ನಾರಾಯಣಪೇಟೆ, ತೆಲಂಗಾಣ: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಸಾವನ್ನಪ್ಪಿದ್ದಾರೆ. ನಾರಾಯಣಪೇಟೆ ಜಿಲ್ಲೆಯ ಮಕ್ತಲ್ ತಾಲೂಕಿನ ಜಕ್ಲಾರೆಯಲ್ಲಿ ಈ ದುರಂತ ಸಂಭವಿಸಿದೆ. ಈ ಅಪಘಾತದಲ್ಲಿ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿವೆ.
ಜಕ್ಲೆರೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಎರಡು ಕಾರುಗಳಲ್ಲಿ ಒಂದು ಕರ್ನಾಟಕಕ್ಕೆ ಮತ್ತು ಒಂದು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಅಪಘಾತದ ವೇಳೆ ಬಿಳಿ ಬಣ್ಣದ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಈ ಕಾರು ಹೈದರಾಬಾದ್‌ನಿಂದ ರಾಯಚೂರು ಕಡೆಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ.
ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರಲ್ಲಿ ಮಹಿಳೆ ಮತ್ತು ಇಬ್ಬರು ವ್ಯಕ್ತಿಗಳು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇವರನ್ನು ಕರ್ನಾಟಕದ ಸೈದಾಪುರ ಮೂಲದವರು ಎಂದು ಗುರುತಿಸಲಾಗಿದೆ. ಕಪ್ಪು ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಅದರಲ್ಲಿ ಪ್ರಯಾಣಿಸುತ್ತಿದ್ದ ಪ್ರಬಿತಾ ಮತ್ತು ಆಕೆಯ 8 ವರ್ಷದ ಮಗಳು ಸಾವನ್ನಪ್ಪಿದ್ದು, ಆಕೆಯ ಪತಿ ದೀಪಕ ಸಮಲ್ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ನೌಕಾಪಡೆಯ ಉದ್ಯೋಗಿ ಎಂದು ಗುರುತಿಸಲಾಗಿದೆ. ಮಕ್ತಲ್ ಸರ್ಕಾರಿ ಆಸ್ಪತ್ರೆಯಲ್ಲಿ ದೀಪಕ್ ಸಮಲ್ ಚಿಕಿತ್ಸೆ ಪಡೆಯುತ್ತಿದ್ದರೆ, ಆದಿವೇಲಪ್ಪ ಅವರನ್ನು ಹೈದರಾಬಾದ್‌ಗೆ ಸ್ಥಳಾಂತರಿಸಲಾಗಿದೆ.
ಇನ್ನು ಈ ಅಪಘಾತ ಕುರಿತು ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯ ಮಕ್ತಲ್ ಬಳಿಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದವು. ಒಂದು ಕಾರು ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿರುವಾಗ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಒಂದು ಕಾರಿನಲ್ಲಿ ನಾಲ್ವರು ಮತ್ತು ಇನ್ನೊಂದು ವಾಹನದಲ್ಲಿ ಮೂವರು ಪ್ರಯಾಣಿಕರಿದ್ದರು. ಏಳು ಮಂದಿಯಲ್ಲಿ ಐವರು ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿವೆ. ಅಪಘಾತದ ಬಳಿಕ ಸ್ಥಳೀಯರು ರಕ್ಷಣೆಗೆ ಮುಂದಾದರು. ಬಳಿಕ ಪೊಲೀಸರಿಗೆ ಮಾಹಿತಿ ರವಾನಿಸಿದರು. ಸುದ್ದಿ ತಿಳಿದಾಕ್ಷಣ ನಾವು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡೆವು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಈ ಅಪಘಾತ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಅಪಘಾತದ ಮಾಹಿತಿ ಕುರಿತು ಇನ್ನಷ್ಟು ಲಭ್ಯವಾಗಬೇಕು.
ಓದಿ:ವಿಜಯಪುರ: ಹಾಡಹಗಲೇ ಯುವಕನಿಗೆ ಚಾಕು ಇರಿದು ಹತ್ಯೆ, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ