ಕರ್ನಾಟಕ

karnataka

ಆಂಧ್ರದಲ್ಲಿ ಅನಿಯಂತ್ರಿತ ಪವರ್​ ಕಟ್​: ಮೊಬೈಲ್​ ಟಾರ್ಚ್​ ಬೆಳಕಿನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು

By ETV Bharat Karnataka Team

Published : Sep 3, 2023, 6:41 PM IST

ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್​ ಕಡಿತದಿಂದ ಮೊಬೈಲ್ ಫೋನ್​ ಟಾರ್ಚ್​ ಬೆಳಕಿನಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

Doctors treat patients under mobile torch at Andhra hospital
ಆಂಧ್ರದಲ್ಲಿ ಅನಿಯಂತ್ರಿತ ಪವರ್​ ಕಟ್​: ಮೊಬೈಲ್​ ಟಾರ್ಚ್​ ಬೆಳಕಿನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು

ಅಮರಾವತಿ (ಆಂಧ್ರ ಪ್ರದೇಶ):ಆಂಧ್ರ ಪ್ರದೇಶದಲ್ಲಿ ಅನಿಯಂತ್ರಿತ ವಿದ್ಯುತ್​ ಕಡಿತ ಮಾಡಲಾಗುತ್ತಿದೆ. ಇದರ ಪರಿಣಾಮ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳು ಮೇಲೂ ಬೀರುತ್ತಿದೆ. ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮೊಬೈಲ್ ಫೋನ್​ ಟಾರ್ಚ್​ ಬೆಳಕಿನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ರಾಜ್ಯದಲ್ಲಿ ವಿದ್ಯುತ್ ವ್ಯತ್ಯಯವನ್ನು ಎತ್ತಿ ತೋರಿಸಿದೆ.

ಶನಿವಾರ ರಸ್ತೆ ಅಪಘಾತದಲ್ಲಿ ಗಾಯಗೊಂಡ ಎಂಟು ಜನರನ್ನು ಕುರುಪಂನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿತ್ತು. ಆದರೆ, ಈ ವೇಳೆ ವಿದ್ಯುತ್ ಕಡಿತಗೊಂಡಿದ್ದರಿಂದ ವೈದ್ಯಕೀಯ ಸಿಬ್ಬಂದಿ ಮೊಬೈಲ್ ಫೋನ್‌ಗಳ ಟಾರ್ಚ್​ ಬೆಳಕಿನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರವು ಇತರ ಅನೇಕ ಸರ್ಕಾರಿ ಆರೋಗ್ಯ ಸೌಲಭ್ಯಗಳಂತೆ ಜನರೇಟರ್​ ಕೊರತೆಯನ್ನೂ ಎದುರಿಸುತ್ತಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಈ ಘಟನೆಯ ಬೆಳಕಿಗೆ ಬಂದ ಬೆನ್ನಲ್ಲೇ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕುರುಪಂನಲ್ಲಿ ಬೆಳಕಿಗೆ ಬಂದು ದೃಶ್ಯಗಳಿಂದ ಗಾಬರಿಯನ್ನು ಹುಟ್ಟಿಸಿವೆ. ಅಲ್ಲಿನ ವೈದ್ಯರು ವಿದ್ಯುತ್ ಕಡಿತದ ಸಮಯದಲ್ಲಿ ಟಾರ್ಚ್​ ಬೆಳಕಿನಲ್ಲಿ ರೋಗಿಗೆ ಚಿಕಿತ್ಸೆ ನೀಡುವಂತಾಗಿದೆ. ಆಂಧ್ರಪ್ರದೇಶದಲ್ಲಿ ಮನೆಗಳು, ಕೃಷಿ ಮತ್ತು ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿದ್ಯುತ್ ಕಡಿತವು ಅಪಾರ ಸಂಕಷ್ಟ ಉಂಟುಮಾಡುತ್ತಿದೆ ಎಂದು ಚಂದ್ರಬಾಬು ನಾಯ್ಡು ಟ್ವೀಟ್​ ಮಾಡಿದ್ದಾರೆ.

ಮುಂದುವರೆದು, ನಿರಂತರ ವಿದ್ಯುತ್ ಅಭಾವದ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಮುಖ್ಯಮಂತ್ರಿ ವೈಎಸ್​ ಜಗನ್​ ಸ್ಥಿರ ಮತ್ತು ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಒದಗಿಸಲು ವಿಫಲರಾಗಿದ್ದಾರೆ. ಒಂದು ಕಾಲದಲ್ಲಿ ಹೆಚ್ಚುವರಿ ವಿದ್ಯುತ್​ ಅನುಭವಿಸುತ್ತಿದ್ದ ರಾಜ್ಯವು ಈಗ ಕತ್ತಲೆಯಲ್ಲಿ ಮುಳುಗಿದೆ. ಆಗಾಗ್ಗೆ ರಾಜ್ಯ ಕತ್ತಲೆಯಲ್ಲಿ ಮುಳುಗಿರುವುದನ್ನು ನೋಡುವುದೇ ದುಃಖಕರ'' ಎಂದು ಜಗನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂತಹದ್ದೇ ಘಟನೆ ಇದೇ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಸಾಲೂರು ಪಟ್ಟಣದ ಆಸ್ಪತ್ರೆಯಲ್ಲೂ ಕಂಡುಬಂದಿದೆ. ಶನಿವಾರ ಗುಡುಗು ಸಹಿತ ಬಿರುಗಾಳಿ ಸಹಿತ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಆಸ್ಪತ್ರೆ ಕತ್ತಲಲ್ಲಿ ಮುಳುಗಿತ್ತು. ಕತ್ತಲೆಯಿಂದಾಗಿ ರೋಗಿಗಳು ತೀವ್ರ ತೊಂದರೆ ಅನುಭವಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ತಮ್ಮ ಮೊಬೈಲ್ ಫೋನ್‌ಗಳ ಟಾರ್ಚ್​ಗಳ ಬೆಳಕಿನಲ್ಲಿ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಿದ್ದಾರೆ.

ರಾಜ್ಯದ ಹಲವೆಡೆ ಕಳೆದ ಕೆಲವು ದಿನಗಳಿಂದ ಅನಿಯಂತ್ರಿತ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ದೀರ್ಘಾವಧಿ ಒಣಹವೆಯಿಂದಾಗಿ ವಿದ್ಯುತ್ ಬೇಡಿಕೆ ಹೆಚ್ಚಿರುವುದೇ ಇದಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಎರಡು ದಿನಗಳ ಹಿಂದೆ ನಡೆದ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ವಿದ್ಯುತ್ ಬೇಡಿಕೆಯು ಶೇ.18ರಷ್ಟು ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದರು.

ಆಂಧ್ರದಲ್ಲಿ ಬೇಸಿಗೆಯಲ್ಲೂ ವಿದ್ಯುತ್ ಸಮಸ್ಯೆ ತಲೆದೋರಿತ್ತು. ಬೇಡಿಕೆ ಮತ್ತು ಪೂರೈಕೆಯ ನಡುವಿನ ದೊಡ್ಡ ಅಂತರದಿಂದಾಗಿ ಕೃಷಿ ಮತ್ತು ಉದ್ಯಮದವರೆಗೆ ಪ್ರತಿಯೊಂದು ಕ್ಷೇತ್ರವೂ ವಿದ್ಯುತ್ ಕಡಿತದ ಸಮಸ್ಯೆ ಎದುರಿಸಿತ್ತು. ಈಗ ಮುಂಗಾರು ವಿಳಂಬ ಮತ್ತು ಜುಲೈ ಹಾಗೂ ಆಗಸ್ಟ್‌ನಲ್ಲಿ ದೀರ್ಘವಾದ ಒಣಹವೆ ವಾತಾವರಣದಿಂದಾಗಿ ಪರಿಸ್ಥಿತಿ ಸುಧಾರಿಸಿಲ್ಲ. (ಐಎಎನ್​ಎಸ್​)

ಇದನ್ನೂ ಓದಿ:YSRCP regime.. ಆಂಧ್ರಕ್ಕೆ ಬಂದ ಹೊಸ ಕೈಗಾರಿಕೆಗಳಿಂತ ಬಿಟ್ಟು ಹೋದ ಕಂಪನಿಗಳೇ ಹೆಚ್ಚು..

ABOUT THE AUTHOR

...view details