ಕರ್ನಾಟಕ

karnataka

ರಾಜ್ಯದ ಗಡಿ ದಾಟಿದ ಹಿಜಾಬ್-ಕೇಸರಿ ಶಾಲು ವಿವಾದ: ಮಧ್ಯಪ್ರದೇಶ, ಪುದುಚೇರಿಯಲ್ಲೂ ಕಾಣಿಸಿಕೊಂಡ ಕಿಡಿ

By

Published : Feb 9, 2022, 9:21 AM IST

ಹಿಜಾಬ್ ಪರ-ವಿರೋಧ ವಿವಾದ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಮಧ್ಯಪ್ರದೇಶ ಮತ್ತು ಪುದುಚೇರಿಯಲ್ಲೂ ವಿವಾದದ ಕಿಡಿ ಕಾಣಿಸಿಕೊಂಡಿದೆ.

ಹಿಜಾಬ್- ಕೇಸರಿ ಶಾಲು ವಿವಾದ
ಹಿಜಾಬ್- ಕೇಸರಿ ಶಾಲು ವಿವಾದ

ಮಧ್ಯಪ್ರದೇಶ/ಪುದುಚೇರಿ: ಕರ್ನಾಟಕದಲ್ಲಿ ಶುರುವಾದ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಇದೀಗ ರಾಜ್ಯದ ಗಡಿ ದಾಟಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಮಧ್ಯಪ್ರದೇಶ ಮತ್ತು ಪುದುಚೇರಿಯಲ್ಲೂ ವಿವಾದ ಕಾಣಿಸಿಕೊಂಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪುದುಚೇರಿಯ ಅರಿಯಾಂಕುಪ್ಪಂನ ಸರ್ಕಾರಿ ಶಾಲೆಯ ಮುಖ್ಯಸ್ಥರು ತರಗತಿಗೆ ಹಿಜಾಬ್​ ಧರಿಸಿ ಆಗಮಿಸಿದ ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:'ಉಡುಪಿ ಕಾಲೇಜಿನಲ್ಲಿ ಹಿಂದಿನಿಂದಲೂ ಹಿಜಾಬ್​​​ಗೆ ಅವಕಾಶವಿರಲಿಲ್ಲ': ಸಾಕ್ಷ್ಯ ನೀಡಿದ ಕಾಲೇಜು ಆಡಳಿತ ಮಂಡಳಿ

ಮಧ್ಯಪ್ರದೇಶದ ಪ್ರೌಢಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಹಿಜಾಬ್ ಮೇಲಿನ ನಿರ್ಬಂಧವನ್ನು ಬೆಂಬಲಿಸಿದ್ದು, ಸರ್ಕಾರವು ಶಾಲೆಗಳಲ್ಲಿ ಶಿಸ್ತು ಪಾಲನೆಗೆ ಮೊದಲ ಆದ್ಯತೆ ನೀಡಬೇಕು ಎಂದಿದ್ದಾರೆ. ಹಿಜಾಬ್ ಎಂಬುದು ಸಮವಸ್ತ್ರದ ಭಾಗವಲ್ಲ, ಶಾಲೆಗಳಲ್ಲಿ ಅದನ್ನು ಕಡ್ಡಾಯವಾಗಿ ರದ್ದುಗೊಳಿಸಬೇಕು. ಜನರು ಸಂಪ್ರದಾಯವನ್ನು ತಮ್ಮ ಮನೆಯಲ್ಲಿ ಅನುಸರಿಸಬೇಕು, ಶಾಲೆಗಳಲ್ಲಿ ಅಲ್ಲ. ಶಾಲೆಗಳಲ್ಲಿ ಸಮವಸ್ತ್ರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲುನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯದ ಶಾಲೆಗಳಲ್ಲಿ ಹಿಜಾಬ್ ನಿಷೇಧಿಸಲಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಇನ್ನು ಮಧ್ಯಪ್ರದೇಶವು ಸುಮಾರು 1.25 ಲಕ್ಷ ಸರ್ಕಾರಿ ಶಾಲೆಗಳನ್ನು ಹೊಂದಿದೆ, ಒಂದರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ರಾಜ್ಯ ಸರ್ಕಾರವೇ ಹಣ ನೀಡುತ್ತಿದೆ.

ಸಚಿವರ ಇಂದರ್ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್, ಶಾಲೆಗಳ ಸರಿಯಾದ ಕಾರ್ಯನಿರ್ವಹಣೆ ಕುರಿತು ಗಮನ ಹರಿಸುವ ಕೆಲಸ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಬೇಕು. ಅದನ್ನು ಬಿಟ್ಟು ಕೋಮು ಗಲಭೆ ಸೃಷ್ಟಿಸಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.

ಹಿಜಾಬ್ ಪರವಾಗಿ ಐವರು ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ನಿನ್ನೆ ಅರ್ಜಿ ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿದ ಕೋರ್ಟ್, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದೆ. ಅಷ್ಟೇ ಅಲ್ಲದೆ ದಿನದಿಂದ ದಿನಕ್ಕೆ ಈ ಪ್ರಕರಣ ಹೆಚ್ಚು ವ್ಯಾಪಕತೆ ಪಡೆದುಕೊಳ್ಳುತ್ತಿರುವ ಕಾರಣ ಇಂದಿನಿಂದ ಮೂರು ದಿನಗಳ ಕಾಲ ಶಾಲಾ-ಕಾಲೇಜ್​​ಗಳಿಗೆ ರಜೆ ಘೋಷಣೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details