ಕರ್ನಾಟಕ

karnataka

ಮಹಿಳಾ ಮೀಸಲು ಮಸೂದೆ ಜಾರಿಗೆ ತೆಲಂಗಾಣ ಸಿಎಂ ಪುತ್ರಿ ಕೆ.ಕವಿತಾ ಉಪವಾಸ

By

Published : Mar 10, 2023, 1:23 PM IST

Updated : Mar 10, 2023, 4:41 PM IST

ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಸ್ಥಾನಗಳನ್ನು ಮೀಸಲಿಡುವ ಮಹಿಳಾ ಮೀಸಲಾತಿ ಮಸೂದೆಯನ್ನು ತ್ವರಿತವಾಗಿ ಅಂಗೀಕರಿಸುವಂತೆ ಆಗ್ರಹಿಸಿ ಸಂಸದೆ ಕೆ. ಕವಿತಾ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

BRS leader K Kavitha leads hunger strike
BRS leader K Kavitha leads hunger strike

ಉಪವಾಸ ಸತ್ಯಾಗ್ರಹ

ನವದೆಹಲಿ: ಬಹಳ ಕಾಲದಿಂದ ಬಾಕಿ ಉಳಿದಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ತ್ವರಿತವಾಗಿ ಅಂಗೀಕರಿಸುವಂತೆ ಕೋರಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಶುಕ್ರವಾರ ಆರು ಗಂಟೆಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ದೆಹಲಿ ಮದ್ಯ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವ ಒಂದು ದಿನ ಮುಂಚೆ ಕವಿತಾ ಉಪವಾಸ ಸತ್ಯಾಗ್ರಹ ಮಾಡುತ್ತಿರುವುದು ಗಮನಾರ್ಹವಾಗಿದೆ. ಇಲ್ಲಿನ ಜಂತರ್ ಮಂತರ್ ನಲ್ಲಿ ನಡೆದ ಧರಣಿ ಕಾರ್ಯಕ್ರಮಕ್ಕೆ ಸಿಪಿಐ ಎಂ ನಾಯಕ ಸೀತಾರಾಂ ಯೆಚೂರಿ ಚಾಲನೆ ನೀಡಿದರು.

ಸತ್ಯಾಗ್ರಹ ಸ್ಥಳದಲ್ಲಿ ಸಮಾಜವಾದಿ ಪಕ್ಷದ ನಾಯಕಿ ಸೀಮಾ ಶುಕ್ಲಾ, ತೆಲಂಗಾಣ ಶಿಕ್ಷಣ ಸಚಿವೆ ಸವಿತಾ ಇಂದ್ರಾ ರೆಡ್ಡಿ ಮತ್ತು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್ ಸೇರಿದಂತೆ ಪ್ರಮುಖರು ಹಾಜರಿದ್ದರು. ಸಂಜಯ್ ಸಿಂಗ್ ಮತ್ತು ಚಿತ್ರಾ ಸರ್ವರಾ (ಎಎಪಿ), ನರೇಶ್ ಗುಜ್ರಾಲ್ (ಅಕಾಲಿದಳ), ಅಂಜುಮ್ ಜಾವೇದ್ ಮಿರ್ಜಾ (ಪಿಡಿಪಿ), ಶಮಿ ಫಿರ್ದೌಸ್ (ಎನ್‌ಸಿ), ಸುಶ್ಮಿತಾ ದೇವ್ (ಟಿಎಂಸಿ), ಕೆಸಿ ತ್ಯಾಗಿ (ಜೆಡಿಯು), ಸೀಮಾ ಮಲಿಕ್ (ಎನ್‌ಸಿಪಿ), ನಾರಾಯಣ ಕೆ (ಸಿಪಿಐ), ಶ್ಯಾಮ್ ರಜಾಕ್ (ಆರ್‌ಎಲ್‌ಡಿ), ಪ್ರಿಯಾಂಕಾ ಚತುರ್ವೇದಿ (ಶಿವಸೇನೆ) ಮತ್ತು ಕಾಂಗ್ರೆಸ್‌ನ ಮಾಜಿ ನಾಯಕ ಕಪಿಲ್ ಸಿಬಲ್ ಕೂಡ ಸತ್ಯಾಗ್ರಹದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.

ಮಸೂದೆ ಅಂಗೀಕಾರವಾಗುವವರೆಗೆ ಈ ಪ್ರತಿಭಟನೆಯಲ್ಲಿ ಕವಿತಾ ಅವರಿಗೆ ನಮ್ಮ ಪಕ್ಷ ಬೆಂಬಲ ನೀಡಲಿದೆ, ರಾಜಕೀಯದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲು ಈ ಮಸೂದೆಯನ್ನು ತರುವುದು ಮುಖ್ಯವಾಗಿದೆ ಎಂದು ಯೆಚೂರಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು. ಭಾರತ ಅಭಿವೃದ್ಧಿಯಾಗಬೇಕಾದರೆ ಮಹಿಳೆಯರು ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಅದಕ್ಕಾಗಿ ಕಳೆದ 27 ವರ್ಷಗಳಿಂದ ಬಾಕಿ ಇರುವ ಈ ಮಸೂದೆ ಜಾರಿಗೊಳಿಸುವುದು ಮುಖ್ಯವಾಗಿದೆ ಎಂದು ಕವಿತಾ ಹೇಳಿದರು.

ಇಂದಿನ ಸತ್ಯಾಗ್ರಹ ಕೇವಲ ಆರಂಭ ಮಾತ್ರವಾಗಿದ್ದು, ದೇಶಾದ್ಯಂತ ಪ್ರತಿಭಟನೆ ಮುಂದುವರಿಯಲಿವೆ ಎಂದು ಕವಿತಾ ಹೇಳಿದರು. ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಸ್ಥಾನಗಳನ್ನು ಮೀಸಲಿಡುವ ಮಸೂದೆಯನ್ನು ಮೊಟ್ಟ ಮೊದಲಿಗೆ ಸೆಪ್ಟೆಂಬರ್ 12, 1996 ರಂದು ಆಗಿನ ಯುನೈಟೆಡ್ ಫ್ರಂಟ್ ಸರ್ಕಾರವು ಲೋಕಸಭೆಯಲ್ಲಿ ಪರಿಚಯಿಸಿತ್ತು. ವಾಜಪೇಯಿ ಸರ್ಕಾರ ಲೋಕಸಭೆಯಲ್ಲಿ ಮಸೂದೆ ಪಾಸ್ ಮಾಡಲು ಪ್ರಯತ್ನಿಸಿದರೂ ಅದು ಅಂಗೀಕಾರವಾಗಲಿಲ್ಲ.

ಆದಾಗ್ಯೂ, ಕಾಂಗ್ರೆಸ್ ನೇತೃತ್ವದ ಯುಪಿಎ-I ಸರ್ಕಾರವು ಮೇ 2008 ರಲ್ಲಿ ಅದನ್ನು ಮತ್ತೆ ಸಂಸತ್ತಿನಲ್ಲಿ ಪರಿಚಯಿಸಿತು ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು. ಆದರೆ ನಂತರ ಅದನ್ನು ಸ್ಥಾಯಿ ಸಮಿತಿಗೆ ಕಳುಹಿಸಲಾಯಿತು. 2010 ರಲ್ಲಿ, ಅದನ್ನು ಸದನದಲ್ಲಿ ಅಂಗೀಕರಿಸಲಾಯಿತು ಮತ್ತು ಅಂತಿಮವಾಗಿ ಲೋಕಸಭೆಗೆ ರವಾನಿಸಲಾಯಿತು. ಆದಾಗ್ಯೂ, 15 ನೇ ಲೋಕಸಭೆ ಮುಕ್ತಾಯದೊಂದಿಗೆ ಮಸೂದೆಯು ಲ್ಯಾಪ್ಸ್ ಆಗಿತ್ತು. ಅಂದಿನಿಂದ ಬಿಲ್ ಮುಂದಕ್ಕೆ ಸಾಗಿಲ್ಲ.

ಈ ಮಸೂದೆಯು 2010 ರಿಂದ ಸ್ಥಗಿತ ಸ್ಥಿತಿಯಲ್ಲಿದೆ ಮತ್ತು 2024 ರ ಮೊದಲು ಸಂಸತ್ತಿನಲ್ಲಿ ಅದನ್ನು ಅಂಗೀಕರಿಸಲು ಮೋದಿ ಸರ್ಕಾರಕ್ಕೆ ಐತಿಹಾಸಿಕ ಅವಕಾಶವಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಗುರುವಾರ ಹೇಳಿದ್ದಾರೆ.

ಇದನ್ನೂ ಓದಿ : ಕವಿತಾಗೆ ಕಳುಹಿಸಿದ್ದು ಇಡಿ ಸಮನ್ಸ್ ಅಲ್ಲ.. ಮೋದಿ ಸಮನ್ಸ್ : ಕೆಟಿಆರ್

Last Updated :Mar 10, 2023, 4:41 PM IST

ABOUT THE AUTHOR

...view details