ಕರ್ನಾಟಕ

karnataka

ಆನೆಗಳ ಸಾವು ತಡೆಗೆ ರೈಲ್ವೆಯಿಂದ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಕೆ ಒಪ್ಪಂದ

By

Published : Mar 22, 2023, 8:39 AM IST

Updated : Mar 22, 2023, 8:44 AM IST

ಈಶಾನ್ಯ ಗಡಿನಾಡ ರೈಲ್ವೆಯು ಹಳಿಗಳಲ್ಲಿ ಆನೆಗಳಿಗೆ ರೈಲು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕೃತಕ ಬುದ್ಧಿಮತ್ತೆ ಆಧಾರಿತ ಒಳನುಗ್ಗುವಿಕೆ ಪತ್ತೆ ವ್ಯವಸ್ಥೆಯನ್ನು ಅಳವಡಿಸುವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

NF Railways to use AI to prevent train elephant collision
ಆನೆಗಳಿಗೆ ರೈಲು ಡಿಕ್ಕಿ ಹೊಡೆಯವುದನ್ನು ತಡೆಯಲು ಈಶಾನ್ಯ ಗಡಿನಾಡು ರೈಲ್ವೆಯಿಂದ AI ಬಳಕೆ

ಗುವಾಹಟಿ : ರೈಲ್ವೇ ಹಳಿಯಲ್ಲಿ ಆನೆ ಮತ್ತು ರೈಲುಗಳ ನಡುವಿನ ಅಪಘಾತಗಳಿಗೆ ಕಡಿವಾಣ ಹಾಕಲು ಈಶಾನ್ಯ ಗಡಿನಾಡ ರೈಲ್ವೆ ಮುಂದಾಗಿದೆ. ಈ ಸಂಬಂಧ ಕೃತಕ ಬುದ್ಧಿಮತ್ತೆ ಆಧಾರಿತ ಒಳನುಗ್ಗುವಿಕೆ ಪತ್ತೆ ವ್ಯವಸ್ಥೆ (ಐಡಿಎಸ್​​) ಅಳವಡಿಸುವ ನಿಟ್ಟಿನಲ್ಲಿ ಈಶಾನ್ಯ ಗಡಿನಾಡ ರೈಲ್ವೆಯು ರೈಲ್​​ಟೆಲ್ ಕಾರ್ಪೋರೇಷನ್​ ಆಫ್​​ ಇಂಡಿಯಾದ ಜೊತೆ ಒಪ್ಪಂದ ಮಾಡಿಕೊಂಡಿದೆ. ಸೋಮವಾರ ಅಸ್ಸಾಂನ ಗುವಾಹಟಿಯ ಮಾಲಿಗಾಂವ್‌ನಲ್ಲಿ ಎನ್‌ಎಫ್‌ಆರ್ ಜನರಲ್ ಮ್ಯಾನೇಜರ್ ಅನ್ಶುಲ್ ಗುಪ್ತಾ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಬಗ್ಗೆ ಮಾಹಿತಿ ನೀಡಿರುವ ಈಶಾನ್ಯ ಗಡಿ ರೈಲ್ವೆ ಸಿಪಿಆರ್​ಓ ಸಬ್ಯಸಾಚಿ, "ನಾವು ಕಾಡು ಪ್ರಾಣಿಗಳು ರೈಲ್ವೇ ಹಳಿಗಳ ಬಳಿ ಬರುವುದನ್ನು ತಡೆಯಲು ಹಲವು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ವಿಶೇಷವಾಗಿ ಆನೆಗಳು ರೈಲ್ವೇ ಹಳಿಗಳ ಬಳಿ ಬರುವುದನ್ನು ಮತ್ತು ಇರುವುದನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳುತ್ತಿದ್ದೇವೆ. ಕೃತಕ ಬುದ್ಧಿ ಮತ್ತೆ ಆಧಾರಿತ ಐಡಿಎಸ್​​ ಅಳವಡಿಸುವುದು ನಮ್ಮ ಪ್ರಮುಖ ಕಾರ್ಯಗಳಲ್ಲಿ ಒಂದು" ಎಂದು ಹೇಳಿದರು.

ಪ್ರಾಯೋಗಿಕ ಪರೀಕ್ಷೆ ಯಶಸ್ವಿ:ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ವಿಭಾಗದ ಡೋರ್ಸ್ ಪ್ರದೇಶದ ಚಲ್ಸಾ-ಹಸಿಮಾರಾದಲ್ಲಿ ಮತ್ತು ಅಸ್ಸಾಂನ ಲುಮ್ಡಿಂಗ್ ವಿಭಾಗದ ಲಂಕಾ-ಹವಾಯಿಪುರ ವಿಭಾಗದಲ್ಲಿ ಕೈಗೊಂಡ ಐಡಿಎಸ್​​ನ ಪ್ರಾಯೋಗಿಕ ಯೋಜನೆ ಯಶಸ್ಸು ಕಂಡಿದೆ. ಈ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ಕ್ರಮೇಣ ಈಶಾನ್ಯ ಗಡಿನಾಡು ರೈಲ್ವೇ ವ್ಯಾಪ್ತಿಯ ಎಲ್ಲಾ ಆನೆ ಕಾರಿಡಾರ್​ಗಳಲ್ಲಿ ಸ್ಥಾಪಿಸಲು ನಿರ್ಧರಿಸಿರುವುದಾಗಿ ಎನ್‌ಎಫ್‌ಆರ್ ಜನರಲ್ ಮ್ಯಾನೇಜರ್ ಅನ್ಶುಲ್ ಗುಪ್ತಾ ತಿಳಿಸಿದರು.

ಹೇಗೆ ಕೆಲಸ ಮಾಡುತ್ತದೆ?: ಈ ಐಡಿಎಸ್​ ತಂತ್ರಜ್ಞಾನ ಕೃತಕ ಬುದ್ಧಿಮತ್ತೆಯ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಆಧಾರದ ಮೇಲೆ ಕೆಲಸ ಮಾಡುತ್ತದೆ. ಇದರಲ್ಲಿ ಆಪ್ಟಿಕಲ್​ ಫೈಬರ್​ಗಳನ್ನು ಸೆನ್ಸಾರ್​ಗಳಂತೆ ಬಳಸಲಾಗಿರುತ್ತದೆ. ಇದು ಕಾಡುಪ್ರಾಣಿಗಳ ಚಲನವಲನಗಳನ್ನು ಪತ್ತೆ ಮಾಡಿ, ಏನಾದರೂ ಸಮಸ್ಯೆ ಇದ್ದಲ್ಲಿ ರೈಲ್ವೆ ನಿಯಂತ್ರಣ ಕೊಠಡಿಗಳು, ಸ್ಟೇಷನ್ ಮಾಸ್ಟರ್‌ಗಳು, ಗೇಟ್‌ಮ್ಯಾನ್ ಮತ್ತು ಲೊಕೊ ಪೈಲಟ್‌ಗಳಿಗೆ ಮಾಹಿತಿ ಒದಗಿಸುತ್ತದೆ.

ಫೈಬರ್​ ಆಪ್ಟಿಕ್​ ಆಧಾರಿತ ಅಕೌಸ್ಟಿಕ್​ ವ್ಯವಸ್ಥೆಯನ್ನು ಈ ತಂತ್ರಜ್ಞಾನದಲ್ಲಿ ಅಳವಡಿಸಲಾಗಿದ್ದು, ಡಯಾಲಿಸಿಸ್ ಸ್ಕ್ಯಾಟರಿಂಗ್ ತತ್ವದ ಮೇಲೆ ಇದು ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನದಿಂದ 60 ಕಿ.ಮೀ ವ್ಯಾಪ್ತಿಯವರೆಗೆ ನಿಗಾ ಇಡಬಹುದು. ಇದರ ಜೊತೆಗೆ, ರೈಲು ಹಳಿಗಳ ಬಳಿ ಅನಧಿಕೃತ ಅಗೆಯುವಿಕೆಯಿಂದ ಉಂಟಾಗುವ ರೈಲು ಹಳಿಗಳ ಹಾನಿ, ರೈಲು ಅಪಘಾತವನ್ನು ತಡೆಯಲು, ಹಳಿಗಳ ಬಳಿ ಭೂಕುಸಿತಗಳು ಇತ್ಯಾದಿಗಳನ್ನು ಪತ್ತೆ ಮಾಡಲು ಇದು ಸಹಕಾರಿಯಾಗಿದೆ ಎಂದು ಹೇಳಿದೆ. ರೈಲ್ವೇ ಹಳಿಗಳ ಬಳಿ ಸಮೀಪಿಸುವ ಆನೆಗಳು ರೈಲಿಗೆ ಸಿಲುಕದಂತೆ ರಕ್ಷಿಸುವಲ್ಲಿ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದೆ ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ :ಆನೆಗೆ ಡಿಕ್ಕಿ ಹೊಡೆದ ರಾಜಧಾನಿ ಎಕ್ಸ್‌ಪ್ರೆಸ್‌ : ತಾಯಿ ಮತ್ತು ಮರಿ ಗಜ ಸಾವು

Last Updated :Mar 22, 2023, 8:44 AM IST

ABOUT THE AUTHOR

...view details