ಕರ್ನಾಟಕ

karnataka

ಕೇರಳ ಯೋಧನ ಬೆನ್ನಿನ ಮೇಲೆ ಪಿಎಫ್​ಐ ಬರಹ ಕೇಸ್​ಗೆ ಬಿಗ್​ ಟ್ವಿಸ್ಟ್​: ಅಸಲಿ ಸತ್ಯ ಬಾಯ್ಬಿಟ್ಟ ಯೋಧನ ಸ್ನೇಹಿತ! ಏನದು ಗೊತ್ತಾ?

By ETV Bharat Karnataka Team

Published : Sep 26, 2023, 4:24 PM IST

ಕೇರಳ ಯೋಧನ ಮೇಲೆ ಹಲ್ಲೆ ಮಾಡಿ ಪಿಎಫ್​ಐ ಎಂದು ಬರೆದಿರುವುದು ಸುಳ್ಳು ಪ್ರಕರಣ ಎಂದು ಪೊಲೀಸರು ತನಿಖೆಯಲ್ಲಿ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯೋಧ ಮತ್ತು ಆತನ ಸ್ನೇಹಿತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕೇರಳ ಯೋಧನ ಬೆನ್ನಿನ ಮೇಲೆ ಪಿಎಫ್​ಐ ಬರಹ ಕೇಸ್​
ಕೇರಳ ಯೋಧನ ಬೆನ್ನಿನ ಮೇಲೆ ಪಿಎಫ್​ಐ ಬರಹ ಕೇಸ್​

ಕೊಲ್ಲಂ (ಕೇರಳ) :ಕೇರಳದ ಯೋಧನ ಮೇಲೆ ಆರು ಜನರು ಹಲ್ಲೆ ಮಾಡಿ, ಬೆನ್ನಿನ ಮೇಲೆ ಪಿಎಫ್​ಐ ಎಂದು ಬರೆಯಲಾಗಿದೆ ಎಂಬ ಆರೋಪ ಪ್ರಕರಣ ತಿರುವು ಪಡೆದುಕೊಂಡಿದೆ. ಘಟನೆಯ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಅಸಲಿ ಸತ್ಯವನ್ನು ಪತ್ತೆ ಮಾಡಿದ್ದು, ಇದೀಗ ಆರೋಪ ಮಾಡಿದ ಯೋಧ ಮತ್ತು ಆತನ ಸ್ನೇಹಿತನನ್ನು ಮಂಗಳವಾರ ಬಂಧಿಸಲಾಗಿದೆ.

ತನ್ನ ಮೇಲೆ ಹಲ್ಲೆ ಮಾಡಿ, ಬೆನ್ನ ಮೇಲೆ ನಿಷೇಧಿತ ಸಂಘಟನೆಯ ಹೆಸರು ಬರೆಯಲಾಗಿದೆ ಎಂದು ಆರೋಪ ಮಾಡಿದ್ದ ಯೋಧ ಮತ್ತು ಆತನ ಸ್ನೇಹಿತನೊಬ್ಬನನ್ನು ಬಂಧಿಸಲಾಗಿದೆ. ಘಟನೆಯ ಕುರಿತು ಇಬ್ಬರೂ ನಾನಾ ಹೇಳಿಕೆ ನೀಡುತ್ತಿದ್ದಾರೆ. ವಿಚಾರಣೆ ನಡೆಸಲಾಗುತ್ತಿದೆ. ಯೋಧನ ದೇಹದ ಮೇಲೆ ಯಾವುದೇ ಹಲ್ಲೆ ಮಾಡಿದ ಗುರುತುಗಳಿಲ್ಲ. ಅವರ ಹೇಳಿಕೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು.

ಯೋಧನ ಸ್ನೇಹಿತ ಹೇಳಿದ್ದಿಷ್ಟು:'ತನ್ನ ರಜೆ ದಿನಗಳನ್ನು ಮುಗಿಸಿ ಹೊರಡಬೇಕಿತ್ತು. ಕೊನೆಯ ದಿನದಂದು ಮದ್ಯಕೂಟ ನಡೆಸಿದಾಗ ತಾನು ಖ್ಯಾತಿ ಗಳಿಸಬೇಕು ಹೇಳಿದ. ಅದಕ್ಕಾಗಿ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಸುದ್ದಿ ಹಬ್ಬಿಸಲು ಪ್ಲಾನ್​ ಮಾಡಿದ. ಅದರಂತೆ ನನಗೆ ಹೊಡೆಯಲು ಕೇಳಿದ. ಆದರೆ, ನಾನು ಕುಡಿದ ಕಾರಣ ಸಾಧ್ಯವಿಲ್ಲ ಎಂದು ಹೇಳಿದೆ. ಆಗ ಆತನೇ ತನ್ನ ಬೆನ್ನ ಮೇಲೆ ಬರೆಯಲು ಹೇಳಿದ. ಮೊದಲು ನಾನು 'ಡಿಎಫ್​ಐ' ಎಂದು ಬರೆದೆ. ಆದರೆ, ಆತನ 'ಪಿಎಫ್​ಐ' ಎಂದು ಬರೆಯಲು ಹೇಳಿದ. ಅದರಂತೆಯೇ ನಾನು ಗೀಚಿದೆ'. ಹಲ್ಲೆ ಮಾಡಲು ಸಾಧ್ಯವಿಲ್ಲ ಎಂದಾಗ ಕೈ, ಬಾಯಿಗೆ ಟೇಪ್​ನಿಂದ ಸುತ್ತಿ ಮನೆಯಾಚೆ ಎಳೆದು ಬಿಸಾಡಿ ಹೋಗಲು ಹೇಳಿದ. ಅದರಂತೆಯೇ ನಾನು ಮಾಡಿದೆ ಎಂದು ವಿಚಾರಣೆಯಲ್ಲಿ ಹೇಳಿದ್ದಾನೆ.

ಯೋಧ ಹೆಸರುವಾಸಿಯಾಗಲು ಬಯಸಿದ್ದ. ಅದಕ್ಕಾಗಿಯೇ ಈ ಸಂಪೂರ್ಣ ನಾಟಕವನ್ನು ರೂಪಿಸಲಾಯಿತು ಎಂದು ಯೋಧನ ಸ್ನೇಹಿತ ಹೇಳಿಕೊಂಡಿದ್ದಾನೆ. ಈ ರೀತಿ ಸುಳ್ಳು ಹೇಳಿಕೆ ನೀಡಲು ಯೋಧ ನಾನಾ ಕಾರಣಗಳನ್ನು ನೀಡುತ್ತಿದ್ದು, ಅವುಗಳನ್ನು ಪರಿಶೀಲಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದರು. ಬೆನ್ನಿನ ಮೇಲೆ ಬರೆಯಲು ಬಳಸಿದ ಹಸಿರು ಬಣ್ಣ, ಬ್ರಷ್ ಮತ್ತು ಟೇಪ್ ಅನ್ನು ಸಹ ಪೊಲೀಸರು ಯೋಧನ ಸ್ನೇಹಿತನ ಮನೆಯಿಂದ ವಶಪಡಿಸಿಕೊಂಡಿದ್ದಾರೆ.

ಆರೋಪವೇನು?:ಕಡಕ್ಕಲ್‌ನ ನಿವಾಸಿಯಾಗಿರುವ ಯೋಧ, ತನ್ನ ಮನೆಯ ಸಮೀಪ ಆರು ಮಂದಿ ಸೇರಿ ನನ್ನ ಮೇಲೆ ಹಲ್ಲೆ ಮಾಡಿದರು. ಬಳಿಕ ಬೆನ್ನಿನ ಮೇಲೆ ಪಿಎಫ್​ಐ ಎಂದು ಗೀಚಿದರು ಎಂದು ದೂರು ನೀಡಿದ್ದ. ದೂರಿನ ಮೇರೆಗೆ ಪೊಲೀಸರು, ಸೆಕ್ಷನ್ 143 (ಕಾನೂನುಬಾಹಿರವಾಗಿ ಗುಂಪು), 147 (ಗಲಭೆ), 153 (ಗಲಭೆ ಉಂಟುಮಾಡುವ ಉದ್ದೇಶ), 323 (ಹಲ್ಲೆ) ಸೇರಿ ವಿವಿಧ ಕಲಂಗಳಡಿ ಎಫ್‌ಐಆರ್ ದಾಖಲಿಸಿದ್ದರು.

ದೇಶದಲ್ಲಿ ಉಗ್ರ ಚಟುವಟಿಕೆಗಳಿಂದಾಗಿ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. (ಪಿಟಿಐ)

ಇದನ್ನೂ ಓದಿ:'ಬಂದ್‌'ಬಸ್ತ್​ಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿಗೆ ನೀಡಲಾದ ಆಹಾರದಲ್ಲಿ ಸತ್ತ ಇಲಿ!

ABOUT THE AUTHOR

...view details