ಕರ್ನಾಟಕ

karnataka

ಜಿ-20 ಶೃಂಗಸಭೆ: ಭಾರತ, ಮಧ್ಯಪ್ರಾಚ್ಯ, ಯುರೋಪ್ ಆರ್ಥಿಕ ಕಾರಿಡಾರ್​ಗೆ​ ಪ್ರಧಾನಿ ನರೇಂದ್ರ ಮೋದಿ ಚಾಲನೆ

By ETV Bharat Karnataka Team

Published : Sep 9, 2023, 7:42 PM IST

G20 Summit: ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಎರಡನೇ ಅಧಿವೇಶನದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಭಾರತ, ಮಧ್ಯಪ್ರಾಚ್ಯ, ಯುರೋಪ್ ಆರ್ಥಿಕ ಕಾರಿಡಾರ್​ಗೆ ಚಾಲನೆ ನೀಡಿದ್ದಾರೆ.

g20-summit-prime-minister-narendra-modi-launches-connectivity-corridor
ಜಿ20 ಶೃಂಗಸಭೆ: ಭಾರತ, ಮಧ್ಯಪ್ರಾಚ್ಯ, ಯುರೋಪ್ ಆರ್ಥಿಕ ಕಾರಿಡಾರ್​ಗೆ​ ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ: ಜಿ20 ಶೃಂಗಸಭೆಯ ಎರಡನೇ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಭಾರತ, ಮಧ್ಯಪ್ರಾಚ್ಯ, ಯುರೋಪ್ ಆರ್ಥಿಕ ಕಾರಿಡಾರ್​ಗೆ ಚಾಲನೆ ನೀಡಿದರು. ಭಾರತ - ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಅನ್ನು ಉದ್ಘಾಟಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ನಾವೆಲ್ಲರೂ ಪ್ರಮುಖ ಮತ್ತು ಐತಿಹಾಸಿಕ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ನಾಗರಿಕತೆಯ ಅಭಿವೃದ್ಧಿಗೆ ಅಗತ್ಯವಾದ ಸಂಪರ್ಕ ಮತ್ತು ಮೂಲಸೌಕರ್ಯಗಳಿಗೆ ಭಾರತವು ಹೆಚ್ಚಿನ ಆದ್ಯತೆ ನೀಡಿದೆ ಎಂದರು.

ವಿವಿಧ ದೇಶಗಳ ನಡುವಿನ ಸಂಪರ್ಕವು ವ್ಯಾಪಾರವನ್ನು ಮಾತ್ರವಲ್ಲದೇ, ಅವುಗಳ ನಡುವಿನ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ನಾವು ನಂಬುತ್ತೇವೆ. ಸಂಪರ್ಕ ಉಪಕ್ರಮ ಉತ್ತೇಜಿಸುವ ಮೂಲಕ, ನಾವು ನಿಯಮಗಳಿಗೆ ಬದ್ಧರಾಗಿರಬೇಕು. ಅಂತಾರಾಷ್ಟ್ರೀಯ ನಿಯಮಗಳಿಗೆ ಬದ್ಧವಾಗಿರುವುದು, ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ. ಮುಂಬರುವ ದಿನಗಳಲ್ಲಿ ಹೊಸದಾಗಿ ಪ್ರಾರಂಭಿಸಲಾದ ಕಾರಿಡಾರ್ ಭಾರತ, ಮಧ್ಯಪ್ರಾಚ್ಯ ಮತ್ತು ಯುರೋಪಿನ ಆರ್ಥಿಕ ಏಕೀಕರಣಕ್ಕೆ ಪರಿಣಾಮಕಾರಿ ಮಾಧ್ಯಮವಾಗಲಿದೆ ಎಂದು ಹೇಳಿದರು.

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮಾತನಾಡಿ, ಇದೊಂದು ದೊಡ್ಡ ಒಪ್ಪಂದ ಎಂದು ಹೇಳಿದರು. ಫ್ರಾನ್ಸ್​ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮಾತನಾಡಿ, ಈ ಸಭೆಯನ್ನು ಆಯೋಜಿಸಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಈ ಸಭೆಯಲ್ಲಿ ಭಾಗವಹಿಸಿರುವುದಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು. ನಾವು ಯುರೋಪಿಯನ್ ಕಮಿಷನ್ ಜೊತೆಗೆ ಹೂಡಿಕೆ ಮಾಡಲು ಬದ್ಧರಾಗಿದ್ದೇವೆ ಎಂದು ಪುನರುಚ್ಚರಿಸಿದರು.

ಆದ್ದರಿಂದ ಈಗ ಇಲ್ಲಿ ಯುರೋಪಿಯನ್ ಕಮಿಷನ್​ನೊಂದಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ನಾವು ಬದ್ಧರಾಗಿದ್ದೇವೆ. ಇದು ಏಷ್ಯಾದಿಂದ ಮಧ್ಯಪ್ರಾಚ್ಯದ ಮೂಲಕ ಯುರೋಪ್‌ಗೆ ದೊಡ್ಡ ಅವಕಾಶಗಳನ್ನು ನೀಡಲು ಮತ್ತು ಜನರನ್ನು ಸಂಪರ್ಕಿಸಲು ಬಹಳ ಮುಖ್ಯವಾದ ಯೋಜನೆಯಾಗಿದೆ. ಆದರೆ, ನಮ್ಮ ಉದ್ದೇಶವು ಇದನ್ನು ಸಾಕಾರಗೊಳಿಸುವುದು ಮತ್ತು ವಿಶೇಷವಾಗಿ ನಿವ್ವಳ ಶೂನ್ಯ ಸಾರಿಗೆ ಮೂಲಸೌಕರ್ಯವನ್ನು ಹೊಂದಿರುವ ಮೊದಲ ಜಾಗತಿಕ ಹಸಿರು ವಾಣಿಜ್ಯ ರಸ್ತೆ ಮಾರ್ಗವನ್ನು ಹೊಂದುವುದು ಎಂದು ಹೇಳಿದರು.

ಸೌದಿ ಅರೇಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮಾತನಾಡಿ, ಈ ಸಭೆಯಲ್ಲಿ ಘೋಷಿಸಲಾದ ಉಪಕ್ರಮ ಮತ್ತು ಆರ್ಥಿಕ ಕಾರಿಡಾರ್ ಯೋಜನೆಯ ಏಕೀಕರಣವನ್ನು ನಾವು ಎದುರು ನೋಡುತ್ತಿದ್ದೇವೆ. ಈ ಮಹತ್ವದ ಆರ್ಥಿಕ ಕಾರಿಡಾರ್ ಅನ್ನು ಸ್ಥಾಪಿಸಲು ನಮ್ಮೊಂದಿಗೆ ಕೆಲಸ ಮಾಡಿದವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದರು. ಭಾರತ - ಮಧ್ಯಪ್ರಾಚ್ಯ - ಯುರೋಪ್ ಆರ್ಥಿಕ ಕಾರಿಡಾರ್ ಪ್ರಾರಂಭವು ಐತಿಹಾಸಿಕ ಎಂದು ಯುರೋಪಿಯನ್ ಕಮಿಷನ್​ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೆಯೆನ್ ಬಣ್ಣಿಸಿದ್ದಾರೆ.

ಇದು ಭಾರತ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಸೌದಿ ಅರೇಬಿಯಾ, ಯುರೋಪಿಯನ್ ಯೂನಿಯನ್, ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಯುನೈಟೆಡ್ ಸ್ಟೇಟ್ಸ್, ಸಂಪರ್ಕ ಮತ್ತು ಮೂಲಸೌಕರ್ಯ ಸಹಕಾರಕ್ಕಾಗಿ ಮಾಡಿಕೊಂಡಿರುವ ಐತಿಹಾಸಿಕ ಒಪ್ಪಂದವಾಗಿದೆ.

ಇದನ್ನೂ ಓದಿ:ಜಿ-20 ಶೃಂಗದ ನಡುವೆ ಪ್ರಧಾನಿ ಮೋದಿ, ಇಂಗ್ಲೆಂಡ್​ ಪ್ರಧಾನಿ ಸುನಕ್ ದ್ವಿಪಕ್ಷೀಯ ಸಭೆ; ವಿಡಿಯೋ

ABOUT THE AUTHOR

...view details