ಕರ್ನಾಟಕ

karnataka

ಈಶಾನ್ಯ ರಾಜ್ಯಗಳಿಗೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್; ಪ್ರಧಾನಿ ಮೋದಿ ಚಾಲನೆ

By

Published : May 29, 2023, 1:36 PM IST

ಪ್ರಧಾನಿ ಮೋದಿ ಅಸ್ಸಾಂನ ಮೊದಲ 'ವಂದೇ ಭಾರತ್ ಎಕ್ಸ್‌ಪ್ರೆಸ್​' ರೈಲಿ​ಗೆ ಚಾಲನೆ ನೀಡಿದರು.

ವಂದೇ ಭಾರತ್ ಎಕ್ಸ್‌ಪ್ರೆಸ್
ವಂದೇ ಭಾರತ್ ಎಕ್ಸ್‌ಪ್ರೆಸ್​ಗೆ ಚಾಲನೆ

ಗುವಾಹಟಿ (ಅಸ್ಸಾಂ) : ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅಸ್ಸಾಂನ ಮೊದಲ 'ವಂದೇ ಭಾರತ್ ಎಕ್ಸ್‌ಪ್ರೆಸ್​' ರೈಲಿಗೆ ಚಾಲನೆ ಕೊಟ್ಟರು. ಈ ಮೂಲಕ ಈಶಾನ್ಯ ಭಾರತವನ್ನು ಸಂಪರ್ಕಿಸುವ ಮೊದಲ ವಂದೇ ಭಾರತ್​​ ಎಕ್ಸ್​ಪ್ರೆಸ್​ ರೈಲು ಇದಾಗಲಿದ್ದು, ಗುವಾಹಟಿ ರೈಲು ನಿಲ್ದಾಣದಿಂದ ನ್ಯೂ ಜಲ್ಪೈಗುರಿಗೆ ಪ್ರಯಾಣಿಸಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಹಿಂದಿನ ಸರ್ಕಾರಗಳನ್ನು ಟೀಕಿಸಿದರು. "ಹಿಂದಿನ ಸರ್ಕಾರದಿಂದ ಈಶಾನ್ಯ ಜನರು ದೀರ್ಘಕಾಲ ಅಭಿವೃದ್ಧಿಯಿಂದ ದೂರವಿದ್ದರು" ಎಂದರು. ಮುಂದುವರೆದು, ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಮುಖ ಸ್ಥಳಗಳಾದ ಕಾಮಾಖ್ಯ ದೇವಾಲಯ, ಕಾಜಿರಂಗ ಅಭಯಾರಣ್ಯ, ಅಸ್ಸಾಂನ ಮಾನಸ್ ಟೈಗರ್ ರಿಸರ್ವ್, ಮೇಘಾಲಯದ ಶಿಲ್ಲಾಂಗ್ ಮತ್ತು ಚಿರಾಪುಂಜಿ ಮತ್ತು ಅರುಣಾಚಲ ಪ್ರದೇಶದ ತವಾಂಗ್‌ಗಳನ್ನು ಸಂಪರ್ಕಿಸುವ ಮೂಲಕ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.

2014 ರ ಮೊದಲು ಈಶಾನ್ಯಕ್ಕೆ ರೈಲ್ವೆಯ ಬಜೆಟ್ ₹ 2,500 ಕೋಟಿ ಆಗಿತ್ತು. ಈಗ ಅದು ₹10,000 ಕೋಟಿಗೂ ಹೆಚ್ಚು ಅಂದರೆ ನಾಲ್ಕು ಪಟ್ಟು ಬೆಳವಣಿಗೆಯಾಗಿದೆ. ಈಶಾನ್ಯದ ಎಲ್ಲ ಭಾಗಗಳನ್ನು ಶೀಘ್ರದಲ್ಲೇ ಬ್ರಾಡ್-ಗೇಜ್ ನೆಟ್ವರ್ಕ್ ಮೂಲಕ ಸಂಪರ್ಕಿಸಲಾಗುವುದು. ಇದಕ್ಕಾಗಿ ₹1 ಲಕ್ಷ ಕೋಟಿ ಖರ್ಚು ಮಾಡಲಾಗುತ್ತಿದೆ. ಈಶಾನ್ಯದ ಸಂಪರ್ಕಕ್ಕೆ ಸಂಬಂಧಿಸಿದಂತೆ ಮೂರು ಕಾಮಗಾರಿಗಳು ನಡೆಯುತ್ತಿವೆ ಎಂದರು.

"ಇಂದು ಅಸ್ಸಾಂ ಸೇರಿದಂತೆ ಇಡೀ ಈಶಾನ್ಯದ ರೈಲು ಸಂಪರ್ಕಕ್ಕೆ ಮಹತ್ವದ ದಿನವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಇಲ್ಲಿ ವಾಸಿಸುವ ಜನರ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಇದು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತದೆ" ಎಂದು ನರೇಂದ್ರ ಮೋದಿ ಹೇಳಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ಅಭೂತಪೂರ್ವ ಸಾಧನೆಗಳಾಗಿವೆ. ನವ ಭಾರತದ ನಿರ್ಮಾಣವಾಗುತ್ತಿದೆ. ನಮ್ಮ ಸರ್ಕಾರ ಬಡವರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಮೂಲಭೂತ ಸೌಕರ್ಯಗಳು ಎಲ್ಲರಿಗೂ ಸಮಾನ. ಅದಕ್ಕಾಗಿಯೇ ನಮ್ಮ ಸರ್ಕಾರ ಮೂಲಸೌಕರ್ಯ ನಿರ್ಮಾಣ, ಅಭಿವೃದ್ಧಿ ಮಾಡುತ್ತಿದೆ. ಇದು ಒಂದು ರೀತಿಯಲ್ಲಿ ನಿಜವಾದ ಸಾಮಾಜಿಕ ನ್ಯಾಯ, ನಿಜವಾದ ಜಾತ್ಯತೀತತೆ ಎಂದು ಮೋದಿ ಸಮರ್ಥಿಸಿಕೊಂಡರು.

ವಾರದಲ್ಲಿ 6 ದಿನ ರೈಲು ಸಂಚಾರ: ವಂದೇ ಭಾರತ್ ಎಕ್ಸ್‌ಪ್ರೆಸ್ ರಾಜ್ಯದಲ್ಲಿ ವಾರದಲ್ಲಿ ಆರು ದಿನ ಸಂಚರಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಂಗಳವಾರ ಈ ರೈಲಿನ ಸೇವೆ ಇರುವುದಿಲ್ಲ. ಹೊಸ ಸೇವೆಯು ಗುವಾಹಟಿ ಮತ್ತು ನ್ಯೂ ಜಲ್ಪೈಗುರಿ ನಡುವಿನ 411 ಕಿಮೀ ದೂರವನ್ನು 5 ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತದೆ. ಇದರಿಂದಾಗಿ ಪ್ರಯಾಣದ ಸಮಯ ಕಡಿಮೆಯಾಗಲಿವೆ. ಪ್ರಸ್ತುತ ವೇಗದ ರೈಲು ಇದೇ ಮಾರ್ಗವನ್ನು ಕ್ರಮಿಸಲು 6 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಈ ಪ್ರದೇಶದಲ್ಲಿ ಅತಿ ವೇಗದ ರೈಲು ಆಗಲಿದ್ದು, ಐಟಿ ವೃತ್ತಿಪರರು, ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ:ಮುಂದಿನ ಫೆಬ್ರವರಿ- ಮಾರ್ಚ್‌ ವೇಳೆಗೆ 3 ರೀತಿಯ ವಂದೇ ಭಾರತ್ ರೈಲು: ರೈಲ್ವೇ ಸಚಿವ

ಇದನ್ನೂ ಓದಿ:ಕೇರಳದಲ್ಲಿ ನಿನ್ನೆ ಮೋದಿ ಚಾಲನೆ ನೀಡಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೋರಿಕೆ: ವಿಡಿಯೋ

ABOUT THE AUTHOR

...view details