ಕರ್ನಾಟಕ

karnataka

ಲೋಕಸಭೆಯಿಂದ 14​ ಸಂಸದರ ಅಮಾನತು; ರಾಜ್ಯಸಭೆಯಿಂದ ಡೆರೆಕ್ ಒಬ್ರಿಯಾನ್ ಸಸ್ಪೆಂಡ್

By PTI

Published : Dec 14, 2023, 3:00 PM IST

Updated : Dec 14, 2023, 4:30 PM IST

14 Lok Sabha MPs and Rajya Sabha MP Derek OBrien Suspended: ಸಂಸತ್ತಿನ ಅಧಿವೇಶನದ ಉಳಿದ ಅವಧಿಯವರೆಗೆ ಲೋಕಸಭೆಯಿಂದ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷದ 14 ಸಂಸದರು ಹಾಗೂ ರಾಜ್ಯಸಭೆಯಿಂದ ಟಿಎಂಸಿ ಸದಸ್ಯ ಡೆರೆಕ್ ಒಬ್ರಿಯಾನ್ ಅಮಾನತು ಮಾಡಲಾಗಿದೆ. ಇದೇ ವೇಳೆ, ಲೋಕಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿದೆ.

Five MPs suspended from LS for remainder of session over disruptions
ಲೋಕಸಭೆಯಿಂದ ಐವರು ಕಾಂಗ್ರೆಸ್​ ಸಂಸದರು ಅಮಾನತು

ನವದೆಹಲಿ: ಸಂಸತ್ತಿನಲ್ಲಿ ಬುಧವಾರ ನಡೆದ ಭದ್ರತಾ ಲೋಪ ಪ್ರಕರಣ ಸಂಬಂಧ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಲೋಕಸಭೆಯಿಂದ ಕಾಂಗ್ರೆಸ್ ಐವರು ಸೇರಿ 14 ಸಂಸದರನ್ನು ಗುರುವಾರ ಅಮಾನತುಗೊಳಿಸಲಾಗಿದೆ. ಸಂಸದರ ಬಗ್ಗೆ ಸ್ಪೀಕರ್​ ಹೆಸರಿಸಿದ ನಂತರ ಈ ನಿರ್ಣಯವನ್ನು ಸದನದಲ್ಲಿ ಅಂಗೀಕರಿಸಲಾಯಿತು.

ಸಂಸದರಾದ ಟಿ.ಎನ್.ಪ್ರತಾಪನ್, ಹಿಬಿ ಈಡನ್, ಜ್ಯೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಕುರ್ಯಕಸ್, ಬೆನ್ನಿ ಬೆಹನನ್, ವಿಕೆ ಶ್ರೀಕಂದನ್, ಮೊಹಮ್ಮದ್ ಜಾವೇದ್, ಪಿಆರ್ ನಟರಾಜನ್, ಕನಿಮೊಳಿ ಕರುಣಾನಿಧಿ, ಕೆ ಸುಬ್ರಹ್ಮಣ್ಯಂ, ಎಸ್‌ಆರ್ ಪಾರ್ಥಿಬನ್, ಎಸ್ ವೆಂಕಟೇಶನ್ ಮತ್ತು ಮಾಣಿಕಂ ಟ್ಯಾಗೋರ್​ ಅವರನ್ನು ಅಧಿವೇಶನದ ಉಳಿದ ಅವಧಿಯವರೆಗೆ ಅಮಾನತು ಮಾಡಲಾಗಿದೆ. ಗದ್ದಲದ ನಡುವೆಯೇ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರತಿಪಕ್ಷಗಳ ಸದಸ್ಯರ ಅಮಾನತುಗೊಳಿಸುವ ನಿರ್ಣಯ ಮಂಡಿಸಿದರು.

ಲೋಕಸಭೆ ಕಲಾಪಕ್ಕೆ ಇಬ್ಬರು ದುಷ್ಕರ್ಮಿಗಳು ನುಗ್ಗಿದ್ದ ಕುರಿತಾದ ಭದ್ರತಾ ಲೋಪ ಬಗ್ಗೆ ಪ್ರತಿಪಕ್ಷಗಳ ಸದಸ್ಯರು ಘೋಷಣೆಗಳು ಕೂಗಿದರು. ಘಟನೆ ಕುರಿತು ಸರ್ಕಾರ ಹೇಳಿಕೆ ನೀಡಬೇಕೆಂದು ಆಗ್ರಹಿಸಿದರು. ಈ ವೇಳೆ, ಗದ್ದಲದ ವಾತಾವರಣ ಉಂಟಾಯಿತು. ಇದರಿಂದ ಸದನವನ್ನು ಮುಂದೂಡಲಾಯಿತು.

ರಾಜ್ಯಸಭೆಯಿಂದ ಡೆರೆಕ್ ಒಬ್ರಿಯಾನ್ ಸಸ್ಪೆಂಡ್:ಮತ್ತೊಂದೆಡೆ, ರಾಜ್ಯಸಭೆಯಲ್ಲಿಅಶಿಸ್ತಿನ ವರ್ತನೆ ಮತ್ತು ಸಭಾಪತಿಯ ನಿರ್ದೇಶನಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಟಿಎಂಸಿ ಸದಸ್ಯ ಡೆರೆಕ್ ಒಬ್ರಿಯಾನ್ ಅವರನ್ನು ಸದನದಿಂದ ಅಮಾನತುಗೊಳಿಸಲಾಗಿದೆ. ಇದರ ನಂತರವೂ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ಮುಂದುವರೆಸಿದರು.

ಸಭಾಪತಿ ಜಗದೀಪ್ ಧನ್‌ಕರ್ ಅವರು ಡೆರೆಕ್ ಒಬ್ರಿಯಾನ್ ಅವರಿಗೆ ಕಲಾಪಕ್ಕೆ ಅಡ್ಡಿಪಡಿಸುವ ಮತ್ತು ಅಶಿಸ್ತಿನ ವರ್ತನೆಯ ವಿರುದ್ಧ ಎಚ್ಚರಿಕೆ ನೀಡಿದರು. ಅಲ್ಲದೇ, ಅವರನ್ನು ಸದನದಿಂದ ಹೊರಹೋಗುವಂತೆ ಸೂಚಿಸಿದರು. ಆದರೆ, ಇದರ ಬದಲಿಗೆ ಒಬ್ರಿಯಾನ್ ಪ್ರತಿಭಟಿಸಿದರು. ನಂತರ ಸಭಾನಾಯಕ ಪಿಯೂಷ್ ಗೋಯಲ್ ಅವರಿಗೆ ನಿಯಮ 256ರ ಅಡಿ ಒಬ್ರಿಯಾನ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾವನೆ ಮಂಡಿಸಲು ಸಭಾಪತಿ ಅನುಮತಿ ನೀಡಿದರು. ಹೀಗಾಗಿ ಅಧಿವೇಶನದ ಉಳಿದ ಅವಧಿಯವರೆಗೆ ಅವರನ್ನು ಅಮಾನತುಗೊಳಿಸುವ ಪ್ರಸ್ತಾಪವನ್ನು ಧ್ವನಿ ಮತದೊಂದಿಗೆ ಅಂಗೀಕರಿಸಲಾಯಿತು. ಇದರಿಂದ ಪ್ರತಿಪಕ್ಷಗಳ ಸದಸ್ಯರು, ಈ ಅಮಾನತು ಸಹಿಸುವುದಿಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಉನ್ನತ ಮಟ್ಟದ ತನಿಖೆ ಪ್ರಾರಂಭ - ಸಚಿವ ಜೋಶಿ:ಭದ್ರತಾ ಲೋಪ ಬಗ್ಗೆ ಲೋಕಸಭೆಯಲ್ಲಿ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಲೋಕಸಭೆಯ ಭದ್ರತಾ ಲೋಪ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ಪ್ರಾರಂಭಿಸಲಾಗಿದೆ. ಬುಧವಾರ ನಡೆದ ಅಹಿತಕರ ಘಟನೆಯು ಸಂಸದರ ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಗಂಭೀರವಾಗಿದೆ ಎಂದು ನಾವೆಲ್ಲರೂ ಒಪ್ಪುತ್ತೇವೆ ಎಂದು ಹೇಳಿದರು.

ಘಟನೆಯ ನಂತರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ತಕ್ಷಣವೇ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಸಂಸತ್ತಿನ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಸಲಹೆಗಳನ್ನು ಸ್ವೀಕರಿಸಿದ್ಧಾರೆ. ಸಂಸದರು ನೀಡಿದ ಕೆಲವು ಸಲಹೆಗಳನ್ನು ಈಗಾಗಲೇ ಕಾರ್ಯಗತಗೊಳಿಸಲಾಗಿದೆ. ಸಂಸತ್ತಿನ ಭದ್ರತೆಯನ್ನು ಬಲಪಡಿಸಲು ಭವಿಷ್ಯದಲ್ಲಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂಬುವುದಾಗಿ ಸ್ಪೀಕರ್ ಅವರೇ ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.

ಮುಂದುವರೆದು, ಈ ವಿಷಯವು ನಮಗೆಲ್ಲರಿಗೂ ಸಂಬಂಧಿಸಿದೆ. ನಾವು ಒಂದೇ ಧ್ವನಿಯಲ್ಲಿ ಮಾತನಾಡಬೇಕಾಗಿದೆ. ಇಂತಹ ಗಂಭೀರ ರಾಷ್ಟ್ರೀಯ ವಿಚಾರದಲ್ಲಿ ಯಾರಿಂದಲೂ ರಾಜಕೀಯ ಮಾಡಬಾರದು ಎಂದು ಜೋಶಿ, ಸಂಸತ್ತಿನಲ್ಲಿ ಈ ಹಿಂದೆ ನಡೆದ ಇಂತಹ ಭದ್ರತಾ ಲೋಪದ ಘಟನೆಗಳನ್ನು ಪಟ್ಟಿ ಮಾಡಿದರು.

ಘೋಷಣೆ ಕೂಗುವುದು, ಕಾಗದಗಳನ್ನು ಎಸೆಯುವುದು ಮತ್ತು ಗ್ಯಾಲರಿಯಿಂದ ಜಿಗಿಯುವಂತಹ ಘಟನೆಗಳು ಹಿಂದಿನಿಂದಲೂ ನಡೆಯುತ್ತಿವೆ. ಸದ್ಯದ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗಾಗಿ ಸ್ಪೀಕರ್ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಈಗಾಗಲೇ ತನಿಖೆ ಆರಂಭವಾಗಿದೆ. ಎಲ್ಲ ವಿಚಾರದಲ್ಲೂ ರಾಜಕೀಯ ಮಾಡುವುದು ಕೆಲ ಸದಸ್ಯರಿಗೆ ಅಭ್ಯಾಸವಾಗಿ ಹೋಗಿದೆ ಎಂದು ಜೋಶಿ ಹೇಳಿದರು. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದರು.

ಮತ್ತೊಂದೆಡೆ, ಭದ್ರತಾ ಲೋಪದ ಘಟನೆ ಬಗ್ಗೆ ಸ್ಪೀಕರ್​ ಓಂ ಬಿರ್ಲಾ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಲೋಕಸಭೆ ಸೆಕ್ರೆಟರಿಯೇಟ್‌ನ ಮನವಿಯ ಮೇರೆಗೆ ಗೃಹ ಸಚಿವಾಲಯವು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್ ನೇತೃತ್ವದ ತನಿಖಾ ಸಮಿತಿಯನ್ನು ರಚನೆ ಮಾಡಿದೆ.

ಇದನ್ನೂ ಓದಿ:ಭದ್ರತಾ ಲೋಪ ಪ್ರಕರಣ; ಪ್ರತಿಪಕ್ಷಗಳಿಂದ ಕೋಲಾಹಲ, ಸಂಸತ್​ ಭದ್ರತಾ ತಂಡದ 8 ಸಿಬ್ಬಂದಿ ಅಮಾನತು

Last Updated : Dec 14, 2023, 4:30 PM IST

ABOUT THE AUTHOR

...view details