ಕರ್ನಾಟಕ

karnataka

ರಾಮ ಮಂದಿರ ಉದ್ಘಾಟನೆಗೆ ಖರ್ಗೆ, ಸೋನಿಯಾಗೆ ಆಹ್ವಾನ

By PTI

Published : Dec 29, 2023, 3:32 PM IST

Updated : Dec 29, 2023, 6:56 PM IST

Ayodhya Ram Mandir: ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿಗೆ ಆಹ್ವಾನ ಬಂದಿದೆ ಎಂದು ಕಾಂಗ್ರೆಸ್​ ಹೇಳಿದೆ.

kharge and Sonia Have been invited to the Ram mandir inauguration: congress
ರಾಮ ಮಂದಿರ ಉದ್ಘಾಟನೆಗೆ ಖರ್ಗೆ, ಸೋನಿಯಾಗೆ ಆಹ್ವಾನ ಬಂದಿದೆ- ಕಾಂಗ್ರೆಸ್​

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ಬಂದಿದೆ ಎಂದು ಪಕ್ಷ ಶುಕ್ರವಾರ ತಿಳಿಸಿದೆ.

ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ ಮತ್ತು ದೇಗುಲ ಉದ್ಘಾಟನೆ ನಿಗದಿಯಾಗಿದೆ. ಈ ಕಾರ್ಯಕ್ರಮಕ್ಕೆ ರಾಮ ಮಂದಿರ ಟ್ರಸ್ಟ್​​​ ಹಲವು ಗಣ್ಯರನ್ನು ಆಮಂತ್ರಿಸಿದೆ. ಕಾಂಗ್ರೆಸ್​ ಪ್ರಮುಖರಿಗೆ ಆಹ್ವಾನ ನೀಡಿರುವುದನ್ನು ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ, ರಾಜ್ಯಸಭೆ ಸದಸ್ಯ ಜೈರಾಮ್​ ರಮೇಶ್​ ಸ್ಪಷ್ಟಪಡಿಸಿದ್ದಾರೆ.

"ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್​ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಲಾಗಿದೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಕುರಿತು ಸೂಕ್ತ ಸಮಯದಲ್ಲಿ ಅವರು ನಿರ್ಧರಿಸುವರು'' ಎಂದು ಜೈರಾಮ್​ ರಮೇಶ್​ ಮಾಹಿತಿ ನೀಡಿದ್ದಾರೆ. ಅಲ್ಲದೇ, ಲೋಕಸಭೆಯಲ್ಲಿ ಕಾಂಗ್ರೆಸ್​ ನಾಯಕರಾದ ಅಧೀರ್ ರಂಜನ್​ ಚೌಧರಿ ಅವರಿಗೂ ಆಹ್ವಾನ ನೀಡಲಾಗಿದೆ.

ಬಿಜೆಪಿಯಿಂದ ರಾಜಕೀಯ-ವೇಣುಗೋಪಾಲ್​: ರಾಮ ಮಂದಿರ ವಿಷಯವಾಗಿ ಕೇರಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್​ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪಕ್ಷದ ನಾಯಕರು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ಸ್ವೀಕರಿಸಿದ್ದನ್ನು ಖಚಿತಪಡಿಸಿದರು. ಇದೇ ವೇಳೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಮುಂದುವರೆದು, ''ಇಂತಹ ಕಾರ್ಯಕ್ರಮವನ್ನು ಯಾವುದೇ ಪಕ್ಷ ಅಥವಾ ಸರ್ಕಾರದ ಕಾರ್ಯವನ್ನಾಗಿ ಮಾಡುವುದು ಸರಿಯೇ'' ಎಂದು ಪ್ರಶ್ನಿಸುವ ಮೂಲಕ ವೇಣುಗೋಪಾಲ್, ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಇನ್ನೊಂದೆಡೆ, ಈಗಾಗಲೇ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರಿಗೂ ಆಹ್ವಾನ ನೀಡಲಾಗಿದೆ. ಆದರೆ, ಅವರು ಈಗಾಗಲೇ ಈ ಆಹ್ವಾನವನ್ನು ತಿರಸ್ಕರಿಸಿದ್ದಾರೆ.

ಪಶ್ಚಿಮ ಬಂಗಾಳದ ಸಿಎಂ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ತೀರ್ಮಾನ ಪ್ರಕಟಿಸಿಲ್ಲ. ಆದರೆ, ಪಶ್ಚಿಮ ಬಂಗಾಳ ಸರ್ಕಾರ ಅಥವಾ ಪಕ್ಷದ ಯಾವುದೇ ಪ್ರತಿನಿಧಿಗಳು ರಾಮ ಮಂದಿರ ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಪಕ್ಷ ಹೇಳಿಕೊಂಡಿದೆ.

ಮಹಾರಾಷ್ಟ್ರ ಮಾಜಿ ಸಿಎಂ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತಮಗೆ ಆಹ್ವಾನವೇ ಬಂದಿಲ್ಲ ಎಂದು ಹೇಳಿದ್ದಾರೆ. ''ರಾಮ ಮಂದಿರದ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಆಡಳಿತ ಪಕ್ಷವು ಯಾವುದೇ ಗಟ್ಟಿಯಾದ ಜನಪರ ಕಾರ್ಯಕ್ರಮ ಕೊಟ್ಟಿಲ್ಲ. ಹೀಗಾಗಿ ಈ ವಿಷಯವನ್ನು ಬಳಸಿಕೊಂಡು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ'' ಎಂದು ದೂರಿದ್ದಾರೆ.

ಇದನ್ನೂ ಓದಿ:ರಾಮ ಮಂದಿರ ಉದ್ಘಾಟನೆಗೆ ಮಮತಾ ಹೋಗಲ್ಲ- ಟಿಎಂಸಿ; ನನ್ನನ್ನು ಆಹ್ವಾನಿಸಿಲ್ಲ-ಪವಾರ್

Last Updated : Dec 29, 2023, 6:56 PM IST

ABOUT THE AUTHOR

...view details