ಕರ್ನಾಟಕ

karnataka

ಮಾಂಡೌಸ್​ ಚಂಡಮಾರುತಕ್ಕೆ 5 ಮಂದಿ ಬಲಿ; 10 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತ

By

Published : Dec 11, 2022, 11:23 AM IST

ತಮಿಳುನಾಡಿನಲ್ಲಿ ಮಾಂಡೌಸ್​ ಚಂಡಮಾರುತದ ಅಬ್ಬರ ಮುಂದುವರಿದಿದೆ. ಅಧಿಕ ಮಳೆಯಿಂದಾಗಿ 300 ಮನೆಗಳಿಗೆ ಹಾನಿಯಾಗಿ, 500 ಮರಗಳು ನೆಲಕ್ಕುರುಳಿವೆ. ಸೋಮವಾರ ಶಾಲಾ, ಕಾಲೇಜುಗಳಿಗೆ ಸರ್ಕಾರ ರಜೆ ನೀಡುವ ಸಾಧ್ಯತೆ ಇದೆ.

cyclone-mandous-effect
ಮಾಂಡೌಸ್​ ಚಂಡಮಾರುತ ರೌದ್ರತೆ

ಚೆನ್ನೈ(ತಮಿಳುನಾಡು):ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತದಿಂದ ಉಂಟಾಗಿರುವ ಮಾಂಡೌಸ್​ ಚಂಡಮಾರುತವು ತಮಿಳುನಾಡಿನ ಹಲವು ಭಾಗಗಳಲ್ಲಿ ಅಲ್ಲೋಕಲ್ಲೋಲ ಸೃಷ್ಟಿಸಿದೆ. ಭಾರಿ ಮಳೆ ಮತ್ತು ಅವಘಡಗಳಲ್ಲಿ ಈವರೆಗೂ 5 ಮಂದಿ ಸಾವನ್ನಪ್ಪಿದ್ದಾರೆ. 10 ಸಾವಿರಕ್ಕೂ ಹೆಚ್ಚು ಮಂದಿ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, 300 ಮನೆಗಳು ಭಾಗಶಃ ಅಥವಾ ಪೂರ್ಣ ಸ್ವರೂಪದಲ್ಲಿ ಹಾನಿಗೀಡಾಗಿವೆ.

ತಮಿಳುನಾಡಿನ ಕಾಂಚೀಪುರಂ, ಚೆಂಗಲ್ಪಟ್ಟು ಮತ್ತು ವಿಲ್ಲುಪುರಂ ಜಿಲ್ಲೆಗಳಲ್ಲಿ ಭಾನುವಾರವೂ ರೆಡ್ ಅಲರ್ಟ್ ಘೋಷಣೆ ಮುಂದುವರಿದಿದೆ. ತೀವ್ರ ಗಾಳಿ ಮತ್ತು ಮಳೆಯನ್ನು ಪರಿಗಣಿಸಿ ತಮಿಳುನಾಡು ಸರ್ಕಾರ ಸೋಮವಾರ ಶಾಲಾ-ಕಾಲೇಜುಗಳು, ಇತರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವ ಸಾಧ್ಯತೆಯಿದೆ.

ಬೇರು ಸಮೇತ ಕಿತ್ತು ಬಂದ ಬೃಹತ್​ ಮರ

300 ಮನೆ, 500 ಮರಗಳು ಧರಾಶಾಹಿ:ಚಂಡಮಾರುತದಿಂದ ಸುರಿಯುತ್ತಿರುವ ತೀವ್ರ ಮಳೆಗೆ 300 ಮನೆಗಳು ಭಾಗಶ: ಅಥವಾ ಪೂರ್ಣ ಪ್ರಮಾಣದಲ್ಲಿ ಹಾನಿಗೊಂಡರೆ, 500ಕ್ಕೂ ಅಧಿಕ ಮರಗಳು ಬೇರು ಸಮೇತ ಕಿತ್ತು ನೆಲಕ್ಕುರುಳಿವೆ. ಚೆನ್ನೈನ ಪ್ಯಾಂಥಿಯಾನ್ ರಸ್ತೆಯಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಬಂಕ್​ ಮೇಲೆ ಬೃಹತ್ ಆಲದ ಮರವೊಂದು ಬಿದ್ದು ಜಖಂಗೊಂಡಿತು. ಕಾರ್ಮಿಕರು ಪಂಪ್‌ ಮುಚ್ಚಿ ತೆರಳಿದ ಬಳಿಕ ಆಲದ ಮರ ಅಪ್ಪಳಿಸಿದ್ದು, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚೆನ್ನೈ ಮಹಾನಗರ ಪಾಲಿಕೆ ಸಿಬ್ಬಂದಿ ರಸ್ತೆ, ಮನೆಗಳ ಮೇಲೆ ಬಿದ್ದ ಮರಗಳನ್ನು ತುಂಡರಿಸಿ ತೆರವು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇದಕ್ಕೆ ಪೊಲೀಸರೂ ಜೊತೆಯಾಗಿದ್ದಾರೆ. ಚೆನ್ನೈ ಮತ್ತಿತರೆಡೆ 169 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಮಳೆ ನೀರಿನಿಂದ ತುಂಬಿಕೊಂಡ ರಸ್ತೆ

ಇದನ್ನೂ ಓದಿ:ಮಾಂಡೌಸ್ ಚಂಡಮಾರುತದ ಎಫೆಕ್ಟ್: ನಾಲ್ವರ ದುರ್ಮರಣ, ಧರೆಗುರುಳಿದ 400 ಮರಗಳು

ABOUT THE AUTHOR

...view details