ಕರ್ನಾಟಕ

karnataka

ಅಕ್ರಮ ಹಣ ವರ್ಗಾವಣೆ ಪ್ರಕರಣ: ತಮಿಳುನಾಡಿನ ಸಚಿವರ ಮನೆ ಮೇಲೆ ED ದಾಳಿ

By

Published : Jul 17, 2023, 11:36 AM IST

Updated : Jul 17, 2023, 12:44 PM IST

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಮತ್ತು ಮಗ ಸಂಸದ ಗೌತಮ್​ ಸಿಗಮಣಿ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ed-raids-tn-minister-his-mp-son-in-money-laundering-case
ಅಕ್ರಮ ಹಣ ವರ್ಗಾವಣೆ ಪ್ರಕರಣ : ತಮಿಳುನಾಡಿನ ಸಚಿವರ ಮನೆ ಮೇಲೆ ಇಡಿ ದಾಳಿ

ಚೆನ್ನೈ (ತಮಿಳುನಾಡು) : ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಡಿಎಂಕೆ ನಾಯಕ ಹಾಗೂ ತಮಿಳುನಾಡು ಉನ್ನತ ಶಿಕ್ಷಣ ಸಚಿವರ ಕಚೇರಿ ಮತ್ತು ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಬೆಳಿಗ್ಗೆ 7.30ಕ್ಕೆ ಚೆನ್ನೈನ ಸೈದಾ ಪೇಟ್​ನಲ್ಲಿರುವ ಸಚಿವರ ನಿವಾಸಕ್ಕೆ ತೆರಳಿದ ಅಧಿಕಾರಿಗಳು ದಾಖಲೆಗಳ ಶೋಧ ಕಾರ್ಯ ನಡೆಸಿದ್ದಾರೆ. ಪೊನ್ಮುಡಿ ಅವರ ಪುತ್ರ ಕಲ್ಲಕುರಿಚಿ ಕ್ಷೇತ್ರದ ಸಂಸದ ಗೌತಮ್ ಸಿಗಮಣಿ ಅವರ ಮನೆ ಮೇಲೂ ದಾಳಿ ನಡೆಸಲಾಗಿದೆ. ವಿಲ್ಲುಪುರಂನಲ್ಲಿರುವ ಕಚೇರಿ ಮತ್ತು ಮನೆಯಲ್ಲೂ ಶೋಧ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.

ಕೆ. ಪೊನ್ಮುಡಿ 2007ರಿಂದ 2011ರ ಅವಧಿಯಲ್ಲಿ ರಾಜ್ಯ ಗಣಿಗಾರಿಕೆ ಸಚಿವರಾಗಿದ್ದಾಗ ಅಕ್ರಮ ಎಸಗಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಗಣಿಗಾರಿಕೆ ಪರವಾನಗಿ ನೀಡುವ ಸಂದರ್ಭದಲ್ಲಿ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 28 ಕೋಟಿ ರೂ ನಷ್ಟ ಉಂಟಾಗಿತ್ತು. ಈ ಸಂಬಂಧ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಹಿರಿಯ ಡಿಎಂಕೆ ನಾಯಕ ಮತ್ತು ಸಾರಿಗೆ ಸಚಿವ ಸೆಂಥಿಲ್ ಬಾಲಾಜಿ ಮೇಲೂ ಇಡಿ ದಾಳಿ ನಡೆಸಿತ್ತು.

ಪ್ರಕರಣದ ಹಿನ್ನೆಲೆ :2007ರಲ್ಲಿ ಡಿಎಂಕೆ ಆಡಳಿತ ಅವಧಿಯಲ್ಲಿ ಕೆ. ಪೊನ್ಮುಡಿ ಅವರು ಗಣಿ ಸಚಿವರಾಗಿದ್ದರು. ಈ ವೇಳೆ ವಿಲ್ಲುಪುರಂನಲ್ಲಿರುವ ಗಣಿಗಾರಿಕೆ ವೇಳೆ ಷರತ್ತುಗಳನ್ನು ಗಾಳಿಗೆ ತೂರಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ತಮ್ಮ ಕುಟುಂಬಸ್ಥರ ಗಣಿಗಾರಿಕೆಗೆ ಸಹಕರಿಸಿದ್ದು ಮಾತ್ರವಲ್ಲದೇ ಅಕ್ರಮವಾಗಿ ಹೆಚ್ಚುವರಿ ಗಣಿಗಾರಿಕೆ ನಡೆಸಿದ್ದಾರೆ ಎಂಬ ದೂರು ಕೇಳಿ ಬಂದಿತ್ತು. ಇದರಿಂದ ರಾಜ್ಯ ಬೊಕ್ಕಸಕ್ಕೆ 28 ಕೋಟಿ ರೂಪಾಯಿ ನಷ್ಟ ಉಂಟಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿಲ್ಲುಪುರಂ ಅಪರಾಧ ಪತ್ತೆ ದಳ ಪೊಲೀಸರು ಸಚಿವ ಕೆ. ಪೊನ್ಮುಡಿ ಮತ್ತು ಮಗ ಸಂಸದ ಗೌತಮ್​, ಸೋದರ ಸಂಬಂಧಿ ಜಯಚಂದ್ರ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

2012ರಲ್ಲಿ ಪೊಲೀಸರು ಪೊನ್ಮುಡಿ ಸೇರಿದಂತೆ ಮೂವರನ್ನು ಬಂಧಿಸಿದ್ದರು. ಪ್ರಕರಣ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಪೊನ್ಮುಡಿ ತಡೆ ಕೋರಿ ಮದ್ರಾಸ್​​ ಹೈಕೋರ್ಟ್​ ಮೊರೆ ಹೋಗಿದ್ದರು. ಮದ್ರಾಸ್​ ಹೈಕೋರ್ಟ್​ ಪ್ರಕರಣದ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.

ಬೆದರಿಕೆ ರಾಜಕೀಯ- ಸಿಎಂ ಸ್ಟಾಲಿನ್​ :ಇಡಿ ದಾಳಿ ಕುರಿತು ವಾಗ್ದಾಳಿ ನಡೆಸಿರುವ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​, ಕೇಂದ್ರ ಸರ್ಕಾರವು ಇಡಿ ದಾಳಿ ಮೂಲಕ ಬೆದರಿಕೆ ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಸ್ಟಾಲಿನ್​ ಅವರು ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಲು ತೆರಳುವವರಿದ್ದರು. ಈ ಮಧ್ಯೆ ಇಡಿ ದಾಳಿ ನಡೆದಿರುವುದು ಬೆದರಿಕೆ ರಾಜಕೀಯ ಎಂದು ಟೀಕಿಸಲಾಗಿದೆ.

ಡಿಎಂಕೆ ವಕ್ತಾರ ಎ.ಸರವಣನ್​ ಮಾತನಾಡಿ, ಇಡಿ ದಾಳಿ ರಾಜಕೀಯ ಪ್ರತೀಕಾರ. ಡಿಎಂಕೆಯನ್ನು ಪರೀಕ್ಷಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಗುಟ್ಕಾ ಹಗರಣದಂತಹ ಪ್ರಕರಣಗಳಲ್ಲಿ ಎಐಎಡಿಎಂಕೆ ನಾಯಕರ ವಿರುದ್ಧ ಕೇಂದ್ರ ತನಿಖಾ ದಳಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇದೇ ವೇಳೆ ಆರೋಪಿಸಿದ್ದಾರೆ.

ಇದನ್ನೂ ಓದಿ :ಶಾಸಕ ಕೃಷ್ಣ ಕಲ್ಯಾಣಿ ನಿವಾಸ, ಕಚೇರಿಗಳ ಮೇಲೆ ಐಟಿ, ಇಡಿ ದಾಳಿ..

Last Updated : Jul 17, 2023, 12:44 PM IST

ABOUT THE AUTHOR

...view details