ಚೆನ್ನೈ (ತಮಿಳುನಾಡು):ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ( ಇಡಿ ) ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ವಶಕ್ಕೆ ಪಡೆದಿದ್ದಾರೆ. ತನಿಖಾ ಸಂಸ್ಥೆ ಮಂಗಳವಾರ ಡಿಎಂಕೆ ನಾಯಕನ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಅವರನ್ನು ವಿಚಾರಣೆಗೆ ಕರೆದೊಯ್ದಿದೆ.
ಇದರ ಬೆನ್ನಲ್ಲೇ ಇಡಿ ಬುಧವಾರ ಬೆಳ್ಳಂಬೆಳಗ್ಗೆ ಬಿಗಿ ಭದ್ರತೆಯ ನಡುವೆ ಬಾಲಾಜಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಚೆನ್ನೈನ ಒಮಂದೂರಾರ್ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದೆ. ಡಿಎಂಕೆ ನಾಯಕನನ್ನು ಆಸ್ಪತ್ರೆಗೆ ಕರೆತರುತ್ತಿದ್ದಂತೆಯೇ ಆಸ್ಪತ್ರೆಯ ಹೊರಗೆ ಭಾರಿ ಹೈಡ್ರಾಮ ಕೂಡಾ ನಡೆದಿದೆ. ಇಡಿ ಕ್ರಮವನ್ನು ವಿರೋಧಿಸಿ ಅವರ ಬೆಂಬಲಿಗರು ಅಲ್ಲಿ ಜಮಾಯಿಸಿದರು. ಆಗ ಕಾರಿನಲ್ಲಿ ಮಲಗಿದ್ದ ಸೆಂಥಿಲ್ ಬಾಲಾಜಿ ಎದೆನೋವು ಎಂದು ಅಳುತ್ತಿರುವುದನ್ನು ಕಾಣಬಹುದು.
"ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿದೆ ಮತ್ತು ಬಾಲಾಜಿ ಬಂಧನವನ್ನು ಇಡಿ ಅಧಿಕೃತವಾಗಿ ಖಚಿತಪಡಿಸಿಲ್ಲ ಎಂದು ಡಿಎಂಕೆ ಸಂಸದ ಮತ್ತು ವಕೀಲ ಎನ್‌ಆರ್ ಎಲಾಂಗೋ ಹೇಳಿದ್ದಾರೆ. ನಾನು ಅವರನ್ನು (ಸೆಂಥಿಲ್ ಬಾಲಾಜಿ) ಐಸಿಯುಗೆ ಸ್ಥಳಾಂತರಿಸಿದಾಗ ನೋಡಿದೆ. ವೈದ್ಯರು ಅವರ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಹೇಳಿದಾಗ ವೈದ್ಯರು ಗಾಯವಾಗಿರುವ ಬಗ್ಗೆ ಪರೀಕ್ಷಿಸಬೇಕಾಗುತ್ತದೆ. ವರದಿಯನ್ನು ನೋಡಿದ ನಂತರ ಎಲ್ಲವೂ ತಿಳಿಯುತ್ತದೆ" ಎಲಾಂಗೋ ಹೇಳಿದರು.
ಸೆಂಥಿಲ್ ಬಾಲಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. "ಇದನ್ನು ನಾವು ಕಾನೂನಾತ್ಮಕವಾಗಿ ಎದುರಿಸುತ್ತೇವೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬೆದರಿಕೆ ರಾಜಕೀಯಕ್ಕೆ ನಾವು ಹೆದರುವುದಿಲ್ಲ" ಎಂದು ಅವರು ಹೇಳಿದರು. ಇಡಿ ಅಧಿಕಾರಿಗಳು ಕಸ್ಟಡಿಗೆ ತೆಗೆದುಕೊಳ್ಳುವಾಗ ಬಾಲಾಜಿ ಎದೆನೋವು ಎಂದು ಹೇಳಿದರು. ಆದರೆ, ಇಡಿ ಆಸ್ಪತ್ರೆಗೆ ಕರೆದೊಯ್ದಾಗ ಸೆಂಥಿಲ್ ಬಾಲಾಜಿಗೆ ಪ್ರಜ್ಞೆ ಇರಲಿಲ್ಲ ಎಂದು ಡಿಎಂಕೆ ಮುಖಂಡರು ಆರೋಪಿಸಿದ್ದಾರೆ.
ಸೇಡಿನ ಕೃತ್ಯ-ಸಚಿವ ಪೊನ್ಮುಡಿ:ಸೆಂಥಿಲ್ ಬಾಲಾಜಿ ಇಡಿ ಕಸ್ಟಡಿ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಟಿಎನ್ ಸಚಿವ ಪೊನ್ಮುಡಿ ಇದು ಸೇಡಿನ ಕೃತ್ಯ ಎಂದು ಕಿಡಿಕಾರಿದ್ದಾರೆ. ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳ ವಿರುದ್ಧ ಕೇಂದ್ರ ತಪ್ಪು ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಜಾರಿ ನಿರ್ದೇಶನಾಲಯದಿಂದ ಸರ್ಕಾರಿ ಆಸ್ಪತ್ರೆಗೆ ಕರೆತರಲಾದ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಭೇಟಿ ಮಾಡಲು ಸಚಿವ ಪೊನ್ಮುಡಿ ಮತ್ತು ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರು ಓಮಂದೂರಾರ್ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇದು ಸೇಡಿನ ಕೃತ್ಯ. ಪಶ್ಚಿಮ ಬಂಗಾಳ, ದೆಹಲಿ ಸೇರಿದಂತೆ ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳ ವಿರುದ್ಧ ಕೇಂದ್ರ ಸರ್ಕಾರ ಅನೇಕ ತಪ್ಪುಗಳನ್ನು ಮಾಡುತ್ತಿದೆ ಎಂದು ದೂರಿದರು.
ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಸ್ಟಾಲಿನ್: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಓಮಂದೂರರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದ ಬಳಿಕ ಬಾಲಾಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅತ್ತ ಆಸ್ಪತ್ರೆಯ ಹೊರಗೆ ಹಾಜರಿದ್ದ ಡಿಎಂಕೆ ಕಾರ್ಯಕರ್ತರು ರಾಜ್ಯಪಾಲ ಆರ್ ಎನ್ ರವಿ ವಿರುದ್ಧ ಘೋಷಣೆ ಕೂಗಿದರು