಂದೋರ್​ ದೇಶದ ಅತ್ಯಂತ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆ ಪಡೆದಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಇಂದೋರ್​ ದೇಶದ ಅತ್ಯಂತ ಸ್ವಚ್ಛ ನಗರಿ
ಇಂದೋರ್​ ದೇಶದ ಅತ್ಯಂತ ಸ್ವಚ್ಛ ನಗರಿ

ಇಂದೋರ್​ (ಮಧ್ಯಪ್ರದೇಶ) :ಸತತ 6ನೇ ಬಾರಿ ದೇಶದ 'ಅತ್ಯಂತ ಸ್ವಚ್ಛ ನಗರಿ' ಎಂಬ ಖ್ಯಾತಿ ಮಧ್ಯಪ್ರದೇಶದ ಇಂದೋರ್​ ಪಾಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಅವರಿಗೆ ಪ್ರಶಸ್ತಿಯನ್ನು ಬುಧವಾರ ನೀಡಿದರು. ಗುಜರಾತ್‌ನ ಸೂರತ್‌ ನಗರ ದ್ವಿತೀಯ, ಉತ್ತರಪ್ರದೇಶದ ಆಗ್ರ ತೃತೀಯ ಸ್ಥಾನ ಪ್ರಶಸ್ತಿ ಪಡೆಯಿತು. 2023 ನೇ ಸಾಲಿನ ದೇಶದ ಸ್ಮಾರ್ಟ್ ಸಿಟಿ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ರಾಜ್ಯವಾರು ಪೈಕಿ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದುಕೊಂಡಿದೆ.

ಇಂದೋರ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮುರ್ಮು ಅವರು ಮಾತನಾಡಿ, ಸುಸ್ಥಿರ ಅಭಿವೃದ್ಧಿ ಗುರಿಗಳ ಯಶಸ್ವಿ ಅನುಷ್ಠಾನಕ್ಕೆ ಸ್ಥಳೀಯ ಮಟ್ಟದ ಭಾಗವಹಿಸುವಿಕೆ ಅತ್ಯಗತ್ಯ. ಇಂದೋರ್‌ನಂತಹ ನಗರಗಳಲ್ಲಿ ಜನರ ಸಹಭಾಗಿತ್ವವು ಸ್ವಚ್ಛ ಮತ್ತು ಹಸಿರು ನಗರವನ್ನು ಸಾಕಾರಗೊಳಿಸಿದೆ. ಎಲ್ಲಾ ನಗರಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಹೆಚ್ಚಿನ ಖಾತ್ರಿ ಬೇಕಿದೆ. ಈ ಕುರಿತು ಸಂಘಟಿತ ಪ್ರಯತ್ನಗಳನ್ನು ನಡೆಯಬೇಕಿದೆ. ಈಗಾಗಲೇ ಹಲವಾರು ಪ್ರಯತ್ನಗಳೂ ಸಾಗಿವೆ ಎಂದು ಹೇಳಿದರು.

ಒಂದು ಅಂದಾಜಿನ ಪ್ರಕಾರ, 2047ರ ವೇಳೆಗೆ ದೇಶದ ಶೇ.50ಕ್ಕೂ ಹೆಚ್ಚು ಜನರು ನಗರಗಳಲ್ಲಿ ಮಾತ್ರ ವಾಸಿಸುತ್ತಾರೆ ಎಂದು ಹೇಳಲಾಗಿದೆ. ಆ ವೇಳೆಗೆ ದೇಶದ ಜಿಡಿಪಿಯ ಶೇ.80ಕ್ಕೂ ಹೆಚ್ಚು ನಗರಗಳಿಂದ ಬರಲಿದೆ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಗರಗಳ ಅಭಿವೃದ್ಧಿಗೆ ಮಾರ್ಗಸೂಚಿಯನ್ನು ರೂಪಿಸಬೇಕಿದೆ ಎಂದು ರಾಷ್ಟ್ರಪತಿಗಳು ಸಲಹೆ ನೀಡಿದರು.

ಹವಾಮಾನ ಬದಲಾವಣೆಯಿಂದಾಗಿ ನವೀಕರಿಸಬಹುದಾದ ಇಂಧನದತ್ತಲೂ ಗಮನಹರಿಸಬೇಕು. ಇದು ಸುರಕ್ಷಿತ ಮತ್ತು ಆರೋಗ್ಯಕರ ವಾತಾವರಣಕ್ಕೆ ನೆರವಾಗಲಿದೆ. ನಗರಗಳಲ್ಲಿ ಡೆಂಗ್ಯೂ, ಮಲೇರಿಯಾದಂತಹ ರೋಗಗಳನ್ನು ತಡೆಗಟ್ಟಲು ಜನರ ಸಹಕಾರ ಅತ್ಯಗತ್ಯ ಎಂದು ಅವರು ಹೇಳಿದರು.

ಕೋಟ್ಯಂತರ ರೂಪಾಯಿ ಯೋಜನೆ:ಸ್ಮಾರ್ಟ್ ಸಿಟೀಸ್ ಮಿಷನ್​ಗಾಗಿ 171,044 ಕೋಟಿ ಮೌಲ್ಯದ 7,934 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 1,10,794 ರೂಪಾಯಿ ಮೌಲ್ಯದ 6,069 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್​ದೀಪ್ ಸಿಂಗ್ ಪುರಿ ಮಾಹಿತಿ ನೀಡಿದರು.

ಯೋಜನೆಯಡಿ ಸುಮಾರು 25 ಸಾವಿರ ಕೋಟಿ ರೂಪಾಯಿಗಳ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಕಾಮಗಾರಿಗಳು ನಡೆದಿವೆ. ಭವಿಷ್ಯದ ದೃಷ್ಟಿಯಿಂದ ನಾಗರಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಮಿಷನ್ ಜಾರಿ ಮಾಡಲಾಗಿದೆ. ಮಾರಕ ಕೊರೊನಾದಂತಹ ಸಾಂಕ್ರಾಮಿಕ ವೇಳೆಯೂ ಈ ಯೋಜನೆಗಳಿಗೆ ಅನುದಾನ ನೀಡಲಾಗಿದೆ. 2018ರಲ್ಲಿ ಒಂದು ಸಾವಿರ ಕೋಟಿ ರೂಪಾಯಿ ನೀಡಲಾಗಿತ್ತು. ಈಗ ಅದನ್ನು 1,10,000 ಕೋಟಿಗೆ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ;ಪಬ್ಲಿಕ್​ ಅಲ್ಲ, ಪಬ್ಲಿಸಿಟಿ ಇಂಟ್ರೆಸ್ಟ್​ ಲಿಟಿಗೇಶನ್: ಉದಯನಿಧಿ ವಿರುದ್ಧದ ಅರ್ಜಿಗಳಿಗೆ ಸುಪ್ರೀಂನಲ್ಲಿ ತಮಿಳುನಾಡು ಸರ್ಕಾರ ಆಕ್ಷೇಪ

ABOUT THE AUTHOR

...view details