ಕರ್ನಾಟಕ

karnataka

ದೇಶದ ಹಲವೆಡೆ ಭಾರಿ ಮಳೆ: ದೆಹಲಿಯಲ್ಲಿ ಒಂದೇ ದಿನ ದಾಖಲೆ ವರ್ಷಧಾರೆ

By

Published : Jul 9, 2023, 11:34 AM IST

ಭಾರತದ ವಿವಿಧೆಡೆ ಮುಂಗಾರು ಅಬ್ಬರಿಸುತ್ತಿದೆ. ನದಿಗಳು ಉಕ್ಕಿ ಹರಿಯಲಾರಂಭಿಸಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿದೆ.

ಮಳೆ
ಮಳೆ

ದೇಶಾದ್ಯಂತ ಭಾರಿ ಮಳೆ

ನವದೆಹಲಿ:ದೇಶಾದ್ಯಂತ ಮಳೆ ತಡವಾಗಿ ಶುರುವಾದರೂ ಆರ್ಭಟ ಜೋರಾಗಿದೆ. ರಾಜಧಾನಿ ದೆಹಲಿಯಲ್ಲಿ ಶನಿವಾರ ಬೆಳಗ್ಗೆಯಿಂದ ಸಂಜೆ 5.30ರವರೆಗೆ 126.1 ಮಿ.ಮೀ ಮಳೆ ಸುರಿಯಿತು. ಭಾನುವಾರ 133.4 ಮಿ.ಮೀ ಮಳೆಯಾಗಿದ್ದು, 20 ವರ್ಷಗಳ ನಂತರ ಒಂದು ದಿನದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜಧಾನಿಯ ಹಲವೆಡೆ ಜಡಿ ಮಳೆಗೆ ರಸ್ತೆಗಳು ಮುಳುಗಡೆಯಾದವು. ಚರಂಡಿಗಳು ತುಂಬಿ ಹರಿದವು. ಅಪಾರ ಪ್ರಮಾಣದ ನೀರು ರಸ್ತೆಯಲ್ಲೇ ನಿಂತು ಗಂಟೆಗಟ್ಟಲೆ ವಾಹನ ಸಂಚಾರಕ್ಕೆ ತೊಂದರೆಯಾಯಿತು. ವಾಹನ ಸವಾರರು ಮತ್ತು ಪಾದಚಾರಿಗಳು ಜಲಾವೃತ ರಸ್ತೆಗಳು, ಮೇಲ್ಸೇತುವೆಗಳು ಮತ್ತು ಕಾಲುದಾರಿಗಳ ಮೂಲಕ ಸಂಚರಿಸಲು ಪರದಾಡಿದರು.

ದೆಹಲಿಯಲ್ಲಿ ಮನೆಗಳ ಕುಸಿತ: ನಿನ್ನೆಯ ಮಳೆಗೆ ದೆಹಲಿಯಲ್ಲಿ 15 ಮನೆಗಳು ಕುಸಿದ ವರದಿಯಾಗಿದೆ. 56 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ದಕ್ಷಿಣ ದೆಹಲಿಯ ಕಲ್ಕಾಜಿಯಲ್ಲಿರುವ ದೇಶಬಂಧು ಕಾಲೇಜಿನ ಗೋಡೆ ಕುಸಿದು ಹಲವು ಕಾರುಗಳಿಗೆ ಹಾನಿಯಾಯಿತು. ಮಯೂರ್ ವಿಹಾರ್ ಪ್ರದೇಶದಲ್ಲಿಯೂ ಅತಿಯಾದ ಮಳೆ ಸಂಚಾರಕ್ಕೆ ಅಡ್ಡಿಯಾಯಿತು. ಮುಂದಿನ 2 ದಿನಗಳಲ್ಲಿ ತುಂತುರು ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶಿಮ್ಲಾ-ಕಲ್ಕಾ ಪಾರಂಪರಿಕ ರೈಲು ಹಳಿ ಮೇಲೆ ಮರ ಬಿದ್ದಿರುವುದು.

ಹಿಮಾಚಲ ಪ್ರದೇಶ ತತ್ತರ: ಹಿಮಾಚಲ ಪ್ರದೇಶದಲ್ಲಿ ಎಡಬಿಡದೆ ಮಳೆಯಾಗುತ್ತಿದೆ. ಇಲ್ಲಿನ ಕೆಲವೆಡೆ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ರೈಲ್ವೇ ಟ್ರಾಕ್​ಗೆ ಮರಗಳು ಉರುಳಿದ್ದರಿಂದ ಶಿಮ್ಲಾ-ಕಲ್ಕಾ ಪಾರಂಪರಿಕ ರೈಲು ಹಳಿಯಲ್ಲಿ ರೈಲು ಸಂಚಾರವನ್ನು ಇಂದು ರದ್ದುಗೊಳಿಸಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಜುಲೈ 9 ಮತ್ತು 10ರಂದು ಶ್ರೀಖಂಡ್ ಮಹಾದೇವ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಮಂಡಿ ಮತ್ತು ಕುಲುವಿನಲ್ಲಿ ನಿರಂತರ ಮಳೆಯಾಗುತ್ತಿದ್ದು ಬಿಯಾಸ್ ನದಿ ಉಕ್ಕಿ ಹರಿಯುತ್ತಿದೆ. ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 3ರಲ್ಲಿ ಮಂಡಿಯಿಂದ ಕುಲು ಕಡೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪಾರ್ವತಿ ಬ್ಯಾಗ್‌ನ ಆಚೆಗಿನ ಯಾತ್ರಾ ಮಾರ್ಗ ಹಾನಿಯಾಗಿದ್ದು, ಕುಲು ಜಿಲ್ಲಾಧಿಕಾರಿ ಅಶುತೋಷ್ ಗರ್ಗ್ ಅಲ್ಲಿ ರೆಡ್ ಅಲರ್ಟ್ ಘೋಷಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲೂ ಭಾರಿ ಮಳೆ :ಇನ್ನು, ಪವಿತ್ರ ಅಮರನಾಥ ಯಾತ್ರೆಯನ್ನು ಈಗಾಗಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯಾತ್ರೆ ಜುಲೈ 1ರಂದು ಪ್ರಾರಂಭವಾಗಿದ್ದು ಆಗಸ್ಟ್ 31ರಂದು ಮುಕ್ತಾಯಗೊಳ್ಳಲಿದೆ. ಭಾರಿ ಮಳೆಯಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ರಸ್ತೆ ಬದಿಯೇ ನೂರಾರು ವಾಹನಗಳು, ಸರಕು ಸಾಗಣೆ ಟ್ರಕ್‌ಗಳು ಜಮ್ಮು-ಕಾಶ್ಮೀರದ ಉಧಮ್​ಪುರ್​ದಲ್ಲಿ ಸಿಲುಕಿಕೊಂಡಿವೆ.

ರಾಜಸ್ಥಾನ, ಹರಿಯಾಣದಲ್ಲಿ ಮಳೆ ಅಬ್ಬರ: ರಾಜಸ್ಥಾನದ ಸಿಕಾರ್‌ ಪ್ರದೇಶದಲ್ಲಿ ನಿರಂತರ ಮಳೆಗೆ ಹಲವು ಪ್ರದೇಶಗಳು ಜಲಾವೃತವಾಗಿವೆ. ಹರಿಯಾಣದ ಗುರುಗ್ರಾಮ್‌ನ ಸುಭಾಷ್ ಚೌಕ್ ಬಳಿ ಕೂಡ ರಸ್ತೆಗಳು ನೀರಿನಿಂದ ಆವೃತವಾಗಿದ್ದು, ವಾಹನಗಳು ಅದೇ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ದೃಶ್ಯ ಕಂಡುಬಂತು.

ಇದನ್ನೂ ಓದಿ:ಅಸ್ಸೋಂ ರಾಜ್ಯದ ಆರು ಜಿಲ್ಲೆಗಳಲ್ಲಿ ಭೀಕರ ಪ್ರವಾಹ: 21,000ಕ್ಕೂ ಜನರು ತತ್ತರ

ABOUT THE AUTHOR

...view details