ಮುಂಬೈ(ಮಹಾರಾಷ್ಟ್ರ):ಜಗತ್ತಿನಾದ್ಯಂತ ಕೋವಿಡ್ ರೂಪಾಂತರ ತಳಿಯಾದ ಒಮಿಕ್ರೋನ್ ಈಗಾಗಲೇ ಆತಂಕ ಮೂಡಿಸಿದೆ. ಈ ನಿಟ್ಟಿನಲ್ಲಿ ದೇಶದ ಕೆಲವು ರಾಜ್ಯಗಳು ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ.
ಮಹಾರಾಷ್ಟ್ರ ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಂಗಳವಾರ ರಾತ್ರಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಒಮಿಕ್ರೋನ್ ಸೋಂಕು ಹರಡಿರುವ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.
ಕೇಂದ್ರ ಸರ್ಕಾರವು ಈಗಾಗಲೇ ಒಮಿಕ್ರೋನ್ ಅಪಾಯದಲ್ಲಿರುವ ದೇಶಗಳನ್ನು ಪ್ರಕಟಿಸಿದೆ. ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಇಸ್ರೇಲ್ ರಾಷ್ಟ್ರಗಳನ್ನು ಸೋಂಕಿನ ಅಪಾಯದ ಪಟ್ಟಿಯಲ್ಲಿ ಗುರ್ತಿಸಲಾಗಿದ್ದು, ಆ ರಾಷ್ಟ್ರಗಳಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯವಾಗಿದೆ.
ಅಂದಹಾಗೆ, ಆ ರಾಷ್ಟ್ರಗಳಿಂದ ಬಂದ ಪ್ರಯಾಣಿಕರಿಗೆ ಎರಡನೇ, ನಾಲ್ಕನೇ ಮತ್ತು ಏಳನೇ ದಿನದಂದು ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಲಾಗುತ್ತದೆ. ಈ ವೇಳೆ ಸೋಂಕು ಕಂಡು ಬಂದರೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಏಳು ದಿನಗಳ ನಂತರ ಸೋಂಕು ಪರೀಕ್ಷೆಯ ವರದಿ ನೆಗೆಟಿವ್ ಬಂದರೆ ಅವರನ್ನು ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತದೆ.
ಸೋಂಕು ಕಾಣಿಸಿಕೊಳ್ಳದ ದೇಶಗಳಿಂದ ರಾಜ್ಯಕ್ಕೆ ಆಗಮಿಸಿದರೂ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಒಂದು ವೇಳೆ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಕಂಡುಬಂದರೂ 14 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ.
ಭಾರತದಲ್ಲಿ ಇದುವರೆಗೆ ಯಾವುದೇ ಒಮಿಕ್ರೋನ್ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಂಗಳವಾರ ತಿಳಿಸಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ:OmicronVariant: ಪುಣೆ, ನಾಗ್ಪುರ್ದಲ್ಲಿ ಶಾಲೆ ಪುನಾರಂಭ ದಿನಾಂಕ ಮುಂದೂಡಿಕೆ