ಕರ್ನಾಟಕ

karnataka

ಮಗು ದತ್ತು ಪಡೆಯಲು ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ದೇಶದ ಮೊದಲ ತೃತೀಯಲಿಂಗಿ ಎಸ್​ಐ

By

Published : Jun 23, 2023, 8:28 PM IST

ಮಗು ದತ್ತು ಪಡೆಯಲು ನಿರಾಕರಿಸಿದ್ದನ್ನು ಪ್ರಶ್ನಿಸಿ ತಮಿಳುನಾಡಿನ ತೃತೀಯಲಿಂಗಿ ಪೊಲೀಸ್​ ಸಬ್​ ಇನ್ಸ್‌ಪೆಕ್ಟರ್​ ಪ್ರಿತಿಕಾ ಯಾಶಿನಿ ಮದ್ರಾಸ್​ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಮಗು ದತ್ತು ಪಡೆಯಲು ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ದೇಶದ ಮೊದಲ ತೃತೀಯಲಿಂಗಿ ಎಸ್​ಐ
First transwoman SI moves Madras HC after agency disallows her to adopt child

ಚೆನ್ನೈ (ತಮಿಳುನಾಡು):ದೇಶದಮೊದಲ ತೃತೀಯಲಿಂಗಿ ಪೊಲೀಸ್​ ಸಬ್​ ಇನ್ಸ್‌ಪೆಕ್ಟರ್​ ಕೆ. ಪ್ರಿತಿಕಾ ಯಾಶಿನಿ ಮಗು ದತ್ತು ಸ್ವೀಕಾರಕ್ಕೆ ಅನುಮತಿ ಕೋರಿ ಮದ್ರಾಸ್​ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಮಗುವನ್ನು ದತ್ತು ಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಎಲ್ಲ ಸಾಮಾಜಿಕ ಕಟ್ಟುಪಾಡುಗಳ ವಿರುದ್ಧ ಹೋರಾಡುತ್ತಾ 2016ರಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪ್ರಿತಿಕಾ ಯಾಶಿನಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ನಂತರ ಅವರು ಹೈಕೋರ್ಟ್‌ಗೆ ಹೋಗಿ ಕಾನೂನು ಹೋರಾಟ ಮಾಡಿದ್ದರು. ನ್ಯಾಯಾಲಯದ ಮಧ್ಯಪ್ರವೇಶದಿಂದ ಸಬ್​ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿದ್ದರು. ಪ್ರಸ್ತುತ ಸಹಾಯಕ ವಲಸೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2021ರಲ್ಲಿ ಎಸ್​ಐ ಪ್ರಿತಿಕಾ ಯಾಶಿನಿ ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದರು. ಇದಕ್ಕಾಗಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರವನ್ನು ಸಂಪರ್ಕಿಸಿದ್ದರು. ಅಲ್ಲದೇ, 2021ರ ನವೆಂಬರ್ 12ರಂದು ಪ್ರಾಧಿಕಾರಕ್ಕೆ ಆನ್‌ಲೈನ್ ಅರ್ಜಿಯನ್ನೂ ಸಲ್ಲಿಸಿದರು. ಆದರೆ, 2022ರ ಸೆಪ್ಟೆಂಬರ್ 22ರಂದು ಈ ಅರ್ಜಿಯನ್ನು ಪ್ರಾಧಿಕಾರ ತಿರಸ್ಕರಿಸಿತ್ತು. ತೃತೀಯಲಿಂಗಿ ಆಗಿರುವುದರಿಂದ ಮಗುವನ್ನು ಕಾನೂನುಬದ್ಧವಾಗಿ ದತ್ತು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ತಿಳಿಸಿದೆ.

ಇದೀಗ ಪ್ರಿತಿಕಾ ಯಾಶಿನಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರವು ತನ್ನ ಅರ್ಜಿಯನ್ನು ತಿರಸ್ಕರಿಸಿರುವುದು ತಾರತಮ್ಯ ಮತ್ತು ತೃತೀಯಲಿಂಗಿಯಾದ ತನ್ನ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಮಗು ದತ್ತು ಪಡೆಯುಲು ಅನುಮತಿ ನಿರಾಕರಿಸುವ ಪ್ರಾಧಿಕಾರದ ಆದೇಶವು ಕಾನೂನುಬದ್ಧವಾಗಿಲ್ಲ. ಇದು ಅಸಾಂವಿಧಾನಿಕ ಮತ್ತು ತಾರತಮ್ಯದ ನಡೆ. ಇದು ನಮ್ಮ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಮಗುವನ್ನು ಬೆಳೆಸಲು ಉತ್ತಮ ನೈತಿಕತೆ, ಸಂಸ್ಕೃತಿ, ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯದ ಅಗತ್ಯವಿದೆ. ದತ್ತು ತೆಗೆದುಕೊಳ್ಳುವುದನ್ನು ನಿರ್ಧರಿಸಲು ಪೋಷಕರ ಲೈಂಗಿಕ ದೃಷ್ಟಿಕೋನವು ಒಂದು ಅಂಶವಾಗಿರಬಾರದು ಎಂದು ಎಸ್​ಐ ಪ್ರಿತಿಕಾ ಯಾಶಿನಿ ಪ್ರತಿಪಾದಿಸಿದ್ದಾರೆ. ಇವರ ಅರ್ಜಿಯನ್ನು ಹೈಕೋರ್ಟ್​ ಪುರಸ್ಕರಿಸಿದ್ದು, ಅದರ ವಿಚಾರಣೆಯನ್ನೂ ಕೈಗೆತ್ತಿಕೊಂಡಿದೆ.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ದಂಡಪಾಣಿ, ಕಾನೂನುಗಳು ತೃತೀಯಲಿಂಗಿಗಳಿಗೆ ಸಮಾನ ಹಕ್ಕುಗಳನ್ನು ನೀಡುತ್ತಿದೆ. ಈಗಿರುವಾಗ ಪ್ರಿತಿಕಾ ಯಾಶಿನಿ ಅವರ ಅರ್ಜಿಯನ್ನು ಏಕೆ ತಿರಸ್ಕರಿಸಲಾಯಿತು ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಜೂನ್ 30ರೊಳಗೆ ತನ್ನ ಪ್ರತಿಕ್ರಿಯೆ ಸಲ್ಲಿಸುವಂತೆ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ.

ಇದನ್ನೂ ಓದಿ:ಪಿಹೆಚ್​​ಡಿ ಮಾಡುತ್ತಿದ್ದಾರೆ 'ರಾಜ್ಯದ ಮೊದಲ ತೃತೀಯ ಲಿಂಗಿ': ತನ್ನವರ ಬಗ್ಗೆಯೇ ಸಂಶೋಧನೆ!

ABOUT THE AUTHOR

...view details