ಕರ್ನಾಟಕ

karnataka

Honour killing: ಮರ್ಯಾದೆಗಾಗಿ ಪ್ರೇಮಿಗಳ ಕೊಂದು ಮೊಸಳೆಗಳಿದ್ದ ನದಿಗೆ ಶವ ಬಿಸಾಡಿದ ಕುಟುಂಬಸ್ಥರು!

By

Published : Jun 19, 2023, 5:38 PM IST

ಮಧ್ಯಪ್ರದೇಶದಲ್ಲಿ ಕುಟುಂಬದ ಮರ್ಯಾದೆಗಾಗಿ ಇಬ್ಬರು ಯುವ ಪ್ರೇಮಿಗಳನ್ನು ಬಲಿ ಪಡೆಯಲಾಗಿದೆ. ಗುಂಡಿಕ್ಕಿ ಕೊಂದು ಮೊಸಳೆಗಳಿದ್ದ ನದಿಗೆ ಬಿಸಾಡಿ ಕ್ರೌರ್ಯ ಮೆರೆದಿದ್ದಾರೆ.

ಮಧ್ಯಪ್ರದೇಶ ಮರ್ಯಾದೆ ಹತ್ಯೆ
ಮಧ್ಯಪ್ರದೇಶ ಮರ್ಯಾದೆ ಹತ್ಯೆ

ಭೋಪಾಲ್ (ಮಧ್ಯಪ್ರದೇಶ):ಮಧ್ಯಪ್ರದೇಶದಲ್ಲಿ ಭೀಕರ ಮರ್ಯಾದೆಗೇಡು ಹತ್ಯೆ ನಡೆದಿದೆ. ಪ್ರೇಮಿಗಳಿಬ್ಬರನ್ನು ಕೊಂದ ಬಳಿಕ ಕುರುಹು ಸಿಗಬಾರದು ಎಂದು ಕಲ್ಲು ಕಟ್ಟಿ ಮೊಸಳೆಗಳಿದ್ದ ನದಿಗೆ ಬಿಸಾಡಲಾಗಿದೆ. ನಾಪತ್ತೆ ಪ್ರಕರಣ ದಾಖಲಾದ ಬಳಿಕ ವಿಚಾರಣೆಯ ವೇಳೆ ಭೀಕರ ಹತ್ಯೆ ಬಯಲಾಗಿದೆ.

ಜೂನ್​ 3ರಂದು ಈ ಹತ್ಯೆ ನಡೆದಿದೆ. ರತನ್‌ಬಸಾಯಿ ಗ್ರಾಮದ ಶಿವಾನಿ ತೋಮರ್ (18) ಮತ್ತು ಸಮೀಪದ ಇನ್ನೊಂದು ಗ್ರಾಮದ ರಾಧೇಶ್ಯಾಮ್ ತೋಮರ್ (21) ಮೃತ ಪ್ರೇಮಿಗಳು. ಹಲವು ವರ್ಷಗಳಿಂದ ಇಬ್ಬರೂ ಪ್ರೀತಿಯಲ್ಲಿದ್ದರು. ಇಬ್ಬರ ಪ್ರೀತಿ ಹುಡುಗಿಯ ಕುಟುಂಬಸ್ಥರಿಗೆ ಒಪ್ಪಿಗೆ ಇರಲಿಲ್ಲ. ಹಲವು ಎಚ್ಚರಿಕೆ ಮತ್ತು ವಾಗ್ವಾದಗಳು ನಡೆದಿದ್ದವು.

ಶಿವಾನಿ ಮನೆಯವರು ಎಚ್ಚರಿಕೆ ನೀಡಿದಾಗ್ಯೂ ಇಬ್ಬರು ತಮ್ಮ ಸಂಬಂಧನವನ್ನು ಮುಂದುವರಿಸಿದ್ದರು. ಇದರಿಂದ ಕುಪಿತಗೊಂಡ ಆಕೆಯ ಕುಟುಂಬಸ್ಥರು ಗ್ರಾಮದ ಹೊರವಲಯದಲ್ಲಿ ಜೂನ್​ 3ರಂದು ಇಬ್ಬರನ್ನೂ ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆಯನ್ನು ಮುಚ್ಚಿ ಹಾಕಲು ಮೃತದೇಹಗಳಿಗೆ ಕಲ್ಲುಗಳನ್ನು ಕಟ್ಟಿ ಮೊಸಳೆಗಳಿರುವ ಚಂಬಲ್​ ನದಿಗೆ ಬಿಸಾಡಿದ್ದಾರೆ.

ಕೆಲವು ದಿನಗಳಿಂದ ತನ್ನ ಮಗ ಮತ್ತು ಪಕ್ಕದ ಗ್ರಾಮದ ಯುವತಿ ಕಾಣೆಯಾಗಿದ್ದಾರೆ ಎಂದು ಮೃತ ರಾಧೇಶ್ಯಾಮ್ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅದಾಗಲೇ ನೋಡಿ ಭೀಕರ ಹತ್ಯೆ ಬೆಳಕಿಗೆ ಬಂದಿದೆ.

ತನ್ನ ಪುತ್ರ ಮತ್ತು ಪಕ್ಕದ ಗ್ರಾಮದ ಯುವತಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿ ಮನೆಯವರ ವಿರೋಧವಿತ್ತು. ಅವರೇ ಕೊಲೆ ಮಾಡಿರಬಹುದೆಂದು ಶಂಕೆ ಇದೆ ಎಂದು ದೂರು ನೀಡಲಾಗಿತ್ತು. ಆದರೆ, ಪ್ರೇಮಿಗಳಿಬ್ಬರು ಒಟ್ಟಿಗೆ ಹೋಗಿದ್ದಕ್ಕೆ ಯಾವುದೇ ಪುರಾವೆ ಸಿಕ್ಕಿರಲಿಲ್ಲ. ಅನುಮಾನದ ಮೇಲೆ ಯುವತಿಯ ತಂದೆ ಹಾಗೂ ಆತನ ಕುಟುಂಬ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿವಿಧ ಕೋನಗಳಲ್ಲಿ ವಿಚಾರಣೆ ನಡೆಸಿದಾಗ ಯುವತಿಯ ಕಡೆಯವರು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮೃತ ದೇಹಗಳನ್ನು ಕಲ್ಲು ಕಟ್ಟಿ ಚಂಬಲ್ ನದಿಗೆ ಎಸೆದಿದ್ದಾಗಿ ಹೇಳಿದ್ದಾರೆ. ನದಿಯಲ್ಲಿ ಸುಮಾರು 2,500 ಮೊಸಳೆಗಳಿವೆ. ಘಟನೆ ನಡೆದು 15 ದಿನಗಳು ಕಳೆದಿವೆ. ಶವ ಸಿಗುವ ಯಾವ ಮುನ್ಸೂಚನೆಯೂ ಇಲ್ಲ. ಆದರೂ, ಪೊಲೀಸರು ಶವಗಳ ಪತ್ತೆಗೆ ಈಜುಗಾರರ ಸಹಾಯ ಪಡೆದಿದ್ದಾರೆ.

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ರತನ್‌ಬಸಾಯಿ ಗ್ರಾಮದಲ್ಲಿ ಮರ್ಯಾದೆ ಹತ್ಯೆಯಾಗಿದೆ. ಯುವತಿಯ ಕಡೆಯವರು ಹತ್ಯೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಗುಂಡಿಕ್ಕಿ ಕೊಂದು ಮೃತದೇಹಗಳನ್ನು ಮೊಸಳೆಗಳ ನದಿಗೆ ಬಿಸಾಡಲಾಗಿದೆ. ಶವ ಪತ್ತೆಗೆ ಈಜುಗಾರರ ನೆರವು ಪಡೆಯಲಾಗಿದೆ. ಹತ್ಯೆಕೋರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಥುರಾದಲ್ಲಿ ನಡೆದಿದ್ದ ಹತ್ಯೆ:ಕಳೆದ ವರ್ಷ ಉತ್ತರಪ್ರದೇಶದ ಮಥುರಾದಲ್ಲಿ ಮರ್ಯಾದೆ ಹತ್ಯೆ ನಡೆದ ಪ್ರಕರಣ ಬೆಳಕಿಗೆ ಬಂದಿತ್ತು. ಯಮುನಾ ಎಕ್ಸ್​ಪ್ರೆಸ್ ವೇ ಸರ್ವೀಸ್ ರಸ್ತೆಯಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಬಳಿ ಕೆಂಪು ಬಣ್ಣದ ಟ್ರಾಲಿ ಸೂಟ್‌ಕೇಸ್‌ನಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿತ್ತು. ಈ ಮೃತದೇಹ ದೆಹಲಿಯ ಮೋಡ್‌ಬಂದ್ ಎಂಬ ಪ್ರದೇಶದ ನಿವಾಸಿ ನಿತೇಶ್ ಯಾದವ್ ಅವರ ಪುತ್ರಿ ಆಯುಷಿ ಯಾದವ್ (21) ಅವರದ್ದಾಗಿದ್ದು, ತಂದೆಯೇ ಮರ್ಯಾದೆಗೆ ಅಂಜಿ ಗುಂಡಿಕ್ಕಿ ಕೊಂದಿರುವುದು ವಿಚಾರಣೆಯ ವೇಳೆ ಬಯಲಾಗಿತ್ತು.

ತಮ್ಮ ಒಬ್ಬಳೇ ಮಗಳನ್ನು ಮರ್ಯಾದೆಗೆ ಹೆದರಿ ಗುಂಡಿಕ್ಕಿ ಕೊಂದಿರುವುದಾಗಿ ಆರೋಪಿ ತಂದೆ ಒಪ್ಪಿಕೊಂಡಿದ್ದ. ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ತನ್ನದೇ ಕಾರಿನಲ್ಲಿ ತಂದು ಯಮುನಾ ಎಕ್ಸ್​ಪ್ರೆಸ್​ ವೇ ಸರ್ವಿಸ್​ ರಸ್ತೆಯಲ್ಲಿ ಎಸೆದು ಹೋಗಿದ್ದ. ಮಗಳು ತನಗೆ ಹೇಳದೆ ಎಲ್ಲೋ ಹೋಗಿದ್ದಳು, ಮನೆಗೆ ಬಂದ ತಕ್ಷಣ ಕೋಪದಲ್ಲಿ ಗುಂಡು ಹಾರಿಸಿದ್ದಾಗಿ ಆತ ಪೊಲೀಸರಿಗೆ ಹೇಳಿದ್ದ.

ಇದನ್ನೂ ಓದಿ:ಬಿಜೆಪಿಯ ಸುಳ್ಳಿನ ಫ್ಯಾಕ್ಟರಿ ಬಂದ್ ಮಾಡುತ್ತೇವೆ: ಸಚಿವ ಪ್ರಿಯಾಂಕ್ ಖರ್ಗೆ

ABOUT THE AUTHOR

...view details