ಕರ್ನಾಟಕ

karnataka

ಹೆಚ್ಚುತ್ತಿರುವ ಕೋವಿಡ್​ ಭೀತಿ: ರಾಜ್ಯಗಳಲ್ಲಿ ಕೊರೊನಾ ತುರ್ತು ಸಭೆ

By

Published : Dec 22, 2022, 3:03 PM IST

ಕೋವಿಡ್ ಮುನ್ನೆಚ್ಚರಿಕೆ ಕ್ರಮ ವಹಿಸಲು ಆಯಾ ರಾಜ್ಯಗಳಲ್ಲಿ ಕೊರೊನಾ ತುರ್ತು ಸಭೆ ಕರೆಯಲಾಗಿದೆ.

covid cases
ಕೋವಿಡ್-19

ನವದೆಹಲಿ: ಚೀನಾ, ಜಪಾನ್ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಮತ್ತೆ ಕೊರೊನಾ ಉಲ್ಬಣಿಸಿದೆ. ಕಳೆದ 24 ಗಂಟೆಗಳಲ್ಲಿ ವಿಶ್ವದಾದ್ಯಂತ 1300ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಪರಿಣಾಮ ದೇಶದಲ್ಲಿ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು ಮತ್ತು ಪ್ರಸ್ತುತ ರಾಷ್ಟ್ರದಲ್ಲಿ ಕೊರೊನಾ ಸ್ಥಿತಿಗತಿ ಕುರಿತು ಪರಿಶೀಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದಾರೆ. ಇದಕ್ಕೂ ಮೊದಲು ಕೊರೊನಾ ಮುನ್ನೆಚ್ಚರಿಕೆ ಕ್ರಮ ವಹಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದು ಸೂಚಿಸಿತ್ತು. ಹೀಗಾಗಿ ಆಯಾ ರಾಜ್ಯಗಳಲ್ಲಿ ಕೊರೊನಾ ತುರ್ತು ಸಭೆ ಕರೆಯಲಾಗಿದೆ.

ಇಂದು ಕೊರೊನಾ ತುರ್ತು ಸಭೆ ಕರೆದ ದೆಹಲಿ ಸಿಎಂ: ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹಠಾತ್ ಹೆಚ್ಚುತ್ತಿರುವ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ತುರ್ತು ಸಭೆ ಕರೆದಿದ್ದಾರೆ. ಅಲ್ಲದೇ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ. ದೆಹಲಿ ಸರ್ಕಾರವು ಈಗಾಗಲೇ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದೆ. ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಉತ್ತರಾಖಂಡದಲ್ಲಿ ಶೀಘ್ರವೇ ಮಾರ್ಗಸೂಚಿ ಜಾರಿ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಉತ್ತರಾಖಂಡದಲ್ಲಿ ಶೀಘ್ರವೇ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಧನ್​ಸಿಂಗ್​ ರಾವತ್​ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ನಿರೀಕ್ಷಿಸಲಾಗಿದೆ. ಅಲ್ಲದೇ ನಾವು ಈಗಾಗಲೇ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಕೊರೊನಾ ಸಮಸ್ಯೆಗಳು ಕಂಡುಬಂದಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಲಾಗುವುದು ಎಂದಿದ್ದಾರೆ.

ಒಡಿಶಾದಲ್ಲಿ ಒಮಿಕ್ರಾನ್​ BF.7 ಪ್ರಕರಣ ಕಂಡುಬಂದಿತ್ತು: ಸೆಪ್ಟೆಂಬರ್​ 30ರಂದು ಮಹಿಳೆಯೊಬ್ಬರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಆಕೆಯಲ್ಲಿ ಒಮಿಕ್ರಾನ್​ನ ಹೊಸ ತಳಿಯಾದ BF.7 ಲಕ್ಷಣಗಳು ಕಂಡುಬಂದಿದ್ದವು. ಇದೀಗ ಅವರು ಅಮೆರಿಕದಲ್ಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯದಲ್ಲಿ ಆ ಬಳಿಕ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದರೆ ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಕೋವಿಡ್​ನೊಂದಿಗೆ ವ್ಯವಹರಿಸುವಾಗ ಕಲಿತ ಪಾಠಗಳನ್ನು ಪುನರಾವರ್ತಿಸಬೇಕು: ಕೋವಿಡ್ ಪ್ರಕರಣಗಳ ಪುನರುತ್ಥಾನದ ವರದಿಗಳ ಹಿನ್ನೆಲೆ ಎಲ್ಲಾ ಜನರು ಜಾಗರೂಕರಾಗಿರಬೇಕು ಮತ್ತು ಅದನ್ನು ನಿಭಾಯಿಸುವಲ್ಲಿ ಕಲಿತ ಪಾಠಗಳನ್ನು ಪುನರುಚ್ಚರಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಸದ್ಯ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೆ ಶೀತ, ಕೆಮ್ಮಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು. ಅಲ್ಲದೇ ಕೇಂದ್ರ ಸರ್ಕಾರದ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದಿದ್ದಾರೆ.

ಉತ್ತರಪ್ರದೇಶದಲ್ಲಿ ನಿರ್ಗತಿಕರಿಗೆ ಕೊರೊನಾ ಶೆಲ್ಟರ್​: ಕೊರೊನಾ ಭೀತಿ ನಡುವೆ ಉತ್ತರಪ್ರದೇಶ ಯೋಗಿ ಸರ್ಕಾರವೂ ಅಲರ್ಟ್​ ಆಗಿದೆ. ನಿರ್ಗತಿಕರನ್ನು ಕೊರೊನಾದಿಂದ ರಕ್ಷಿಸಲು ರಾತ್ರಿ ಶೆಲ್ಟರ್​​ಗಳನ್ನು ನಿರ್ಮಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ಅಲ್ಲದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಆದೇಶ ನೀಡಿದ್ದು, ಇಂದು ತುರ್ತು ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ.

ಇದನ್ನೂ ಓದಿ:ಕೊರೊನಾ ಭೀತಿ: ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚಿಸಲು ಸಿಎಂ ಮಹತ್ವದ ಸಭೆ

ABOUT THE AUTHOR

...view details