ಕರ್ನಾಟಕ

karnataka

ಮಾನದಂಡಗಳನ್ನು ಉಲ್ಲಂಘಿಸಿದ ಏರ್ ಇಂಡಿಯಾಗೆ ₹10 ಲಕ್ಷ ದಂಡ ವಿಧಿಸಿದ ಡಿಜಿಸಿಎ

By ETV Bharat Karnataka Team

Published : Nov 22, 2023, 8:20 PM IST

ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಾನದಂಡಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಕಾರಣಕ್ಕೆ ಏರ್ ಇಂಡಿಯಾಗೆ ಎರಡನೇ ಬಾರಿಗೆ 10 ಲಕ್ಷ ರೂಗಳನ್ನ ದಂಡ ವಿಧಿಸಲಾಗಿದೆ.

Etv Bharatdcga-imposes-air-india-with-rs-10-lakh-penalty-for-flouting-compensation-rules
ಮಾನದಂಡಗಳನ್ನು ಉಲ್ಲಂಘಿಸಿದ ಏರ್ ಇಂಡಿಯಾಗೆ ₹10 ಲಕ್ಷ ದಂಡ ವಿಧಿಸಿದ ಡಿಜಿಸಿಎ

ನವದೆಹಲಿ: ಮಾನದಂಡಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎನ್ನುವ ಕಾರಣಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾಗೆ 10 ಲಕ್ಷ ದಂಡ ವಿಧಿಸಿದೆ. ಇದರಿಂದ ಕಳೆದ 18 ತಿಂಗಳಲ್ಲಿ ಏರ್‌ ಇಂಡಿಯಾಗೆ ಡಿಜಿಸಿಎ ಎರಡನೇ ಬಾರಿಗೆ 10 ಲಕ್ಷ ರೂ. ದಂಡ ವಿಧಿಸಿದಂತಾಗಿದೆ.

ದೆಹಲಿ, ಕೊಚ್ಚಿ, ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಕಳೆದ ಮೇ ನಿಂದ ಸೆಪ್ಟೆಂಬರ್‌ವರೆಗೆ ತಪಾಸಣೆ ನಡೆಸಲಾಗಿದ್ದು, ಪ್ರಯಾಣಿಕರಿಗೆ ನೀಡುವ ಸೌಲಭ್ಯ ಮತ್ತು ಪರಿಹಾರಗಳನ್ನು ಡಿಜಿಸಿಎ ಮಾನದಂಡಗಳಂತೆ ನೀಡುತ್ತಿಲ್ಲ. ಈ ಕಾರಣದಿಂದಾಗಿ ಪ್ರತಿಕ್ರಿಯೆ ಕೋರಿ ನವೆಂಬರ್ 3 ರಂದು ಏರ್ ಇಂಡಿಯಾಕ್ಕೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿತ್ತು ಎಂದು ಡಿಜಿಸಿಎ ತಿಳಿಸಿದೆ.

ಏರ್ ಇಂಡಿಯಾ ಸರಿಯಾಗಿ ಮಾನದಂಡಗಳನ್ನು ಪಾಲಿಸಿಲ್ಲ, ವಿಳಂಬವಾದ ವಿಮಾನಗಳಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಹೋಟೆಲ್ ವ್ಯವಸ್ಥೆ ಮಾಡದಿರುವುದು, ಸಿಬ್ಬಂದಿಗೆ ತರಬೇತಿ ನೀಡದಿರುವುದು ಮತ್ತು ಯೋಗ್ಯವಲ್ಲದ ಆಸನಗಳಲ್ಲಿ ಪ್ರಯಾಣಿಸಿರುವುದಕ್ಕಾಗಿ ಅಂತಾರಾಷ್ಟ್ರೀಯ ಬಿಸಿನೆಸ್ ಕ್ಲಾಸ್ ಪ್ರಯಾಣಿಕರಿಗೆ ಪರಿಹಾರವನ್ನು ಪಾವತಿಸದಿರುವುದು ತಪಾಸಣೆಯಲ್ಲಿ ಕಂಡು ಬಂದಿದೆ ಎಂದು ಡಿಜಿಸಿಎ ಹೇಳಿದೆ.

ಇದನ್ನೂ ಓದಿ:ಎಲ್​ಎಂವಿ ಪರವಾನಗಿ ಹೊಂದಿರುವವರು ಲಘು ಸಾರಿಗೆ ವಾಹನ ಓಡಿಸಬಹುದೇ?; ಕೇಂದ್ರಕ್ಕೆ ಸ್ಪಷ್ಟನೆ ಕೇಳಿದ ಸುಪ್ರೀಂಕೋರ್ಟ್

ಈ ಹಿಂದೆ ಏರ್​ ಏಷ್ಯಾ ಸಂಸ್ಥೆಗೆ ಬಿದಿತ್ತು 20 ಲಕ್ಷ ದಂಡ:ಕೆಲವು ತಿಂಗಳುಗಳ ಹಿಂದೆ, ಪೈಲಟ್‌ಗಳ ತರಬೇತಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಟಾಟಾ ಗ್ರೂಪ್ ಒಡೆತನದ ಏರ್​ ಏಷ್ಯಾ ಇಂಡಿಯಾ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) 20 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಜೊತೆಗೆ ಮೂರು ತಿಂಗಳ ಅವಧಿಗೆ ಏರ್‌ಲೈನ್‌ನ ತರಬೇತಿ ಮುಖ್ಯಸ್ಥರನ್ನು ವಜಾ ಮಾಡುವಂತೆ ಕೂಡ ಆದೇಶಿಸಿತ್ತು.

ಪೈಲಟ್ ಪ್ರಾವೀಣ್ಯತೆಯ ಪರಿಶೀಲನೆಗಳು ಹಾಗೂ ಸಲಕರಣೆಗಳ ರೇಟಿಂಗ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಏರ್ ​ಏಷ್ಯಾ ಸಂಸ್ಥೆಯು ವಿಮಾನಯಾನ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಡಿಜಿಸಿಎ ಈ ಕ್ರಮ ಕೈಗೊಂಡಿತ್ತು. ಅಲ್ಲದೇ, ಜೊತೆಗೆ ಎಂಟು ನಿಯೋಜಿತ ಪರೀಕ್ಷಕರಿಗೆ (ಡಿಇ) ತಲಾ ಮೂರು ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿತ್ತು. ಈ ಮೂಲಕ ಕಳೆದ ಕೇವಲ ಒಂದು ತಿಂಗಳ ಅವಧಿಯಲ್ಲಿ ಟಾಟಾ ಗ್ರೂಪ್ ಏರ್‌ಲೈನ್​ ವಿರುದ್ಧ ಮೂರು ಬಾರಿ ವಿಮಾನಯಾನ ಸುರಕ್ಷತೆ ನಿಯಂತ್ರಕ ಡಿಜಿಸಿಎ ಕ್ರಮ ಜರುಗಿಸಿತ್ತು. ಮತ್ತೊಂದೆಡೆ, ಏರ್​ಏಷ್ಯಾ ಇಂಡಿಯಾ ಸಂಸ್ಥೆಯು ಪ್ರತಿಕ್ರಿಯಿಸಿ, ಡಿಜಿಸಿಎ ಆದೇಶವನ್ನು ಪರಿಶೀಲಿಸಲಾಗುತ್ತಿದೆ. ಜೊತೆಗೆ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಹ ಪರಿಗಣಿಸಲಾಗುತ್ತಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

2022ರ ನವೆಂಬರ್​ನಲ್ಲಿ ಮುಖ್ಯ ಬೇಸ್ ತಪಾಸಣೆಯ ನಂತರ ಪೈಲಟ್‌ಗಳ ತರಬೇತಿ ಅಭ್ಯಾಸಗಳಿಗೆ ಸಂಬಂಧಿಸಿದ ಸಂಶೋಧನೆಯನ್ನು ಡಿಜಿಸಿಎ ಗಮನಿಸಿದ್ದು, ಇದನ್ನು ನಾವು ಅಂಗೀಕರಿಸಿದ್ದೇವೆ ಎಂದು ಹೇಳಿತ್ತು.

ABOUT THE AUTHOR

...view details