ಪಾಟ್ನಾ(ಬಿಹಾರ): ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲ್ವೆ ನಿಲ್ದಾಣದ ಬಳಿ ನಡೆದ ರೈಲು ದುರಂತದಲ್ಲಿ ನಾಲ್ವರು ಸಾವನ್ನಪ್ಪಿ, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ದೆಹಲಿ - ಕಾಮಾಖ್ಯ ಎಕ್ಸ್ಪ್ರೆಸ್ನ ಆರು ಬೋಗಿಗಳು ಹಳಿತಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ಮತ್ತು ರೈಲ್ವೇ ದುರಸ್ಥಿ ಕಾರ್ಯ ಮುಂದುವರೆದಿದೆ. ರೈಲು ದುರಂತ ಪ್ರಕರಣವನ್ನು ವಿಶೇಷ ತಂಡ ತನಿಖೆ ನಡೆಸುತ್ತದೆ ಎಂದು ಪೂರ್ವ ಸೆಂಟ್ರಲ್ ರೈಲ್ವೆ ಜಿಎಂ ತರುಣ್ ಪ್ರಕಾಶ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪಘಾತ ನಡೆದ ಸ್ಥಳದಲ್ಲಿ ರೈಲ್ವೆ ಹಳಿಗಳು ಬೇರ್ಪಟ್ಟಿರುವುದು ಕಂಡುಬಂದಿದೆ. ಘಟನೆ ಹಿಂದೆ ದುಷ್ಕರ್ಮಿಗಳ ಕೈವಾಡ ಇರುವ ಸಾಧ್ಯತೆ ಇದೆ. ಈ ಸಂಬಂಧ ಪ್ರಕರಣವನ್ನು ವಿಶೇಷ ತಂಡದಿಂದ ತನಿಖೆ ನಡೆಸಲಾಗುವುದು. ರೈಲ್ವೇ ಇಲಾಖೆ ತನ್ನದೇ ಆದ ತನಿಖಾ ವಿಧಾನಗಳನ್ನು ಹೊಂದಿದೆ ಎಂದು ಹೇಳಿದರು.
ದುರಂತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಸ್ಥಳಕ್ಕೆ ಎರಡು ಕ್ರೇನ್ಗಳು ಆಗಮಿಸಿದ್ದು, ರೈಲ್ವೆ ಹಳಿಗಳನ್ನು ಮತ್ತೆ ಸ್ಥಾಪಿಸುವ ಕಾರ್ಯ ಭರದಿಂದ ಸಾಗಿದೆ. ಅಪಘಾತದ ಕುರಿತು ತನಿಖೆ ನಡೆಸಲು ಉನ್ನತ ತನಿಖಾ ತಂಡವನ್ನು ರಚಿಸಿದ್ದು, ಶೀಘ್ರದಲ್ಲೇ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಹಳಿ ತುಂಡಾಗಿತ್ತೋ ಅಥವಾ ಏನಾಗಿತ್ತು ಎಂಬ ಬಗ್ಗೆ ತನಿಖೆ ಬಳಿಕ ತಿಳಿದು ಬರಲಿದೆ ಎಂದು ತರುಣ್ ಪ್ರಕಾಶ್ ತಿಳಿಸಿದರು.
ಸ್ಥಳದಲ್ಲಿ ಕ್ರೇನ್ಗಳ ಮೂಲಕ ಎರಡು ಮಾರ್ಗಗಳ ಹಳಿಗಳನ್ನು ಸರಿಪಡಿಸಲಾಗುತ್ತಿದೆ. ರೈಲುಗಳನ್ನು ಮತ್ತೆ ಹಳಿಗೆ ತರಲಾಗುತ್ತಿದೆ. ಹಾನಿಗೀಡಾದ ಬೋಗಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಶೀಘ್ರದಲ್ಲೇ ರೈಲ್ವೇ ಹಳಿ ದುರಸ್ತಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇಲ್ಲಿನ ಪ್ರಯಾಣಿಕರಿಗೆ ತಮ್ಮ ಗಮ್ಯ ಸ್ಥಾನಕ್ಕೆ ತೆರಳಲು ಬಸ್ ವ್ಯವಸ್ಥೆ ಮತ್ತು ಬೇರೆ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ದುರಂತದಲ್ಲಿ ನಾಲ್ವರು ಸಾವು, 100ಕ್ಕೂ ಅಧಿಕ ಮಂದಿಗೆ ಗಾಯ: ಬಕ್ಸರ್ ರೈಲು ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, 100ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ. ಅಪಘಾತದ ಸಂದರ್ಭ ಕೆಲವರು ಮಲಗಿಕೊಂಡಿದ್ದರು, ಇನ್ನು ಕೆಲವರು ಮಲಗಲು ಸಿದ್ಧತೆ ನಡೆಸುತ್ತಿದ್ದರು.ರಘುನಾಥಪುರ ರೈಲ್ವೆ ನಿಲ್ದಾಣ ಬಳಿ ಅಪಘಾತ ಸಂಭವಿಸಿದೆ. ಸುತ್ತಲೂ ಕತ್ತಲೆ ಮತ್ತು ಧೂಳಿನಿಂದ ತುಂಬಿಕೊಂಡಿದ್ದರಿಂ ಪ್ರಯಾಣಿಕರಿಗೆ ಏನಾಗುತ್ತಿದೆ ಎಂಬುದು ಅರಿಯಲು ಸಾಧ್ಯವಾಗಿಲ್ಲ. ಅಪಘಾತದಲ್ಲಿ ಮೂರು ಬೋಗಿಗಳು ಪಲ್ಟಿಯಾಗಿದ್ದವು. ಬಳಿಕ ಸ್ಥಳಕ್ಕೆ ಆಗಮಿಸಿದ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿದವು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ : ಬಿಹಾರ ರೈಲು ದುರಂತದಲ್ಲಿ ಮಡಿದವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ನಾಯಕ ಸಂಸದ ರಾಹುಲ್ ಗಾಂಧಿ ಅವರು ಮೃತರ ಕುಟುಂಬಸ್ಥರಿಗೆ ಸಂತಾಪ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಬಿಹಾರದಲ್ಲಿ ನಡೆದ ರೈಲು ದುರಂತ ಅತ್ಯಂತ ನೋವಿನ ಸಂಗತಿ. ಘಟನೆಯಲ್ಲಿ ಹಲವರು ಸಾವನ್ನಪ್ಪಿದ್ದು, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬಸ್ಥರಿಗೆ ನಾನು ಸಂತಾಪ ಸೂಚಿಸುತ್ತೇನೆ. ಜೊತೆಗೆ ದುರಂತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.
2023ರ ಜೂನ್ ತಿಂಗಳಲ್ಲಿ ಒಡಿಶಾದ ಬಾಲಸೋರ್ನಲ್ಲಿ ನಡೆದ ರೈಲು ದುರಂತ ಬಳಿಕ ನಡೆದ ಎರಡನೇ ರೈಲು ದುರಂತ ಇದಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ರೈಲ್ವೇ ಇಲಾಖೆಯು ಹೊಣೆಗಾರಿಕೆ ಹೊರಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ :ಬಿಹಾರದಲ್ಲಿ ರೈಲು ದುರಂತ: ಹಳಿ ತಪ್ಪಿದ ಎಕ್ಸ್‌ಪ್ರೆಸ್ ರೈಲಿನ ಆರು ಬೋಗಿಗಳು: ನಾಲ್ವರ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ