ಕರ್ನಾಟಕ

karnataka

ಮತದಾನ ತಡೆಯಲು ಬಿಜೆಪಿ ಗಿಮಿಕ್​ ಆರೋಪ: ಕಾಂಗ್ರೆಸ್​ನಿಂದ ಚುನಾವಣಾ ಆಯೋಗಕ್ಕೆ ದೂರು

By

Published : Dec 6, 2022, 4:42 PM IST

ಗುಜರಾತ್​ ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಯೋಗೇಶ್ ರಾವಣಿ ಅವರು ಮುಖ್ಯ ಚುನಾವಣಾಧಿಕಾರಿ ಪಿ ಭಾರ್ತಿ ಅವರನ್ನು ಭೇಟಿ ಮಾಡಿ ಇಂದು ದೂರು ಸಲ್ಲಿಸಿದ್ದಾರೆ.

congress-complains-to-election-commission-against-bjp
ಮತದಾನ ತಡೆಯಲು ಬಿಜೆಪಿ ಗಿಮಿಕ್​ ಆರೋಪ ; ಕಾಂಗ್ರೆಸ್​ನಿಂದ ಚುನಾವಣಾ ಆಯೋಗಕ್ಕೆ ದೂರು

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆ 2022ರ ಎರಡು ಹಂತದ ಮತದಾನ ಪೂರ್ಣಗೊಂಡಿದ್ದು, ಡಿಸೆಂಬರ್ 8 ರಂದು ಫಲಿತಾಂಶವೂ ಬರಲಿದೆ. ಮತದಾನಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಲ್ಲಿ ಈಗಾಗಲೇ ಅಸಮಾಧಾನ ಕಂಡು ಬರುತ್ತಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಕಾಂಗ್ರೆಸ್ ಪಕ್ಷವು, ಎರಡನೇ ಹಂತದ ಮತದಾನದ ವೇಳೆ ಬಿಜೆಪಿಯು ವಿವಿಧ ತಂತ್ರಗಳನ್ನು ಅನುಸರಿಸಿದ್ದು, ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಮತಗಳು ಬಂದಿವೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಎರಡನೇ ಹಂತದ ಮತದಾನದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಬಿಜೆಪಿಯು ಮತದಾನ ತಡೆಯಲು ಒಟ್ಟು 36 ಕ್ಷೇತ್ರಗಳಲ್ಲಿ ನಾನಾ ತಂತ್ರಗಳನ್ನು ಅನುಸರಿಸಿರುವ ಬಗ್ಗೆ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಜನರು ಹೆಚ್ಚಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದರಿಂದ ಇಂತಹ ಮತದಾನ ತಡೆಯಲು ಬಿಜೆಪಿಯು ನಾನಾ ಗಿಮಿಕ್​ಗಳನ್ನು ಮಾಡಿದೆ. ನಕಲಿ ಮತದಾನ, ನಿಧಾನ ಮತದಾನ, ಬೂತ್​ ವಶಪಡಿಸಿಕೊಳ್ಳುವಿಕೆ ಸೇರಿದಂತೆ ನಾನಾ ರೀತಿಯ ತಂತ್ರಗಳನ್ನು ಮತದಾನದ ವೇಳೆ ಅನುಸರಿಸಿದೆ. ಈ ಬಗ್ಗೆ ಮತದಾರರೇ ಮಾಹಿತಿ ನೀಡಿರುವುದಾಗಿ ಕಾಂಗ್ರೆಸ್​ ನೀಡಿರುವ ತನ್ನ ದೂರಿನಲ್ಲಿ ಆರೋಪಿಸಿದೆ.

ಪ್ರಧಾನಿ ವಿರುದ್ಧ ಕಾಂಗ್ರೆಸ್‌ ದೂರು: ರಾನಿಪ್‌ನ ಮತಗಟ್ಟೆಯ ಬಳಿ 500 - 600 ಮೀಟರ್ ದೂರದಲ್ಲಿ ಪ್ರಧಾನಿ ಮೋದಿ ಅವರು ಕಾರು ನಿಲ್ಲಿಸಿ, ನೆರೆದಿದ್ದ ಜನರೊಂದಿಗೆ ನಡೆದರು. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಚುನಾವಣಾ ಸಮಿತಿ ಸಂಯೋಜಕ ಬಾಲುಭಾಯ್ ಪಟೇಲ್ ಆರೋಪಿಸಿದ್ದಾರೆ. ಈ ಬಗ್ಗೆ ಮೋದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಆಗ್ರಹಿಸಿದೆ.

ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಯೋಗೇಶ್ ರಾವಣಿ ಅವರು ಮುಖ್ಯ ಚುನಾವಣಾಧಿಕಾರಿ ಪಿ ಭಾರ್ತಿ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಚುನಾವಣಾ ಆಯೋಗ ಭರವಸೆ ನೀಡಿದೆ.

ಇದನ್ನೂ ಓದಿ:ಗುಜರಾತ್ ಚುನಾವಣೆಯಲ್ಲಿ ಗಮನ ಸೆಳೆದ ಪರಿಸರಸ್ನೇಹಿ ಮತಗಟ್ಟೆ

ABOUT THE AUTHOR

...view details