ಚೆನ್ನೈ(ತಮಿಳುನಾಡು): ಇಂದು ಎಐಎಡಿಎಂಕೆ ಪಕ್ಷದ ಮಹತ್ವದ ಜನರಲ್ ಕೌನ್ಸಿಲ್ ಸಭೆ ನಡೆಯುತ್ತಿದೆ. ಇದಕ್ಕೂ ಮುನ್ನ ಮದ್ರಾಸ್ ಹೈಕೋರ್ಟ್ ಈ ಸಭೆಗೆ ಸಮ್ಮತಿ ಸೂಚಿಸಿತ್ತು. ಈ ಮೂಲಕ ಪಕ್ಷದ ಇನ್ನೊಂದು ಬಣ ಒ.ಪನ್ನೀರಸೆಲ್ವಂಗೆ ಭಾರಿ ಹಿನ್ನಡೆಯಾಗಿದೆ. ಇದರಿಂದ ಆಕ್ರೋಶಗೊಂಡ ಒ.ಪನ್ನೀರಸೆಲ್ವಂ ಬೆಂಬಲಿಗರು ಇ.ಪಳನಿಸ್ವಾಮಿ ಕಾರ್ಯಕರ್ತರ ಜೊತೆ ಸಂಘರ್ಷಕ್ಕಿಳಿದರು.
ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿ ಹುದ್ದೆಯ ಆಯ್ಕೆ, ಸಂಯೋಜಕ ಮತ್ತು ಜಂಟಿ ಸಂಯೋಜಕ ಹುದ್ದೆಗಳನ್ನು ಪ್ರಸ್ತಾಪಿಸುವ ಸಭೆ ಇಂದು ನಡೆಯುತ್ತಿದೆ. ಇದಕ್ಕೂ ಮುನ್ನ ಚೆನ್ನೈನ ಎಐಎಡಿಎಂಕೆ ಕೇಂದ್ರ ಕಚೇರಿಯ ಹೊರಗೆ ಇಬ್ಬರು ನಾಯಕರ ಬೆಂಬಲಿಗರ ಮಧ್ಯೆ ಗಲಾಟೆ ನಡೆಯಿತು. ಒಂದೇ ಪಕ್ಷದ ನಾಯಕರಿಬ್ಬರ ಬೆಂಬಲಿಗರು ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದರು.
ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ಪ್ರಬಲ ಬಣಕ್ಕೆ ಎಐಎಡಿಎಂಕೆ ಪಕ್ಷದ ನಾಯಕತ್ವ ಸಿಕ್ಕಿದೆ. ಆದ್ರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪನ್ನೀರಸೆಲ್ವಂ ಬಣ ಎಐಎಡಿಎಂಕೆ ಕಚೇರಿ ಹೊರಗೆ ಸಂಘರ್ಷಕ್ಕಿಳಿಯಿತು.