ಕರ್ನಾಟಕ

karnataka

ದೇಶದ ಬೆಳವಣಿಗೆಗೆ 9 ವರ್ಷಗಳ ನಿರಂತರ ಸೇವೆ: ಪ್ರಧಾನಿ ಮೋದಿ

By

Published : May 30, 2023, 11:35 AM IST

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ 9 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲು ಬಿಜೆಪಿ 1 ತಿಂಗಳು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ:ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇಂದಿಗೆ (ಮೇ 30) 9 ವರ್ಷಗಳಾಗುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಜನರ ಸೇವೆಗಾಗಿ, ದೇಶದ ಅಭಿವೃದ್ಧಿಗಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತೇವೆ. ನಮ್ಮ ಸೇವೆ ನಿರಂತರವಾಗಿ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಇಂದಿಗೆ ನಮ್ಮ ಸರ್ಕಾರಕ್ಕೆ ನವವಸಂತಗಳು ತುಂಬಿವೆ. ಈ ಹಂತದಲ್ಲಿ ನನ್ನ ಮನಸ್ಸು ನಮ್ರತೆ ಮತ್ತು ಕೃತಜ್ಞತೆಯಿಂದ ತುಂಬಿದೆ. ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ, ಕ್ರಿಯೆ ದೇಶದ ಜನರ ಜೀವನವನ್ನು ಸುಧಾರಿಸುವ ಬಯಕೆಯಿಂದ ಕೂಡಿರುತ್ತದೆ. ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕಾಗಿ ನಾವು ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತೇವೆ ಎಂದು #9ವರ್ಷಗಳ ಸೇವೆ ಎಂದು ಹ್ಯಾಷ್​ಟ್ಯಾಗ್​ ಮೂಲಕ ಟ್ವೀಟಿಸಿದ್ದಾರೆ.

ಕೇಂದ್ರ ಸರ್ಕಾರ ಈವರೆಗೂ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ನಮ್ಮ ಪ್ರಯಾಣದ ನೋಟವನ್ನು ಜನರು ಪರೀಕ್ಷಿಸಬಹುದು. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಜನರು ಹೇಗೆ ಪಡೆದಿದ್ದಾರೆ ಎಂಬುದನ್ನು ಇದು ಹೊಂದಿದೆ. ಇದನ್ನು ಪರಿಶೀಲಿಸುವ ಅವಕಾಶ ಇಲ್ಲಿದೆ ಎಂದು ಲಿಂಕ್​ವೊಂದನ್ನು ಹಂಚಿಕೊಂಡಿದ್ದಾರೆ.

ಮೋದಿ ಸರ್ಕಾರದ ಪ್ರಮುಖ ಸಾಧನೆಗಳು:ಸ್ವಚ್ಛ ಭಾರತ್​ ಅಭಿಯಾನ, ಆಯುಷ್ಮಾನ ಆರೋಗ್ಯ ಯೋಜನೆ, ಕಿಸಾನ್​ ಸಮ್ಮಾನ್​ ನಿಧಿ ಯೋಜನೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕಾಶ್ಮೀರಕ್ಕಿದ್ದ 370 ನೇ ವಿಧಿ ರದ್ದು ಮಾಡಿ ಭಯೋತ್ಪಾದನೆ ನಿಗ್ರಹ, ಪೌರತ್ವ ತಿದ್ದುಪಡಿ ಕಾಯ್ದೆ, ಆತ್ಮನಿರ್ಭರ್​ ಭಾರತ, ತ್ರಿವಳಿ ತಲಾಖ್​ ರದ್ದತಿ, ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ತ್ವರಿತಗತಿ, ದೇಶದ ವಿವಿಧೆಡೆ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಯೋಜನೆ ಜಾರಿ ಸೇರಿದಂತೆ ಹತ್ತು ಹಲವಾರು ಪ್ರಮುಖ ಯೋಜನೆಗಳನ್ನು ಜಾರಿ ಮಾಡಿದೆ.

ಬಿಜೆಪಿ ಒಂದು ತಿಂಗಳು ಕಾರ್ಯಕ್ರಮ:ಪ್ರಧಾನಿ ಮೋದಿ ಸರ್ಕಾರಕ್ಕೆ 9 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಒಂದು ತಿಂಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮೇ 30 ರಿಂದ ಜೂನ್​ 30ರ ವರೆಗೆ ಬಿಜೆಪಿ ಅಭಿಯಾನ ನಡೆಸಲಿದೆ. ದೇಶಾದ್ಯಂತ ಸಚಿವರು, ಬಿಜೆಪಿ ಪ್ರಮುಖರಿಂದ ಪತ್ರಿಕಾಗೋಷ್ಠಿಯನ್ನು ನಡೆಸಿ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಲಿದ್ದಾರೆ. ಮೇ 30 ಮತ್ತು 31ರಂದು ಪ್ರಧಾನಿ ಮೋದಿಯವರಿಂದ ಬೃಹತ್‌ ರ್ಯಾಲಿ ನಡೆಯಲಿದೆ. ದೇಶಾದ್ಯಂತ ಬಿಜೆಪಿ ಹಿರಿಯ ನಾಯಕರಿಂದ 51 ರ್ಯಾಲಿಗಳು, 396 ಲೋಕಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ:ಹಾವು ಕಚ್ಚಿ ಮೃತಪಟ್ಟ ಮಗುವಿನ ಶವ ಹಿಡಿದುಕೊಂಡು 10 ಕಿ.ಮೀ ನಡೆದೇ ಸಾಗಿದ ತಾಯಿ!

ಅಲ್ಲದೇ, ಪ್ರತಿ ಲೋಕಸಭಾ ಕ್ಷೇತ್ರದ 250 ಸೇರಿದಂತೆ ಒಂದು ಲಕ್ಷ ಕುಟುಂಬಗಳನ್ನು ಬಿಜೆಪಿ ನಾಯಕರು ಸಂಪರ್ಕಿಸಲಿದ್ದಾರೆ. ಕ್ರೀಡಾಳುಗಳು, ಕಲಾವಿದರು, ಉದ್ಯಮಿಗಳು, ಸೋಷಿಯಲ್​ ಮೀಡಿಯಾ ಪ್ರಭಾವಿಗಳನ್ನು ಸಂಪರ್ಕಿಸುವುದು, ಸರ್ಕಾರವು ದೇಶದ ಆರ್ಥಿಕತೆಯನ್ನು ಹೇಗೆ ರಕ್ಷಿಸಿತು, ಕೊರೊನಾ ಸೋಂಕನ್ನು ಹೇಗೆ ನಿಯಂತ್ರಿಸಿತು ಎಂಬ ಬಗ್ಗೆ ಜನರಿಗೆ ಮಾಹಿತಿ ನೀಡುವುದು. ಶಾಂತಿ ಸ್ಥಾಪನೆಗೆ ಕೈಗೊಂಡ ಕ್ರಮಗಳ ಬಗ್ಗೆಯೂ ವಿವರ ನೀಡುವುದು ಕಾರ್ಯಕ್ರಮದ ರೂಪುರೇಷೆಯಾಗಿದೆ.

2014ರ ಮೇ ತಿಂಗಳ ಅನಂತರ ಜಾರಿಗೆ ಬಂದ ಯೋಜನೆಗಳ ಫ‌ಲಾನುಭವಿಗಳಿಂದ ಲಿಖಿತ ಪ್ರತಿಕ್ರಿಯೆಗಳು ಹಾಗೂ ವಿಡಿಯೋಗಳನ್ನು ಮಾಡಿಸಿಕೊಂಡು, ಸರ್ಕಾರಿ ಯೋಜನೆಗಳ ಯಶಸ್ಸನ್ನು ದೇಶವಾಸಿಗಳಿಗೆ ತಲುಪಿಸುವಂತೆ ಮಾಡುವುದು ಕಾರ್ಯಕ್ರಮದ ಪ್ರಮುಖ ಅಜೆಂಡಾವಾಗಿದೆ.

ಇದನ್ನೂ ಓದಿ:ದ್ವೇಷ ರಾಜಕಾರಣ, ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details