ಕರ್ನಾಟಕ

karnataka

ಸಂಸದರ ಅಮಾನತು ಖಂಡಿಸಿ 'ಇಂಡಿಯಾ' ಪ್ರತಿಭಟನೆ: ಸಂಸತ್​ಗೆ ಯುವಕರು ನುಗ್ಗಲು ನಿರುದ್ಯೋಗವೇ ಕಾರಣ ಎಂದ ರಾಹುಲ್​

By ETV Bharat Karnataka Team

Published : Dec 22, 2023, 1:45 PM IST

INDIA bloc protest: ಸಂಸತ್​ ಅಧಿವೇಶನದಿಂದ 146 ಸಂಸದರ ಅಮಾನತು ಮಾಡಿರುವುದನ್ನು ಖಂಡಿಸಿ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಪ್ರಮುಖರು ದೆಹಲಿಯ ಜಂತರ್​ ಮಂತರ್​ನಲ್ಲಿ ಬೃಹತ್​ ಪ್ರತಿಭಟನೆ ನಡೆಸುತ್ತಿದ್ದಾರೆ.

INDIA bloc leaders stage protest against bulk suspension of MPs from Parliament
ಸಂಸದರ ಅಮಾನತು ಖಂಡಿ 'ಇಂಡಿಯಾ' ಪ್ರತಿಭಟನೆ

ನವದೆಹಲಿ:ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಂಸತ್​ಗೆ ಕೆಲ ಯುವಕರು ನುಗ್ಗಿ ಪ್ರತಿಭಟಿಸಲು ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯೇ ಕಾರಣ ಎಂದು ಕಾಂಗ್ರೆಸ್​​ ಸಂಸದ ರಾಹುಲ್​ ಗಾಂಧಿ ಆರೋಪಿಸಿದ್ದಾರೆ. ಸಂಸತ್​ ಭದ್ರತಾ ವೈಫಲ್ಯ ಹಿನ್ನೆಲೆಯಲ್ಲಿ ಪ್ರತಿಭಟಿಸಿದ 146 ಸಂಸದರನ್ನು ಅಧಿವೇಶನದಿಂದ ಅಮಾನತು ಮಾಡಿರುವುದನ್ನು ಖಂಡಿಸಿ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ದೇಶಾದ್ಯಂತ ಜಂಟಿ ಪ್ರತಿಭಟನೆ ನಡೆಸುತ್ತಿದೆ. ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆಯುತ್ತಿರಯವ ಬೃಹತ್​ ಪ್ರತಿಭಟನೆಯಲ್ಲಿ ಭಾಗವಹಿಸಿ ರಾಹುಲ್​ ಗಾಂಧಿ ಮಾತನಾಡಿದರು.

'ಎರಡ್ಮೂರು ಯುವಕರು ಸಂಸತ್​ಗೆ ನುಗ್ಗಿ, ಸ್ಮೋಕ್​ ಸ್ಪ್ರೇ ಮಾಡಿದ್ದಾರೆ. ಆ ಸಂದರ್ಭದಲ್ಲಿ ಬಿಜೆಪಿ ಸಂಸದರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಘಟನೆಯು ಭದ್ರತಾ ವೈಫಲ್ಯ ಕುರಿತಂತೆ ಪ್ರಶ್ನೆ ಮೂಡಿಸುತ್ತಿದೆ. ಅಲ್ಲದೆ, ಯಾಕೆ ಈ ಮಾದರಿಯಲ್ಲಿ ಪ್ರತಿಭಟನೆ ನಡೆಸಲಾಯಿತು ಎಂಬುದರ ಬಗ್ಗೆ ಪ್ರಶ್ನೆ ಎದ್ದಿದೆ. ಇದಕ್ಕೆಲ್ಲ ಉತ್ತರ ದೇಶದಲ್ಲಿರುವ ನಿರುದ್ಯೋಗ' ಎಂದು ರಾಹುಲ್​ ಗಾಂಧಿ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ. ಆದರೆ, ನಮಗೆ ನೋಟಿಸ್​ ನೀಡಿದ್ದಲ್ಲದೆ, ಅದನ್ನು ಓದುವ ಅವಕಾಶವನ್ನೂ ನೀಡಲಿಲ್ಲ. ಬಿಜೆಪಿ ಸರ್ಕಾರವಯ ದಲಿತರೊಬ್ಬರಿಗೆ ಮಾತನಾಡಲು ಬಿಡುತ್ತಿಲ್ಲ ಎಂದು ನಾನು ಹೇಳಬೇಕೆ? ನೀವು ನಮ್ಮಿಂದ ಮಾತನಾಡುವ ಹಕ್ಕನ್ನು ಕಿತ್ತುಕೊಳ್ಳಲಾಗುವುದಿಲ್ಲ. ಈ ಸ್ವಾತಂತ್ರ್ಯವನ್ನು ನಮಗೆ ಜವಾಹರ್​ಲಾಲ್ ನೆಹರೂ ಹಾಗೂ ಮಹಾತ್ಮಾ ಗಾಂಧಿಯವರು ನೀಡಿದ್ದಾರೆ. ನೀವು ನಮ್ಮ ಸಂಸದರನ್ನು ಅಮಾನತು ಮಾಡಿದ್ದಲ್ಲದೆ, ಅವಿರೋಧವಾಗಿ ಕಾನೂನು ಪಾಸ್​ ಮಾಡಿದ್ದೀರಿ. ನಮಗೂ ಹೋರಾಡುವ ಹಕ್ಕಿದೆ' ಎಂದು ಕಿಡಿಕಾರಿದರು.

ಸಂಸತ್​ ಭವನದಲ್ಲಿ ಡಿಸೆಂಬರ್ 13ರಂದು ಉಂಟಾದ ಭದ್ರತಾ ಲೋಪದ ಬಗ್ಗೆ ಉಭಯ ಸದನಗಳ ಒಳಗೆ ಪ್ರಧಾನಿ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳ ನಾಯಕರು ಒತ್ತಾಯಿಸಿ ಪ್ರತಿಭಟನೆ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ 'ಇಂಡಿಯಾ'ದ ವಿವಿಧ ಪಕ್ಷಗಳ ಸದಸ್ಯರನ್ನು ಲೋಕಸಭೆ ಹಾಗೂ ರಾಜ್ಯಸಭೆ ಸೇರಿ ಉಭಯ ಸದನಗಳಿಂದ ಒಟ್ಟೂ 146 ಸಂಸದರನ್ನು ಅಮಾನತು ಮಾಡಲಾಗಿದೆ.


ಅಮಿತ್​ ಶಾ ರಾಜೀನಾಮೆ, ಪ್ರಧಾನಿ ಹೇಳಿಕೆಗೆ ಪಟ್ಟು ಹಿಡಿದು ಲೋಕಸಭೆಯಲ್ಲಿ ದಾಂಧಲೆ ನಡೆಸಿದ ಪ್ರತಿಪಕ್ಷಗಳ ಒಟ್ಟು 100 ಸದಸ್ಯರನ್ನು ಸ್ವೀಕರ್​ ಅಮಾನತು ಮಾಡಿದ್ದರು. ನಿನ್ನೆ ಕಾಂಗ್ರೆಸ್​​ನ ಮೂರು ಸಂಸದರು ಅಮಾನತುಗೊಂಡಿದ್ದರು. ಇದಾದ ಬಳಿಕ ಸದನವನ್ನು ಅನಿರ್ದಿಷ್ಟಾವಧಿ ಕಾಲಕ್ಕೆ ಮುಂದೂಡಲಾಗಿತ್ತು. ನಿಗದಿಯಂತೆ ಇಂದು ಸಂಸತ್​ ಅಧಿವೇಶನ ಕೊನೆಗೊಳ್ಳಬೇಕಿತ್ತು.

ABOUT THE AUTHOR

...view details