ಕರ್ನಾಟಕ

karnataka

ಇಂದಿರಾ ಗಾಂಧಿಯಿಂದ ಜೈಲು ಪಾಲಾದ ನಾಯಕರು ರಾಹುಲ್‌ಗೆ ಸ್ವಾಗತ ಕೋರುತ್ತಿದ್ದಾರೆ: ಪ್ರತಿಪಕ್ಷಗಳಿಗೆ ಕುಟುಕಿದ ಬಿಜೆಪಿ

By

Published : Jun 23, 2023, 5:31 PM IST

ಪಾಟ್ನಾದಲ್ಲಿ ಇಂದು ನಡೆದ ಪ್ರತಿಪಕ್ಷಗಳ ನಾಯಕರ ಸಭೆ ಬಗ್ಗೆ ಕೇಂದ್ರದ ಆಡಳಿತಾರೂಢ ಬಿಜೆಪಿ ವ್ಯಂಗ್ಯವಾಡಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

BJP president JP Nadda, Union Minister Amit Shah, Smriti Irani
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್​ ಶಾ ಹಾಗೂ ಕೇಂದ್ರ ಸಚಿವೆ ಸ್ಮೃತಿ

ನವದೆಹಲಿ: ದೇಶದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ಜೈಲು ಸೇರಿದ್ದ ನಾಯಕರು ಈಗ ಅವರ ಮೊಮ್ಮಗ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಟೀಕಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯನ್ನು ಎದುರಿಸಲು ಇಂದು ಪಾಟ್ನಾದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್​ ಆಯೋಜಿಸಿದ್ದ ಪ್ರತಿಪಕ್ಷಗಳ ಸಭೆಯಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಪಾಲ್ಗೊಂಡಿದ್ದರು. ಜಯಪ್ರಕಾಶ್ ನಾರಾಯಣ್ ಚಳವಳಿಯಲ್ಲಿ ಭಾಗವಹಿಸಿದ್ದ ಈ ಇಬ್ಬರನ್ನೂ ತಾವು ವಿದ್ಯಾರ್ಥಿ ನಾಯಕರಾಗಿದ್ದಾಗ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿಸಲಾಗಿತ್ತು. ಈ ಅವಧಿಯಲ್ಲಿ ಲಾಲು 22 ತಿಂಗಳು ಜೈಲುವಾಸ ಅನುಭವಿಸಿದ್ದರೆ, ನಿತೀಶ್ 20 ತಿಂಗಳು ಜೈಲಿನಲ್ಲಿದ್ದರು. ಇದನ್ನೇ ಉಲ್ಲೇಖಿಸಿ ನಡ್ಡಾ ಹೇಳಿಕೆ ನೀಡಿದ್ದಾರೆ.

ಒಡಿಶಾದ ಕಲಹಂಡಿ ಜಿಲ್ಲೆಯ ಭವಾನಿಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನಡ್ಡಾ, ಇಂದು ರಾಜಕೀಯದಲ್ಲಿ ವಿಚಿತ್ರವಾದ ಸಂಗತಿಗಳು ನಡೆಯುತ್ತಿವೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ಜೈಲು ಸೇರಿದ್ದ ನಾಯಕರು ಈಗ ಅವರ ಮೊಮ್ಮಗ ರಾಹುಲ್ ಗಾಂಧಿಯೊಂದಿಗೆ ಕೈಜೋಡಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಮುಂದುವರೆದು, ಉದ್ಧವ್ ಠಾಕ್ರೆ ಪ್ರತಿಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಪಾಟ್ನಾ ತಲುಪಿದ್ದನ್ನು ನಾನು ನೋಡಿದೆ. ಅವರ ತಂದೆ ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಅವರು ಕಾಂಗ್ರೆಸ್​ಅನ್ನು ಎಲ್ಲ ಕಾಲದಲ್ಲೂ ವಿರೋಧಿಸುತ್ತಿದ್ದರು. ಕಾಂಗ್ರೆಸ್​ ಸೇರುವುದಕ್ಕಿಂತ ದುಕಾನ್ (ಶಿವಸೇನೆ) ಮುಚ್ಚುವುದೇ ಮೇಲು ಬಾಳಾಸಾಹೇಬ್ ಒಮ್ಮೆ ಹೇಳಿದ್ದರು. ಈಗ ಅವರ ಮಗನೇ 'ದುಕಾನ್' ಮುಚ್ಚಲು ಹೊರಟಿದ್ದಾರೆ ಎಂದು ನಡ್ಡಾ ಗೇಲಿ ಮಾಡಿದರು. ಕಾಂಗ್ರೆಸ್​ಗೆ ವಿಶ್ವ ನಾಯಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುತ್ತಿರುವದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ ಅವರು, ಮೋದಿಯವರು ವಂಶ ರಾಜಕೀಯವನ್ನು ಬಲವಾಗಿ ವಿರೋಧಿಸುತ್ತಾರೆ. ದೇಶದಲ್ಲಿ ಅಭಿವೃದ್ಧಿಯ ರಾಜಕೀಯವನ್ನು ಅವರು ಪರಿಚಯಿಸಿದ್ದಾರೆ ಎಂದು ಹೇಳಿದರು.

ಪಾಟ್ನಾದಲ್ಲಿ ಫೋಟೋ ಸೆಷನ್ - ಶಾ ಟೀಕೆ: ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ 2024ರಲ್ಲೂ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಮತ್ತೊಮ್ಮೆ ಪ್ರಧಾನಿಯಾಗುವ ಮೂಲಕ ಸರ್ಕಾರ ರಚಿಸಲಿದ್ದಾರೆ. ಎಷ್ಟೇ ಪಕ್ಷಗಳು ಬಂದರೂ ಅವು ಎಂದಿಗೂ ಒಂದಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಜಮ್ಮುವಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಟ್ನಾದಲ್ಲಿ ಫೋಟೋ ಸೆಷನ್ ನಡೆಯುತ್ತಿದೆ. ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎಗೆ ಸವಾಲು ಹಾಕಲು ಬಯಸುತ್ತಾರೆ. 2024ರ ಲೋಕಸಭೆ ಚುನಾವಣೆಯಲ್ಲಿ 300 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಪ್ರಧಾನಿ ಮೋದಿ ತಮ್ಮ ಸರ್ಕಾರವನ್ನು ರಚಿಸುತ್ತಾರೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ ಎಂದರು.

ಇದೇ ವೇಳೆ, ಶ್ಯಾಮ ಪ್ರಸಾದ್ ಮುಖರ್ಜಿ ಪುಣ್ಯತಿಥಿಯಂದು ಅವರ ಕೊಡುಗೆಗಳನ್ನು ಸ್ಮರಿಸಿದ ಅಮಿತ್​ ಶಾ, ಇಂದು ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ್ ದಿವಸ್. ಇವತ್ತು ಬಂಗಾಳವು ಇಂದು ಭಾರತದೊಂದಿಗಿದೆ ಎಂದರೆ ಅದಕ್ಕೆ ಮುಖರ್ಜಿ ಕಾರಣ ಎಂದು ಇಡೀ ದೇಶಕ್ಕೆ ತಿಳಿದಿದೆ. ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ವಿರೋಧಿಸಿದ್ದರು ಎಂದು ಹೇಳಿದರು.

ವಿಪಕ್ಷಗಳ ಸಭೆ ಹಾಸ್ಯಾಸ್ಪದ- ಸ್ಮೃತಿ ಇರಾನಿ: ಪಾಟ್ನಾದಲ್ಲಿ ಪ್ರತಿಪಕ್ಷಗಳ ಬೆನ್ನಲ್ಲೇ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಕಂಡಿದ್ದ ನಾಯಕರು ಇಂದು ಕಾಂಗ್ರೆಸ್ ನೇತೃತ್ವದಲ್ಲಿ ಒಂದಾಗುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿದರು.

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎಲ್ಲ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಸೋಲಿಸಲಿವೆ ಎಂಬ ರಾಹುಲ್ ಗಾಂಧಿ​ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಇರಾನಿ, ಪ್ರಧಾನಿ ನರೇಂದ್ರ ಮೋದಿಯನ್ನು ಒಬ್ಬರೇ ಸೋಲಿಸಲು ಸಾಧ್ಯವಿಲ್ಲ ಮತ್ತು ಇತರರ ಬೆಂಬಲಬೇಕೆಂದು ಕಾಂಗ್ರೆಸ್ ಒಪ್ಪಿಕೊಂಡಿದೆ. ಇದನ್ನು ಸಾರ್ವಜನಿಕವಾಗಿ ಘೋಷಿಸಿದ್ದಕ್ಕಾಗಿ ನಾನು ವಿಶೇಷವಾಗಿ ಕಾಂಗ್ರೆಸ್‌ಗೆ ಧನ್ಯವಾದ ಹೇಳುತ್ತೇನೆ ಎಂದು ಕುಟುಕಿದರು.

ಬಿಹಾರ ಸಿಎಂ ನಿತೀಶ್ ಕುಮಾರ್​​ ಬಗ್ಗೆ ಹೇಳಿಕೆ ಬಗ್ಗೆಯೂ ವ್ಯಂಗ್ಯವಾಡಿದ ಅವರು, ನೀವು (ಕಾಂಗ್ರೆಸ್​ನವರು) ಸೇತುವೆಯನ್ನು ಮಾಡಲು ಸಾಧ್ಯವಾಗದ ಜನರ ಬಳಿಗೆ ಹೋಗುತ್ತೀರಾ? ಅವರು (ನಿತೀಶ್ ಯಾವ ಪ್ರಜಾಪ್ರಭುತ್ವ ಸೇತುವೆಯನ್ನು ನಿರ್ಮಿಸುತ್ತಾರೆ ಎಂದು ಪ್ರಶ್ನಿಸಿದರು. ಅಲ್ಲದೇ, ಆಮ್ ಆದ್ಮಿ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕಿ, ಅಭಿವೃದ್ಧಿಗಾಗಿ ಒಗ್ಗೂಡಲು ಸಾಧ್ಯವಾಗದ ಆಪ್​ - ಕಾಂಗ್ರೆಸ್​ ಪಕ್ಷಗಳು ರಾಜಕೀಯ ಬ್ಲ್ಯಾಕ್‌ಮೇಲ್‌ಗೆ ಮುಂದಾಗುತ್ತಿವೆ ಎಂದು ದೂರಿದರು.

ಇದನ್ನೂ ಓದಿ:ಪಾಟ್ನಾದಲ್ಲಿ ವಿಪಕ್ಷ ನಾಯಕರ ಮೆಗಾ ಸಭೆ: ಲೋಕಸಭೆ ಚುನಾವಣೆಗೆ ರೂಪುರೇಷೆ ಚರ್ಚೆ- ಯಾರೆಲ್ಲಾ ಭಾಗಿ?

ABOUT THE AUTHOR

...view details