ಕರ್ನಾಟಕ

karnataka

ಒಡಿಶಾ ರೈಲು ದುರಂತ, 124 ಶವಗಳ ಗುರುತೇ ಸಿಕ್ತಿಲ್ಲ: ಡಿಎನ್​ಎ ಪರೀಕ್ಷೆಗೆ ಮುಂದಾದ ಸರ್ಕಾರ

By

Published : Jun 5, 2023, 4:32 PM IST

ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಗುರುತು ಸವಾಲಾಗಿದೆ. ಶವಗಳು ತೀವ್ರ ವಿರೂಪಗೊಂಡ ಕಾರಣ ಪತ್ತೆಯಾಗುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಡಿಎನ್ಎ ಪರೀಕ್ಷೆಗೆ ಮುಂದಾಗಿದ್ದಾರೆ.

ಒಡಿಶಾ ರೈಲು ದುರಂತದ 124 ಶವಗಳ ಗುರುತೇ ಸಿಕ್ತಿಲ್ಲ
ಒಡಿಶಾ ರೈಲು ದುರಂತದ 124 ಶವಗಳ ಗುರುತೇ ಸಿಕ್ತಿಲ್ಲ

ಬಾಲಸೋರ್ (ಒಡಿಶಾ):ಒಡಿಶಾ ರೈಲು ದುರಂತ ಅದೆಷ್ಟು ಭೀಕರತೆಯನ್ನು ಸೃಷ್ಟಿಸಿದೆ ಎಂದರೆ, ದುರ್ಮರಣಕ್ಕೀಡಾದ 275 ಮಂದಿಯ ಪೈಕಿ 124 ಶವಗಳ ಗುರುತು ಕೂಡ ಸಿಗುತ್ತಿಲ್ಲ. ಅಪಘಾತದಲ್ಲಿ ಮುಖ ಮತ್ತು ದೇಹ ಛಿದ್ರವಾಗಿರುವ ಕಾರಣ ಸಾವನ್ನಪ್ಪಿದವರನ್ನು ಅವರ ಕುಟುಂಬಸ್ಥರು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಈವರೆಗೆ 151 ಶವಗಳನ್ನು ಗುರುತಿಸಲಾಗಿದೆ.

ದುರ್ಘಟನೆ ಸಂಭವಿಸಿ ಎರಡೂವರೆ ದಿನಗಳು ಕಳೆದಿದ್ದು ಶವ ಗುರುತು ಕಾರ್ಯ ಮುಂದುವರಿದಿದೆ. ವಿವಿಧೆಡೆಗಳಿಂದ ಬಂದ ಜನರು ಶವ ಗುರುತಿಸುವಲ್ಲಿ ತೊಡಗಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಕೆಲ ಶವಗಳು ವಿರೂಪಗೊಂಡಿದ್ದು, ಇವುಗಳಲ್ಲಿ ತಮ್ಮವರು ಯಾರೆಂಬುದನ್ನು ಪತ್ತೆ ಮಾಡಲು ಪರದಾಡುವಂತಾಗಿದೆ. ಹೀಗಾಗಿ ಶವಾಗಾರಗಳಲ್ಲಿ ಇನ್ನೂ 124 ಶವಗಳು ಹಾಗೆಯೇ ಉಳಿದುಕೊಂಡಿವೆ.

ಡಿಎನ್​ಎ ಪರೀಕ್ಷೆ:ಶವಗಳ ಗುರುತು ಕಷ್ಟವಾದ ಕಾರಣ ವಿಲೇವಾರಿ ಮಾಡುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದಾಗಿ ಶವಗಳ ಡಿಎನ್​ಎ ಪರೀಕ್ಷೆ ಮಾಡುವ ಮೂಲಕ ಅವರ ಕುಟುಂಬಸ್ಥರಿಗೆ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ಬೆಳಗ್ಗೆಯವರೆಗೆ 151 ಮೃತದೇಹಗಳನ್ನು ಮಾತ್ರ ಗುರುತಿಸಲಾಗಿದೆ.

ಶವಗಳ ಚಿತ್ರಗಳನ್ನು ವೀಕ್ಷಿಸಿ ಗುರುತಿಸುವಲ್ಲಿ ಜನರು ನಿರತ

ಒಡಿಶಾದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಹೇಳಿಕೆ ನೀಡಿದ್ದು, ನಿಗದಿತ ಪ್ರಕ್ರಿಯೆಯ ನಂತರ ಎಲ್ಲಾ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ. ಮೃತದೇಹಗಳನ್ನು ಉಚಿತವಾಗಿ ಸಾಗಿಸಲು ಎಲ್ಲಾ ವ್ಯವಸ್ಥೆಗಳನ್ನು ಒಡಿಶಾ ಸರ್ಕಾರ ಮಾಡಿದೆ. ತ್ರಿವಳಿ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 288 ಅಲ್ಲ, 275 ಆಗಿದೆ ಎಂದು ಸ್ಪಷ್ಟಪಡಿಸಿರುವ ಅವರು, ಕೆಲವು ದೇಹಗಳನ್ನು ಎರಡೆರಡು ಬಾರಿ ಎಣಿಸಲಾಗಿದೆ. ಹೀಗಾಗಿ ಸಂಖ್ಯೆ ಹೆಚ್ಚಾಗಿತ್ತು. ಮರು ಎಣಿಕೆಯ ಬಳಿಕ ಸರಿಪಡಿಸಲಾಗಿದೆ ಎಂದು ತಿಳಿಸಿದರು.

ಶವ ಪತ್ತೆಗಾಗಿ ಪರದಾಡುತ್ತಿರುವ ಜನರು

ಶವ ಸಂರಕ್ಷಣೆಗೆ ವಿಶೇಷ ತಂಡ:ಇನ್ನು, ಗುರುತು ಪತ್ತೆಯಾಗದ ಶವಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ವಿಶೇಷ ತಂಡಗಳನ್ನು ಒಡಿಶಾಗೆ ಕಳುಹಿಸಿಕೊಟ್ಟಿದೆ. ವಿವಿಧ ಆಸ್ಪತ್ರೆಗಳ ಶವಾಗಾರಗಳಲ್ಲಿ ಇಡಲಾಗಿರುವ ಅಪರಿಚಿತ ಮೃತದೇಹಗಳನ್ನು ಸಂರಕ್ಷಿಸಲು ಸೂಚಿಸಲಾಗಿದೆ. ಹೀಗಾಗಿ ವಿಶೇಷ ತಂಡ ಈಗಾಗಲೇ ಒಡಿಶಾಗೆ ಆಗಮಿಸಿದ್ದು, ಸಂರಕ್ಷಣೆ ಕಾರ್ಯದ ಮೇಲ್ವಿಚಾರಣೆಯಲ್ಲಿ ತೊಡಗಿಕೊಂಡಿದೆ.

ತಮ್ಮವರ ಹುಡುಕಲು ಶವಾಗಾರಗಳಿಗೆ ಬಂದಿರುವ ಜನರು ಹಲವು ಗುರುತುಗಳನ್ನು ಹಿಡಿದು ತಂದಿದ್ದಾರೆ. ಆದರೆ, ತೀವ್ರ ಅಪಘಾತದಿಂದ ಕೆಲ ದೇಹಗಳು ಗುರುತಿಸಲೂ ಸಾಧ್ಯವಾಗದಷ್ಟು ವಿರೂಪಗೊಂಡಿವೆ. ಇನ್ನೂ ಕೆಲವರು ಶವಗಳನ್ನು ಪಡೆಯಲು ಬಾರದ ಕಾರಣ ಹಾಗೆಯೇ ಉಳಿದುಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶವಾಗಾರದ ಮುಂದೆ ತಮ್ಮವರ ಕಳೆದುಕೊಂಡ ಮಹಿಳೆಯ ರೋಧನ

ತ್ರಿವಳಿ ರೈಲು ಅಪಘಾತದಿಂದ ಹಾನಿಗೊಳಗಾದ ಬನಹಗಾ ಗ್ರಾಮದ ಹಳಿಗಳನ್ನು ದುರಸ್ತಿ ಮಾಡಲಾಗಿದ್ದು, ರೈಲು ಸಂಚಾರ ಆರಂಭಿಸಲಾಗಿದೆ. ಭಾನುವಾರ ಮೊದಲ ರೈಲು ಸಂಚಾರ ಆರಂಭವಾಗಿದ್ದು, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹಾಜರಿದ್ದು, ಸುರಕ್ಷಿತ ಪ್ರಯಾಣಕ್ಕಾಗಿ ಪ್ರಾರ್ಥಿಸಿದರು. ಅಪಘಾತ ಸಂಭವಿಸಿದ 51 ಗಂಟೆಗಳಲ್ಲಿ ಹಾಳಾಗಿದ್ದ ಹಳಿಗಳನ್ನು ಮರುಜೋಡಣೆ ಮಾಡಲಾಗಿದೆ.

ಭೀಕರ ಅಪಘಾತ:ಜೂನ್​ 2 ರಂದು (ಶುಕ್ರವಾರ) ಸಂಜೆ 7 ಗಂಟೆ ಸುಮಾರಿನಲ್ಲಿ ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್​ ರೈಲು ಚಲಿಸುತ್ತಿದ್ದಾಗಲೇ ಹಳಿ ತಪ್ಪಿತ್ತು. ಇದರಿಂದ ಇನ್ನೊಂದು ಲೈನ್​ನಲ್ಲಿ ನಿಂತಿದ್ದ ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರ ರಭಸಕ್ಕೆ ಗೂಡ್ಸ್​ ಮತ್ತು ಕೋರಮಂಡಲ್​ ರೈಲಿನ ಬೋಗಿಗಳು ಮತ್ತೊಂದು ಹಳಿಯ ಮೇಲೆ ಬಿದ್ದಿವೆ. ಅದೇ ಸಮಯಕ್ಕೆ ವಿರುದ್ಧ ದಿಕ್ಕಿನಿಂದ ಎಸ್‌ಎಂವಿಪಿ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಯಶವಂತಪುರದಿಂದ ಬಂದ ಹೌರಾ ಎಕ್ಸ್​ಪ್ರೆಸ್​ ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ವೇಗವಾಗಿ ಡಿಕ್ಕಿಯಾಗಿದೆ. ಇದರಿಂದ ಭೀಕರತೆ ಉಂಟಾಗಿತ್ತು. ಮೂರು ರೈಲುಗಳ ನಡುವಿನ ತಿಕ್ಕಾಟದಲ್ಲಿ ಈವರೆಗೆ 275 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:ಒಡಿಶಾ ರೈಲು ದುರಂತ: ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣದ ಭರವಸೆ ನೀಡಿದ ವೀರೇಂದ್ರ ಸೆಹ್ವಾಗ್

ABOUT THE AUTHOR

...view details