ಕರ್ನಾಟಕ

karnataka

300 ವರ್ಷ, 300ಕ್ಕೂ ಹೆಚ್ಚು ಕುಟುಂಬ.. ಆದರೀಗ ಇರೋದು ಒಬ್ಬನೇ ಒಬ್ಬ ವ್ಯಕ್ತಿ.. ವಿನಾಶ ಕಂಡ ಹಳ್ಳಿಯ ನೈಜಕಥೆ

By

Published : Jul 3, 2021, 7:29 AM IST

Updated : Jul 3, 2021, 10:28 AM IST

ಒಂದಾನೊಂದು ಕಾಲದಲ್ಲಿ ಸಮೃದ್ಧವಾಗಿದ್ದ ಗ್ರಾಮವೊಂದು ಇಂದು ಸ್ಮಶಾನ ಮೌನ ತಳೆದಿದೆ. ಈ ಹಳ್ಳಿಯ ಗತ ವೈಭವ ಹೇಳಲು ಇಲ್ಲಿರುವುದು ಒಬ್ಬನೇ ಒಬ್ಬ ವ್ಯಕ್ತಿ. ಬಣಗುಡುವ ಊರಿನ ಕಥೆ ಅಚ್ಚರಿ ಮೂಡಿಸಿದರೂ ಪ್ರತಿಯೊಬ್ಬರು ಅದರಲ್ಲೂ ಸರ್ಕಾರ ಯೋಚಿಸಲೇಬೇಕಾದ ಸಂಗತಿ ಇದು.

Meenakshipuram - A sorry tale of a lone man
ವಿನಾಶ ಕಂಡ ಹಳ್ಳಿಯ ನೈಜಕಥೆ

ತೂತುಕುಡಿ (ತಮಿಳುನಾಡು): ಊರೆಂದರೆ ಅಲ್ಲೊಂದಷ್ಟು ಮನೆಗಳು, ಜನ-ಜಾತ್ರೆ, ಮಾರುಕಟ್ಟೆ ಇದೆಲ್ಲ ಸಾಮಾನ್ಯ. ಆದರೆ ಒಂದು ಊರು, ಅಲ್ಲಿ ಒಬ್ಬನೇ ಒಬ್ಬ ವ್ಯಕ್ತಿ, ಇಡೀ ಗ್ರಾಮಕ್ಕೆ ಆತನೇ ಒಡೆಯ. ಎತ್ತ ನೋಡಿದರೂ ಬಣಗುಡುವ ವಾತಾವರಣ. ಬರೋರಿಲ್ಲ, ಹೋಗೋರಿಲ್ಲ, ಸತ್ತರೂ ನೋಡೋರಿಲ್ಲ. ಇಂತಹ ಸ್ಮಶಾನ ಮೌನ ತುಂಬಿರುವ ಹಳ್ಳಿಯ ನೈಜಕಥೆ ಇಲ್ಲಿದೆ.

ಮೀನಾಕ್ಷಿಪುರಂ ಗ್ರಾಮದಲ್ಲಿನ ಮನೆ

ತಮಿಳುನಾಡಿನ ಮೀನಾಕ್ಷಿಪುರಂ ಗ್ರಾಮವು ತೂತುಕುಡಿ ಜಿಲ್ಲೆಯ ಚೆಕ್ಕರಕುಡಿ ಪಂಚಾಯತ್‌ ವ್ಯಾಪ್ತಿಯಲ್ಲಿದೆ. ಈ ಗ್ರಾಮದಲ್ಲಿ ವಾಸಿಸುವುದು ಒಬ್ಬನೇ ಒಬ್ಬ ವ್ಯಕ್ತಿ. ಇವನೊಬ್ಬನೇ ಈ ಹಳ್ಳಿಯಲ್ಲಿ ವಾಸಿಸುತ್ತಿದ್ದಾನೆ. ತೂತುಕುಡಿಯಿಂದ 35 ಕಿ.ಮೀ ಮತ್ತು ನೆಲ್ಲೈ-ತೂತುಕುಡಿ ರಾಷ್ಟ್ರೀಯ ಹೆದ್ದಾರಿಯಿಂದ 13 ಕಿ.ಮೀ ದೂರ ಸಾಗಿದರೆ ಸಿಗುವುದೇ ಮೀನಾಕ್ಷಿಪುರಂ ಎಂಬ ಈ ಗ್ರಾಮ.

ಈ ಹಳ್ಳಿಯ ಬಗ್ಗೆ ಕುತೂಹಲ ತಡೆಯದೇ ಅಲ್ಲಿಗೇ ತೆರಳಿದ ನಮ್ಮ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಮನೆ ಬಾಗಿಲಲ್ಲಿ ನೀರು ತುಂಬಿದ ಬಕೆಟ್, ಒಳ ಹೋದರೆ ದಿಂಬು, ಹಾಸಿಗೆ, ಟಿವಿ, ಮಿಕ್ಸಿ, ಒಂದು ದ್ವಿಚಕ್ರ ವಾಹನ, ಅಪಾಯ ಬಂದಾಗ ಬಳಸಲು ಕುಡಗೋಲು, ಒಲೆ. ಮನೆ ಕಾಯಲು ನಾಯಿ, ಆಟವಾಡಲು ಬೆಕ್ಕು. ಇದೆಲ್ಲದರ ಮಧ್ಯೆ ಇದ್ದಿದ್ದು ಒಬ್ಬನೇ ಒಬ್ಬ ವ್ಯಕ್ತಿ.

ಪಾಳುಬಿದ್ದ ಮನೆಗಳು

ನಮ್ಮ ಕ್ಯಾಮೆರಾ ನೋಡುತ್ತಿದ್ದಂತೆ ಮಾತನಾಡಲು ಪ್ರಾರಂಭಿಸಿದ ಅವರ ಹೆಸರು ಪರಾದೇಸಿ ನಾಯಕ್ಕರ್ (ಅಕಾ) ಕಂದಸಾಮಿ. ಇವರು ಈ ಬಣಗುಡುವ ಊರಿನಲ್ಲಿರುವ ಏಕೈಕ ವ್ಯಕ್ತಿ.

ಮೀನಾಕ್ಷಿಪುರಂ ಗ್ರಾಮ

2000ನೇ ಇಸ್ವಿಯಲ್ಲಿ ಮೀನಾಕ್ಷಿಪುರಂನ ಜನಸಂಖ್ಯೆ 1,269. ಆದರೆ, ಪ್ರಸ್ತುತ, ಒಬ್ಬ ಮನುಷ್ಯ ಮಾತ್ರ ಈ ಗ್ರಾಮದಲ್ಲಿ ವಾಸಿಸುತ್ತಿದ್ದಾನೆ. ಉಳಿದವರು ಎಲ್ಲಿಗೆ ಹೋದರು?, ಜನರು ಪಟ್ಟಣಕ್ಕೆ ಏಕೆ ಸ್ಥಳಾಂತರಗೊಂಡರು?, ಅಲ್ಲಿ ಯಾಕೆ ವ್ಯಕ್ತಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾನೆ? ಎಂಬ ಮುಂತಾದ ಪ್ರಶ್ನೆಗಳಿಗೆ ಕಂದಸಾಮಿಯ ಬಳಿಯೇ ಕೇಳಿದೆವು. ನಮ್ಮೆಲ್ಲ ಪ್ರಶ್ನೆಗಳಿಗೆ ಮುಗುಳುನಗೆ ಬೀರುತ್ತ ಉತ್ತರಿಸಲು ಆರಂಭಿಸಿದ ಕಂದಸಾಮಿ ಬಿಚ್ಚಿಟ್ಟಿದ್ದು ಅಚ್ಚರಿಯ ಸಂಗತಿ.

ಕಂದಸಾಮಿ ಹೇಳಿದ ಕಥೆ..

'ಜನರು ಸುಮಾರು 300 ವರ್ಷಗಳ ಕಾಲ ಇಲ್ಲಿ ವಾಸಿಸುತ್ತಿದ್ದರು. ನನ್ನ ಅಜ್ಜ, ತಂದೆ ಮತ್ತು ನಾನು ಸೇರಿದಂತೆ ಎಲ್ಲರೂ ಈ ಗ್ರಾಮದಲ್ಲಿ ಹುಟ್ಟಿ ಬೆಳೆದವರು. ಈ ಗ್ರಾಮವು 300ಕ್ಕೂ ಹೆಚ್ಚು ಕುಟುಂಬಗಳಿಗೆ ನೆಲೆಯಾಗಿತ್ತು. 7 ವರ್ಷಗಳ ಹಿಂದೆ ಇಲ್ಲಿ 5 ಕುಟುಂಬಗಳು ವಾಸಿಸುತ್ತಿದ್ದವು' ಎಂದು ಹೇಳಿದರು.

ಪರಾದೇಸಿ ನಾಯಕ್ಕರ್ (ಅಕಾ) ಕಂದಸಾಮಿ

'ಆದರೆ, ಎಲ್ಲರೂ ಇಲ್ಲಿಂದ ಕಣ್ಮರೆಯಾದರು. ಪಂದ್ಯಗಳು, ಸಂತೋಷ ಕೂಟಗಳು, ದುಃಖ ಮತ್ತು ಹಬ್ಬದ ದೃಶ್ಯಗಳು ಹೀಗೆ ಎಲ್ಲವನ್ನೂ ನೋಡಿದ ಈ ಗ್ರಾಮ ಈಗ ಬಿಕೋ ಎನ್ನುತ್ತಿದೆ. ಜನರು ಇಲ್ಲಿಂದ ಸ್ಥಳಾಂತರಗೊಳ್ಳಲು ಎರಡು ಕಾರಣಗಳಿಗಿವೆ. ಒಂದು ನೀರಿನ ಕೊರತೆ ಮತ್ತು ಇನ್ನೊಂದು ನಿರುದ್ಯೋಗ. ನಮ್ಮ ಗ್ರಾಮವು ಮೊದಲು ಸಮೃದ್ಧವಾಗಿತ್ತು. ಆದರೆ ಮಳೆಯ ಮೇಲೆ ಮಾತ್ರ ಅವಲಂಬಿತವಾಗಿತ್ತು. ಕೃಷಿ ಚಟುವಟಿಕೆಗಳು ಮತ್ತು ಕುಡಿಯುವ ನೀರಿಗಾಗಿ ಮಳೆಯೇ ಮೂಲವಾಗಿತ್ತು' ಎಂದರು.

ವಿನಾಶ ಕಂಡ ಹಳ್ಳಿಯ ನೈಜಕಥೆ

'ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಯಿತು. ನಾವು ಬರಗಾಲವನ್ನು ಎದುರಿಸಲು ಪ್ರಾರಂಭಿಸಿದೆವು. ಕೃಷಿ ನಾಶದ ಹಾದಿ ಹಿಡಿಯಿತು. ಜನರು ನೀರು ತರಲು ಚೆಕ್ಕರಕುಡಿ ಮತ್ತು ಸೊಕ್ಕಲಿಂಗಪುರಂಗೆ ಹೋಗಬೇಕಿತ್ತು. ಇಲ್ಲಿ ಬಸ್ ಸೌಲಭ್ಯವೂ ಇರಲಿಲ್ಲ. ಜನರು ಹಸಿವಿನಿಂದ ಬಳಲುತ್ತಿದ್ದರು. ಇದರಿಂದ ಬಸವಳಿದ ಜನರು ಪಟ್ಟಣದತ್ತ ಪ್ರಯಾಣ ಆರಂಭಿಸಿದರು' ಎಂದು ತಿಳಿಸಿದರು.

ಮೀನಾಕ್ಷಿಪುರಂನಲ್ಲಿನ ಮನೆ

'ಸ್ವಂತ ಮನೆ ಮತ್ತು ಕೃಷಿಭೂಮಿಯನ್ನು ಹಾಗೇ ಬಿಟ್ಟು ಹೋದವರು ಇನ್ನೂ ಮರಳಿಲ್ಲ. ಕಳೆದ 5 ವರ್ಷಗಳಿಂದ, ನಾನು ಇಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ. ನನ್ನ ಮಕ್ಕಳು ಅವರೊಂದಿಗೆ ವಾಸಿಸಲು ಬರುವಂತೆ ನನ್ನನ್ನು ಕೇಳುತ್ತಾರೆ. ನನ್ನ ಸಾವಿನವರೆಗೂ ನಾನು ಇಲ್ಲಿಯೇ ಇರುತ್ತೇನೆ' ಎಂದು ಕಂದಸಾಮಿ ಭಾವುಕ ನುಡಿಗಳನ್ನಾಡಿದರು.

ಮೀನಾಕ್ಷಿಪುರಂ ಗ್ರಾಮ

'ವೈಶಾಖ ಮಾಸದಲ್ಲಿ ವರ್ಷಕ್ಕೊಮ್ಮೆ ಆದಿಪರಾಶಕ್ತಿ ಅಮ್ಮನ್ ದೇವಸ್ಥಾನದಲ್ಲಿ ಉತ್ಸವ ನಡೆಯುತ್ತದೆ. ಎಲ್ಲರೂ ಆ ಸಮಾರಂಭಕ್ಕಾಗಿ ಮಾತ್ರ ಇಲ್ಲಿಗೆ ಹಿಂತಿರುಗುತ್ತಾರೆ. ಮೂರು ದಿನಗಳ ಉತ್ಸವದ ಎರಡನೇ ದಿನ ಪಟ್ಟಣಗಳಿಂದ ಜನರು ತಮ್ಮ ಕುಟುಂಬಗಳೊಂದಿಗೆ ಈ ಗ್ರಾಮಕ್ಕೆ ಬರುತ್ತಾರೆ. ಅವರು ಅಜ್ಜ ಮತ್ತು ತಂದೆ ವಾಸಿಸುತ್ತಿದ್ದ ಹಳ್ಳಿಯ ಬಗ್ಗೆ ಮಾತನಾಡುತ್ತಾರೆ. ಮೂರನೇ ದಿನ ಅವರು ಹೊರಟು ಹೋಗುತ್ತಾರೆ. ಹಬ್ಬದೊಂದಿಗೆ ಈ ಊರಿನ ಜನಜಂಗುಳಿಯು ಕೊನೆಗೊಳ್ಳುತ್ತದೆ' ಎಂದು ಕಳವಳಕಾರಿ ಸಂಗತಿಯನ್ನು ನಮ್ಮೆದುರು ಬಿಚ್ಚಿಟ್ಟರು.

ಪಾಳುಬಿದ್ದ ಮನೆ

ಇಂದು ಇದು ಮೀನಾಕ್ಷಿಪುರಂನ ಕಥೆಯಾಗಿರಬಹುದು. ಆದರೆ ಮುಂದೊಂದು ದಿನ ನಮ್ಮ ಸ್ವಂತ ಹಳ್ಳಿಯ ಕಥೆಯಾದರೂ ಅಚ್ಚರಿಯಿಲ್ಲ. ಕಂದಸಾಮಿ ಜೀವಂತವಾಗಿರುವವರೆಗೂ ಮೀನಾಕ್ಷಿಪುರಂ ಉಳಿಯುತ್ತದೆ. ನಗರದ ಮೂಲಸೌಕರ್ಯಗಳಿಗೆ ಆದ್ಯತೆ ನೀಡುವಷ್ಟೇ ಗ್ರಾಮೀಣ ಪ್ರದೇಶಗಳಿಗೂ ಸರ್ಕಾರ ಪ್ರಾಮುಖ್ಯತೆ. ಇಲ್ಲದಿದ್ದರೆ ಎಂತಹ ಭಯಾನಕ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದಕ್ಕೆ ಈ ಗ್ರಾಮವೇ ಜೀವಂತ ಸಾಕ್ಷಿ.

Last Updated : Jul 3, 2021, 10:28 AM IST

ABOUT THE AUTHOR

...view details