ಕರ್ನಾಟಕ

karnataka

ಅಫ್ಘಾನಿಸ್ತಾನದಲ್ಲಿ ಅರ್ಧಗಂಟೆಯಲ್ಲಿ 2 ಬಾರಿ ಭೂಕಂಪನ; ಮಣಿಪುರ, ಬಂಗಾಳದಲ್ಲೂ ನಡುಗಿದ ಭೂಮಿ

By ETV Bharat Karnataka Team

Published : Jan 3, 2024, 7:24 AM IST

ಅಫ್ಘಾನಿಸ್ತಾನದಲ್ಲಿ ಅರ್ಧಗಂಟೆಯಲ್ಲಿ 2 ಬಾರಿ ಭೂಮಿ ಕಂಪಿಸಿದ್ದರೆ, ಭಾರತದ ಮಣಿಪುರ, ಪಶ್ಚಿಮಬಂಗಾಳದಲ್ಲೂ ಭೂಮಿ ಅಲುಗಾಡಿದೆ.

ಭೂಕಂಪನ
ಭೂಕಂಪನ

ನವದೆಹಲಿ/ ಕಾಬೂಲ್​ :ಜಪಾನ್​ನಲ್ಲಿ ಪ್ರಬಲ ಭೂಕಂಪನಕ್ಕೆ ಸುನಾಮಿ ಉಂಟಾಗಿ 50 ಕ್ಕೂ ಅಧಿಕ ಜನರು ಸಾವಿಗೀಡಾದ ಘಟನೆ ಬೆನ್ನಲ್ಲೇ, ಭಾರತದ ಕೆಲ ಭಾಗ ಮತ್ತು ಅಫ್ಘಾನಿಸ್ತಾನದಲ್ಲಿ ಕೂಡ ಭೂಮಿ ನಡುಗಿದೆ. ಕಡಿಮೆ ತೀವ್ರತೆಯ ಕಂಪನಗಳು ಕಂಡುಬಂದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಮಣಿಪುರ, ಪಶ್ಚಿಮ ಬಂಗಾಳದಲ್ಲಿ ಕಂಪನ:ಮಂಗಳವಾರ ರಾತ್ರಿ 10.35 ನಿಮಿಷಕ್ಕೆ ಪಶ್ಚಿಮ ಬಂಗಾಳದ ಅಲಿಪುರ್ದೂರ್ ಜಿಲ್ಲೆಯಲ್ಲಿ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್​ಎಸ್​ಸಿ) ತಿಳಿಸಿದೆ. ಭೂಕಂಪವು ರಾತ್ರಿ ವೇಳೆ ಆಗಿದ್ದು, 5 ಕಿಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿವೆ. ಯಾವುದೇ ದೊಡ್ಡ ಪ್ರಮಾಣದಲ್ಲಿ ಸಂಭವಿಸಿಲ್ಲ. ಭೂಮಿ ನಡುಗಿದಾಗ ಜನರು ಮನೆಯಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ.

ಇತ್ತ ಮಣಿಪುರದಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಭೂಕಂಪವು ಉಖ್ರುಲ್‌ ಪ್ರದೇಶದಲ್ಲಿ ಮಧ್ಯರಾತ್ರಿ 12.01 ನಿಮಿಷಕ್ಕೆ ಸಂಭವಿಸಿದೆ. ಜನರು ನಿದ್ರೆಯಲ್ಲಿದ್ದಾಗ ದಿಢೀರ್​ ಭೂಮಿ ಅಲುಗಾಡಿದೆ. ಇದರಿಂದ ಗಾಬರಿಯಾದ ಜನರು ಕೆಲಕಾಲ ಆತಂಕಕ್ಕೀಡಾಗಿದ್ದರು. ಮನೆಯಲ್ಲಿ ಪಾತ್ರೆಗಳು ನೆಲಕ್ಕುರುಳಿ ಬಿದ್ದಿವೆ. ಹಠಾತ್​ ನಡುಕದಿಂದ ಜನರು ನಿದ್ದೆಗೆಡುವಂತಾಗಿದೆ. ಉಕ್ರುಲ್​ ಪ್ರದೇಶದ ಸುತ್ತಲ್ಲೂ ಬುಧವಾರ ಮಧ್ಯರಾತ್ರಿ 26 ಕಿ.ಮೀ ಆಳದಲ್ಲಿ ಕಂಪನದ ಅಲೆಗಳು ಕಂಡುಬಂದಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಅರ್ಧಗಂಟೆಯಲ್ಲಿ ಎರಡು ಭೂಕಂಪ:ಅಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ ಬುಧವಾರ ಅರ್ಧಗಂಟೆ ಅಂತರದಲ್ಲಿ ಎರಡು ಭೂಕಂಪಗಳು ಸಂಭವಿಸಿವೆ. ಮೊದಲು ನಗರದಿಂದ 126 ದೂರದ ಪ್ರದೇಶದಲ್ಲಿ 4.4 ತೀವ್ರತೆಯಲ್ಲಿ ಭೂಮಿ ನಡುಗಿದೆ. ಭೂಮಿಯ 80 ಕಿಮೀ ಆಳದಲ್ಲಿ ಅದರ ಕಂಪನಗಳು ಸೃಷ್ಟಿಯಾಗಿವೆ. ಇದು ಮಧ್ಯರಾತ್ರಿ 12.28 ರ ಸುಮಾರಿನಲ್ಲಿ ಜರುಗಿದೆ. ಇದಾದ ಅರ್ಧಗಂಟೆಯ ಅಂತರದಲ್ಲಿ ಫೈಜಾಬಾದ್​ನ 100 ದೂರ ಪ್ರದೇಶದಲ್ಲಿ 12.55 ನಿಮಿಷಕ್ಕೆ ಮತ್ತೊಂದು ಕಂಪನ ಉಂಟಾಗಿದೆ.

4.8 ತೀವ್ರತೆ ರಿಕ್ಟರ್​ ಮಾಪಕದಲ್ಲಿ ದಾಖಲಾಗಿದೆ. ಈ ಬಾರಿ ಇದು 100 ಕಿಮೀ ಆಳದಲ್ಲಿ ಕಂಡುಬಂದಿದೆ. ಕಡಿಮೆ ಸಮಯದಲ್ಲಿ ಎರಡು ಲಘು ಕಂಪನಗಳು ಉಂಟಾಗಿದ್ದು, ಜನರನ್ನು ತೀವ್ರ ಆತಂಕಕ್ಕೆ ತಳ್ಳಿದ್ದವು. ಸದ್ಯಕ್ಕೆ ಯಾವುದೇ ಹಾನಿಯ ಬಗ್ಗೆ ವರದಿಗಳು ಬಂದಿಲ್ಲ ಅಫ್ಘಾನಿಸ್ತಾನದ ಭೂಕಂಪನಶಾಸ್ತ್ರ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಇದನ್ನೂ ಓದಿ:ಜಪಾನ್​ ಭೂಕಂಪ: ಸಾವಿನ ಸಂಖ್ಯೆ 24ಕ್ಕೆ ಏರಿಕೆ, ಸುನಾಮಿ ಆತಂಕ ದೂರ

ABOUT THE AUTHOR

...view details