ಕರ್ನಾಟಕ

karnataka

ದಿಶಾ ಆ್ಯಪ್​ ಡೌನ್‌ಲೋಡ್ ವಿಚಾರವಾಗಿ ಯೋಧನ ಮೇಲೆ ಆಂಧ್ರ ಪೊಲೀಸರ ದಾಳಿ

By ETV Bharat Karnataka Team

Published : Nov 8, 2023, 4:10 PM IST

Updated : Nov 8, 2023, 5:27 PM IST

Soldier Assaulted By Andhra Police: ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ಮಹಿಳೆಯರ ಸುರಕ್ಷತೆಗೆ ಎಂದು ಪರಿಚಯಿಸಲಾದ ದಿಶಾ ಆ್ಯಪ್​ ಡೌನ್‌ಲೋಡ್ ವಿಚಾರವಾಗಿ ಯೋಧರೊಬ್ಬರ ಮೇಲೆ ಪೊಲೀಸರು ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.

ದಿಶಾ ಆ್ಯಪ್​ ಡೌನ್‌ಲೋಡ್ ವಿಚಾರವಾಗಿ ಯೋಧನ ಮೇಲೆ ಆಂಧ್ರ ಪೊಲೀಸರ ದಾಳಿ
Indian Army soldier assaulted by Andhra police in Anakapalli

ಯೋಧನ ಮೇಲೆ ಆಂಧ್ರ ಪೊಲೀಸರ ದಾಳಿ

ಅನಕಪಲ್ಲಿ (ಆಂಧ್ರಪ್ರದೇಶ): ರಜೆ ಮೇಲೆ ಬಂದಿದ್ದ ಯೋಧರೊಬ್ಬರ ಮೇಲೆ ನಡುರಸ್ತೆಯಲ್ಲಿ ಆಂಧ್ರಪ್ರದೇಶ ಪೊಲೀಸರು ಹಲ್ಲೆ ಮಾಡಿರುವ ಘಟನೆ ಅನಕಪಲ್ಲಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಬಲವಂತವಾಗಿ ಸೈನಿಕನನ್ನು ಪೊಲೀಸ್​ ಸಿಬ್ಬಂದಿ ಆಟೋದಲ್ಲಿ ಹತ್ತಿಸಿಕೊಂಡು ಕರೆದೊಯ್ಯುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಯೋಧನೊಂದಿಗೆ ಪೊಲೀಸರು ನಡೆದುಕೊಂಡ ಈ ದುರ್ವರ್ತನೆ ಬಗ್ಗೆ ಖಂಡನೆ ವ್ಯಕ್ತವಾಗಿದೆ.

ಸೈಯದ್​​ ಅಲಿಮುಲ್ಲಾ ಎಂಬುವವರೇ ಪೊಲೀಸರಿಂದ ದಾಳಿಗೆ ಒಳಗಾದ ಯೋಧ ಎಂದು ಗುರುತಿಸಲಾಗಿದೆ. ಅನಕಪಲ್ಲಿ ಜಿಲ್ಲೆಯ ಯಲಮಂಚಿಲಿ ಮಂಡಲದ ರೇಗುಪಾಲೆಂ ಮೂಲದ ಇವರು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ 52 ರಾಷ್ಟ್ರೀಯ ರೈಫಲ್ಸ್​ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನವೆಂಬರ್ 2ರಂದು ರಜೆಯ ಮೇಲೆ ಊರಿಗೆ ಬಂದಿದ್ದರು.

ಮಂಗಳವಾರ ಪರವಾಡ ಮಂಡಲದ ಸಂತಬಯಲು ಎಂಬಲ್ಲಿ ಬಸ್‌ಗಾಗಿ ಸೈಯದ್​​ ಅಲಿಮುಲ್ಲಾ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಪೇದೆಗಳಾದ ಎಂ.ಮುತ್ಯಾಳನಾಯ್ಡು ಮತ್ತು ಶೋಭಾರಾಣಿ ಯೋಧನ ಬಳಿಗೆ ಬಂದು ದಿಶಾ ಆ್ಯಪ್​ ಡೌನ್‌ಲೋಡ್ ಮಾಡಿಕೊಳ್ಳುವಂತೆ ಹೇಳಿದ್ದಾರೆ. ಅಂತೆಯೇ, ಅಲಿಮುಲ್ಲಾ ತಮ್ಮ ಮೊಬೈಲ್​ನಲ್ಲಿ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡಿದ್ದಾರೆ.

ಇದೇ ಪ್ರಕ್ರಿಯೆಯಲ್ಲಿ ಮೊಬೈಲ್​ಗೆ ಒಟಿಪಿ ಬಂದಿದೆ. ಈ ಒಟಿಪಿ ಸಂಖ್ಯೆಯನ್ನು ಪೊಲೀಸ್​ ಪೇದೆ ಕೇಳಿದ್ದಾರೆ. ಇದು ಸೈಬರ್ ವಂಚನೆಗೆ ಕಾರಣವಾಗಬಹುದು ಎಂದು ಯೋಧ ಅನುಮಾನಗೊಂಡಿದ್ದಾರೆ. ಹೀಗಾಗಿ ನೀವು ಪೊಲೀಸರು ಎನ್ನಲು ಪರಾವೆ ಏನು ನಿಮ್ಮ ಗುರುತಿನ ಕಾರ್ಡ್‌ಗಳನ್ನು ತೋರಿಸಿ ಎಂದು ಸೈಯದ್​​ ಅಲಿಮುಲ್ಲಾ ಕೇಳಿದ್ದಾರೆ. ಇದೇ ವಿಷಯವಾಗಿ ಆತನ ಮೇಲೆ ಪೊಲೀಸರು ವಾಗ್ವಾದಕ್ಕೆ ಇಳಿದಿದ್ದಾರೆ.

ನಾವು ಪೋಲೀಸ್ ಸಮವಸ್ತ್ರ ಧರಿಸಿದ್ದೇವೆ ಕಾಣಿಸುತ್ತಿಲ್ಲವೇ ಎಂದೆಲ್ಲ ಯೋಧನೊಂದಿಗೆ ಗಲಾಟೆ ಶುರು ಮಾಡಿದ್ದಾರೆ. ಅಲ್ಲದೇ, ಯೋಧನ ಕೊರಳಪಟ್ಟಿ ಹಿಡಿದು ಪುರುಷ ಒದ್ದಿದ್ದಾರೆ. ಮತ್ತೊಂದೆಡೆ, ಮಹಿಳಾ ಪೇದೆ ಸಹ ಯೋಧನ ಕಪಾಳಕ್ಕೆ ಬಾರಿಸಿದ್ದಾರೆ. ಇದೇ ವೇಳೆ, ಸ್ಥಳಕ್ಕೆ ಇನ್ನಿಬ್ಬರು ಪೊಲೀಸರು ಕೂಡ ಬಂದಿದ್ದಾರೆ. ನಾಲ್ವರು ಸೇರಿಕೊಂಡು ಯೋಧನನ್ನು ಠಾಣೆಗೆ ಕರೆದುಕೊಂಡು ಹೋಗಲು ಬಲವಂತವಾಗಿ ಆಟೋದಲ್ಲಿ ಹತ್ತಿಸಿದ್ದಾರೆ.

ಈ ಘಟನೆ ಬಳಿಕ ಯೋಧ ಸೈಯದ್​​ ಅಲಿಮುಲ್ಲಾ ಅನಕಪಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮುರಳಿಕೃಷ್ಣ ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ದೂರು ನೀಡಿದ್ದಾರೆ. ಈ ಕುರಿತ ತನಿಖೆ ನಡೆಸುವುದಾಗಿ ಎಸ್​ಪಿ ಹೇಳಿದ್ದಾರೆ. ಸದ್ಯಕ್ಕೆ ಈ ಘಟನೆಯಲ್ಲಿ ಭಾಗಿಯಾದ ನಾಲ್ವರು ಪೇದೆಗಳನ್ನು ಸಶಸ್ತ್ರ ಮೀಸಲು ಪಡೆಗೆ ಮರು ನಿಯೋಜಿಸಲಾಗಿದೆ.

ಯೋಧನ ಮೇಲೆ ದಾಳಿಯ ಘಟನೆಯನ್ನು ಟಿಡಿಪಿ ನಾಯಕ ನಾರಾ ಲೋಕೇಶ್ ಖಂಡಿಸಿದ್ದಾರೆ. ಜಗನ್ ಆಳ್ವಿಕೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮುಂದುವರಿದಿದೆ. ಇದರ ನಡುವೆ ದಿಶಾ ಕಾಯ್ದೆಗೆ ಸರಿಯಾದ ಮಾರ್ಗಸೂಚಿಗಳು ಇಲ್ಲ. ಮಹಿಳೆಯರ ಸುರಕ್ಷತೆಗಾಗಿ ಮೇಲ್ನೋಟಕ್ಕೆ ಪರಿಚಯಿಸಲಾದ ದಿಶಾ ಆ್ಯಪ್ ​ಅನ್ನು ಪುರುಷರ ಮೊಬೈಲ್ ಫೋನ್‌ಗಳಲ್ಲಿ ಬಲವಂತವಾಗಿ ಡೌನ್‌ಲೋಡ್ ಮಾಡಲಾಗುತ್ತಿದೆ. ಇದೊಂದು ಸಂಭಾವ್ಯ ಹಗರಣವನ್ನು ಸೂಚಿಸುತ್ತದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ: ಗುಡಗೇರಿ ಠಾಣೆಯ ಎಎಸ್​ಐ ಆತ್ಮಹತ್ಯೆ

Last Updated : Nov 8, 2023, 5:27 PM IST

ABOUT THE AUTHOR

...view details