ಕರ್ನಾಟಕ

karnataka

ಕುಸ್ತಿ ಒಕ್ಕೂಟದ ವಿವಾದಕ್ಕೆ ಹೊಸ ತಿರುವು: ಹಿರಿಯರ ವಿರುದ್ಧ ಕಿರಿಯರು ಅಖಾಡಕ್ಕೆ

By ETV Bharat Karnataka Team

Published : Jan 3, 2024, 9:13 PM IST

Wrestlers Protest: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಪ್ರಕರಣದ ವಿವಾದ ಹೊಸ ತಿರುವು ಪಡೆದಿದೆ. ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ವಿರುದ್ಧ ಕಿರಿಯ ಕುಸ್ತಿಪಟುಗಳು ಪ್ರತಿಭಟನೆಗೆ ಇಳಿದಿದ್ದಾರೆ.

my-mother-is-getting-phone-threats-from-brij-bhushans-goons-sakshi-malik
ಕುಸ್ತಿ ಒಕ್ಕೂಟದ ವಿವಾದವು ಹೊಸ ತಿರುವು: ಹಿರಿಯರ ವಿರುದ್ಧ ಕಿರಿಯರು ಅಖಾಡಕ್ಕೆ

ನವದೆಹಲಿ:ಭಾರತೀಯ ಕುಸ್ತಿ ಒಕ್ಕೂಟದ ವಿವಾದವು ಹೊಸ ತಿರುವು ಪಡೆದಿದೆ. ಪ್ರತಿಷ್ಠಿತ ಪ್ರಶಸ್ತಿಗಳ ವಿಜೇತರು ಹಾಗೂ ಹಿರಿಯ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ವಿರುದ್ಧ ಕಿರಿಯ ಕುಸ್ತಿಪಟುಗಳು ತಿರುಗಿ ಬಿದ್ದಿದ್ದಾರೆ. ದೆಹಲಿಯ ಜಂತರ್‌ ಮಂತರ್‌ನಲ್ಲಿ ಮೂವರ ವಿರುದ್ಧವೂ ಕಿರಿಯ ಕುಸ್ತಿಪಟುಗಳ ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ, ತಮ್ಮ ತಾಯಿಗೆ ಬೆದರಿಕೆ ಫೋನ್ ಕರೆಗಳು ಬರುತ್ತಿವೆ ಎಂದ ಸಾಕ್ಷಿ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಸಂಬಂಧ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಸೇರಿ ಇಡೀ ಒಕ್ಕೂಟದ ವಿರುದ್ಧ ಬಜರಂಗ್, ಸಾಕ್ಷಿ, ವಿನೇಶ್ ಸಮರ ಸಾರಿದ್ದಾರೆ. ಈ ಕುರಿತು ಕಾನೂನು ಹೋರಾಟವನ್ನೂ ನಡೆಸುತ್ತಿರುವ ಹಿರಿಯ ಕುಸ್ತಿಪಟುಗಳು ತಮ್ಮ ಪ್ರಶಸ್ತಿಗಳನ್ನು ವಾಪಸ್​ ಮಾಡಿದ್ದಾರೆ. ಈಗಾಗಲೇ ಸಾಕ್ಷಿ ಮಲಿಕ್ ಕುಸ್ತಿಯನ್ನೇ ತೊರೆದಿದ್ದಾರೆ. ಮತ್ತೊಂದೆಡೆ, ಬಜರಂಗ್‌ ಪುನಿಯಾ ತಮ್ಮ ಪದ್ಮಶ್ರೀ ಪ್ರಶಸ್ತಿ ಹಿಂತಿರುಗಿಸುವುದಾಗಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರೆ, ವಿನೇಶ್ ಫೋಗಟ್ ತಮ್ಮ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ವಾಪಸ್​ ಮಾಡಿದ್ದು, ಅವುಗಳನ್ನು ಇತ್ತೀಚಿಗೆ ದೆಹಲಿಯ ಕರ್ತವ್ಯ ಪಥದಲ್ಲಿ ಇಟ್ಟು ಬಂದಿದ್ದರು.

ಹಿರಿಯರ ವಿರುದ್ಧ ಕಿರಿಯರು ಅಖಾಡಕ್ಕೆ: ಇದರ ನಡುವೆ ಅಗ್ರ ಕುಸ್ತಿಪಟುಗಳ ವಿರುದ್ಧ ಕಿರಿಯ ಕುಸ್ತಿಪಟುಗಳು ಹೋರಾಟಕ್ಕೆ ಇಳಿದಿದ್ದಾರೆ. ದೆಹಲಿಯ ಜಂತರ್‌ ಮಂತರ್‌ನಲ್ಲಿ ನೂರಾರು ಜೂನಿಯರ್ ಕುಸ್ತಿಪಟುಗಳು ಬುಧವಾರ ಸಮಾವೇಶಗೊಂಡು ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ವೃತ್ತಿಜೀವನದ ಒಂದು ವರ್ಷವು ನಷ್ಟವಾಗಿದೆ. ಇದಕ್ಕೆ ಈ ಮೂವರು ಹಿರಿಯ ಕುಸ್ತಿಪಟುಗಳೇ ಕಾರಣ ಎಂದು ಆರೋಪಿಸಿದ್ದಾರೆ.

ಬಾಗ್‌ಪತ್‌ನ ಛಪ್ರೌಲಿಯಲ್ಲಿರುವ ಆರ್ಯ ಸಮಾಜ ಅಖಾರಾ, ನರೇಲಾದ ವೀರೇಂದ್ರ ಕುಸ್ತಿ ಅಕಾಡೆಮಿ ಸೇರಿ ವಿವಿಧ ಭಾಗಗಳಿಂದ ಬಸ್‌ಗಳಲ್ಲಿ ಬಂದಿದ್ದ ಸುಮಾರು 300 ಮಂದಿ ಕಿರಿಯ ಕುಸ್ತಿಪಟುಗಳು ಭಿತ್ತಿಚಿತ್ರಗಳನ್ನು ಹಿಡಿದು ಪುನಿಯಾ, ಮಲಿಕ್ ಮತ್ತು ಫೋಗಟ್ ವಿರುದ್ಧ ಘೋಷಣೆಗಳನ್ನು ಕೂಗಿದರು. 'ಯುಡಬ್ಲ್ಯುಡಬ್ಲ್ಯು ಈ 3 ಕುಸ್ತಿಪಟುಗಳಿಂದ ನಮ್ಮ ಕುಸ್ತಿಯನ್ನು ಉಳಿಸಿ' ಎಂಬ ಬ್ಯಾನರ್‌ಗಳನ್ನು ಪ್ರದರ್ಶಿಸಿದರು.

ವಿಪರ್ಯಾಸವೆಂದರೆ, ಸುಮಾರು ಒಂದು ವರ್ಷದ ಹಿಂದೆ ಇದೇ ಸ್ಥಳದಲ್ಲಿ ಬಜರಂಗ್, ಸಾಕ್ಷಿ, ವಿನೇಶ್ ಪ್ರತಿಭಟನೆ ನಡೆಸಿದ್ದರು. ಲೈಂಗಿಕ ಕಿರುಕುಳ ಆರೋಪದ ಮೇಲೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಹೋರಾಟ ಕೈಗೊಂಡಿದ್ದರು. ಆಗ ರೈತ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳು, ಮಹಿಳಾ ಸಂಘಟನೆಗಳು, ಕುಸ್ತಿ ಸಂಘಟನೆಗಳ ಸದಸ್ಯರು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಂದ ಈ ಮೂವರು ಬೆಂಬಲಿಸಲು ಪಡೆದಿದ್ದರು. ಈಗ ತಮ್ಮ ಕುಸ್ತಿ ಸಮುದಾಯದಿಂದಲೇ ಪ್ರತಿಭಟನೆಯನ್ನು ಎದುರಿಸುವಂತಾಗಿದೆ.

ಬೆದರಿಕೆ ಫೋನ್ ಕರೆಗಳು ಬರುತ್ತಿವೆ - ಸಾಕ್ಷಿ ಮಲಿಕ್:ಇದೇ ವೇಳೆ, ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರ ಸಹವರ್ತಿಗಳಿಂದ ತನ್ನ ತಾಯಿಗೆ ಬೆದರಿಕೆ ಫೋನ್ ಕರೆಗಳು ಬರುತ್ತಿವೆ ಎಂದು ಒಲಿಂಪಿಕ್​ ಪದಕ ವಿಜೇತೆ ಸಾಕ್ಷಿ ಮಲಿಕ್ ಆರೋಪಿಸಿದ್ದಾರೆ.ಅಲ್ಲದೇ, ಇತ್ತೀಚೆಗೆ ನಡೆದ ಒಕ್ಕೂಟದ ಚುನಾವಣೆಯಲ್ಲಿ ಆಯ್ಕೆಯಾದ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಎಂಬ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ ಹೊಸ ಫೆಡರೇಶನ್‌ನೊಂದಿಗೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

ಕಳೆದ ಎರಡ್ಮೂರು ದಿನಗಳಿಂದ ಬ್ರಿಜ್ ಭೂಷಣ್ ಸಿಂಗ್ ಅವರ ಗೂಂಡಾಗಳು ಸಕ್ರಿಯರಾಗಿದ್ದಾರೆ. ನನ್ನ ತಾಯಿಗೆ ಫೋನ್ ಕರೆಗಳ ಮೂಲಕ ಬೆದರಿಕೆಗಳು ಬರುತ್ತಿವೆ. ಜನ ಕರೆ ಮಾಡಿ ನನ್ನ ಕುಟುಂಬದವರ ಮೇಲೆ ಕೇಸ್​ ದಾಖಲಿಸುವುದಾಗಿ ಹೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜನರು ನಮ್ಮನ್ನು ನಿಂದಿಸುತ್ತಿದ್ದಾರೆ. ಆದರೆ, ಇಂತಹವರು ತಮ್ಮ ಮನೆಯಲ್ಲೂ ಸಹೋದರಿಯರು ಮತ್ತು ಹೆಣ್ಣುಮಕ್ಕಳಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದು ಮಲಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕುಸ್ತಿಗೆ ಕಣ್ಣೀರ ವಿದಾಯ ಹೇಳಿದ ಒಲಿಂಪಿಕ್​ ಪದಕ ವಿಜೇತೆ ಸಾಕ್ಷಿ ಮಲಿಕ್

ABOUT THE AUTHOR

...view details